ಶನಿವಾರ, ಏಪ್ರಿಲ್ 1, 2023
23 °C
ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ

ಕೋವಿಡ್ ಲಸಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಸುಣ್ಣ, ಗುಜರಾತ್‌ಗೆ ಬೆಣ್ಣೆ -ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೇಂದ್ರ ಸರ್ಕಾರ ಕೋವಿಡ್‌ ಲಸಿಕೆ ವಿಚಾರದಲ್ಲಿ ಗುಜರಾತ್‌ ರಾಜ್ಯಕ್ಕೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ ಎಂಬ ನಿಲುವು ತಾಳಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಗುಜರಾತ್‌ ರಾಜ್ಯಕ್ಕೆ ಅತಿ ಹೆಚ್ಚು ಲಸಿಕೆ ಪೂರೈಸಿದರೆ, ರಾಜ್ಯಕ್ಕೆ ಬೇಡಿಕೆಯಷ್ಟು ಪೂರೈಸುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಕೋವಿಡ್‌ನಿಂದ ಮೃತ‍ರಾದವರ ಕುಟುಂಬಗಳಿಗೆ ನ್ಯಾಯ ಕೊಡಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಸೋಂಕು ತಗುಲಿದವರಿಗೆ ಬೆಡ್‌ಗಳನ್ನು ಒದಗಿಸಲು, ಆಮ್ಲಜನಕ ಹಾಗೂ ಔಷಧ ಪೂರೈಸಲು ಆಗಲಿಲ್ಲ. ಮೃತರ ಕುಟುಂಬಗಳಿಗೆ ಪರಿಹಾರ ಕೊಡಲಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್‌ ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸರ್ಕಾರ ಘೋಷಿಸಿದ ಆರ್ಥಿಕ ನೆರವು ಅರ್ಹರಿಗೆ ತಲುಪಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಬೇಕಿದೆ. ಹಾಗೆಯೇ ಕಡಲಿಗಿಳಿಯುವ ಮುನ್ನ ಮೀನುಗಾರರಿಗೆ ಲಸಿಕೆ ಹಾಕಬೇಕಿದೆ. ಆದರೆ, ರಾಜ್ಯದಲ್ಲಿ ಅಗತ್ಯ ಪ್ರಮಾಣದ ಲಸಿಕೆಯೇ ಲಭ್ಯವಿಲ್ಲ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ ಇದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಲಭ್ಯವಾಗತ್ತಿದೆ. ಜನರು ಹಣಕೊಟ್ಟು ಲಸಿಕೆ ಖರೀದಿಸುವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.

ಸರ್ಕಾರಕ್ಕೆ ಮೀನುಗಾರರ ಬಗ್ಗೆ ಕಾಳಜಿ ಇಲ್ಲ. ರಾಜ್ಯದಲ್ಲಿ 3 ಲಕ್ಷ ಮೀನುಗಾರರಿದ್ದರೂ ಕೇವಲ 18 ಸಾವಿರ ಮಂದಿಗೆ ಮಾತ್ರ ಸಹಾಯಧನದ ಪ್ಯಾಕೇಜ್‌ ಘೋಷಿಸಿರುವುದು ಖಂಡನೀಯ. ಸಮುದ್ರದಲ್ಲಿ ಬಲೆ ಬೀಸುವವರು ಮಾತ್ರ ಮೀನುಗಾರರಲ್ಲ; ರಸ್ತೆ ಬದಿ ಮೀನು ಮಾರುವವರು, ಮತ್ಸ್ಯೋದ್ಯಮಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರೂ ಮೀನುಗಾರರು. ಇವರನ್ನೆಲ್ಲ ಅಸಂಘಟಿತ ಕಾರ್ಮಿಕರ ವರ್ಗಕ್ಕೆ ಸೇರಿಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕರಾವಳಿಯ ಮೀನುಗಾರರ ಸಮಸ್ಯೆಗಳನ್ನು ಆಲಿಸಿದ್ದು, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬುಧವಾರ ಉತ್ತರ ಕನ್ನಡ ಜಿಲ್ಲೆಗೆ ಭೇಟಿನೀಡಲಿದ್ದು, ಅಹವಾಲು ಆಲಿಸುತ್ತೇನೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವ ನಾರಾಯಣ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಎಐಸಿಸಿ ಕಾರ್ಯದರ್ಶಿ ವಿ.ಮೋಹನ್‌, ಮುಖಂಡರಾದ ಗೋಪಾಲ್ ಪೂಜಾರಿ, ನಿವೇದಿತಾ ಆಳ್ವ, ವೆರೊನಿಕಾ ಕರ್ನೆಲಿಯೊ, ಜಿಲ್ಲಾ ವಕ್ತಾರರಾದ ಭಾಸ್ಕರ್ ರಾವ್ ಕಿದಿಯೂರು ಹಾಗೂ ಬಿಪಿನ್ ಚಂದ್ರ ಪಾಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು