ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ಕೊಲೆ ಪ್ರಕರಣ: ಆರೋಪಿ ದೋಷಿ

ಫೆ.14ರಂದು ಶಿಕ್ಷೆಯ ಪ್ರಮಾಣ ಪ್ರಕಟ: ತೀರ್ಪು ಪ್ರಕಟಿಸಲಿರುವ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶ ಜೆ.ಎನ್‌.ಸುಬ್ರಹ್ಮಣ್ಯ
Last Updated 11 ಫೆಬ್ರುವರಿ 2021, 12:33 IST
ಅಕ್ಷರ ಗಾತ್ರ

ಉಡುಪಿ: 6 ವರ್ಷಗಳ ಹಿಂದೆ ಪುಟ್ಟ ಮಕ್ಕಳ ಕಣ್ಣೆದುರೇ ಅತ್ತೆ ಹಾಗೂ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯ ಮೇಲಿನ ಆಪಾದನೆಗಳು ಸಾಬೀತಾಗಿದ್ದು ಫೆ.14ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜೆ.ಎನ್‌.ಸುಬ್ರಹ್ಮಣ್ಯ ಅವರು ಸಂಜಯ್‌ ದತ್‌ (44) ಮೇಲಿನ ಆರೋಪಗಳು ಸಾಬೀತಾಗಿದ್ದು, ದೋಷಿ ಎಂದು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.

ಪ್ರಕರಣದ ಹಿನ್ನೆಲೆ:

ಏ.30, 2015ರಂದು ರಾತ್ರಿ 10.30ಕ್ಕೆ ಚಿಟ್ಪಾಡಿಯ ಕಸ್ತೂರಬಾ ನಗರದಲ್ಲಿ ಸಂಜಯ್ ದತ್‌ ಎಂಬಾತ ಪತ್ನಿ ಅರ್ಚನಾ ಮೇಲೆ ಕತ್ತಿಯಿಂದ ಹಲ್ಲೆಗೆ ಮುಂದಾದಾಗ ಅತ್ತೆ ನಿರ್ಮಲಾ ಅಡ್ಡ ಬಂದು ತಡೆಯಲು ಯತ್ನಿಸಿದ್ದರು. ಈ ಸಂದರ್ಭ ಕೋಪಗೊಂಡ ಸಂಜಯ್‌ ದತ್‌ ಅತ್ತೆಯ ಮೇಲೆ ಕತ್ತಿ ಬೀಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಬಳಿಕ ಪತ್ನಿ ಅರ್ಚನಾಗೂ ಮನಬಂದಂತೆ ಕತ್ತಿಯಿಂದ ಇರಿದಿದ್ದ. ಹಲ್ಲೆ ತಡೆಯಲು ಬಂದ ಸಂಬಂಧಿಗಳ ಮೇಲೂ ದಾಳಿ ಮಾಡಿ ಪರಾರಿಯಾಗಿದ್ದ.

ಆರೋಪಿಯ ಪೈಶಾಚಿಕ ಕೃತ್ಯಗಳು ಮೂವರು ಚಿಕ್ಕ ಮಕ್ಕಳ ಕಣ್ಣೆದುರಿಗೇ ನಡೆದಿತ್ತು. ಘಟನೆಯಲ್ಲಿ ಅತ್ತೆ ನಿರ್ಮಲಾ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಅರ್ಚನಾ ಚಿಕಿತ್ಸೆಗೆ ಸ್ಪಂದಿಸದೆ ಮಣಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವಳಿ ಕೊಲೆ ನಡೆದ ಮರುದಿನವೇ ಸಂಜಯ್‌ದತ್‌ನನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಅಂದಿನ ಉಡುಪಿ ಸರ್ಕಲ್ ಇನ್‌ಸ್ಪೆಕ್ಟರ್‌ ಕೆ.ಶ್ರೀಕಾಂತ್‌ ಜುಲೈ 14, 2015ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸುಮಾರು 6 ವರ್ಷಗಳ ಕಾಲ ವಿಚಾರಣೆ ನಡೆದು, 44 ಸಾಕ್ಷಿಗಳ ಪೈಕಿ 25 ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಂಡ ನ್ಯಾಯಾಧೀಶರು ಆರೋಪಿಯ ಕೃತ್ಯಗಳು ಸಾಬೀತಾಗಿವೆ ಎಂದು ಘೋಷಿಸಿದ್ದಾರೆ.

ಆರೋಪಿ ಜಾಮೀನಿಗಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದರೂ ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಪ್ರಕಟವಾಗುವ ಶಿಕ್ಷೆಯ ಪ್ರಮಾಣದ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಿದರು. ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಕೆ.ಜಯಂತಿ ಹಾಗೂ ಬದರಿನಾಥ ನಾಯರಿ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT