ಭಾನುವಾರ, ನವೆಂಬರ್ 29, 2020
22 °C

‘ಎಂಡೋಸಲ್ಫಾನ್ ಪೀಡಿತರ ಪುನರ್ವಸತಿ ಕೇಂದ್ರಕ್ಕೆ ಅನುದಾನ ಕೊಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕುಂದಾಪುರ ತಾಲ್ಲೂಕಿನ ನಾಡಾ ಗ್ರಾಮ ಪಂಚಾಯ್ತಿಯಲ್ಲಿ ಮೀಸಲಿಟ್ಟಿರುವ ಜಮೀನಿನಲ್ಲಿ ಎಂಡೋ ಸಲ್ಫಾನ್ ಪೀಡಿತರ ಪುನರ್ವಸತಿ ಕೇಂದ್ರ ನಿರ್ಮಿಸಲು ಅನುದಾನ ಮಂಜೂರು ಮಾಡಬೇಕು ಸೇರಿದಂತೆ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಕೋಣಿ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಎಂಡೋ ಸಲ್ಫಾನ್ ಪೀಡಿತರ ಪುನರ್ವಸತಿ ಕೇಂದ್ರ ನಿರ್ಮಾಣ ಹಾಗೂ ಸಲಕರಣೆಗಳಿಗೆ ಸರ್ಕಾರಕ್ಕೆ ₹ 11 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಇದುವರೆಗೂ ಅನುದಾನ ಮಂಜೂರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಂಡೋಸಲ್ಫಾನ್ ಪೀಡಿತರಿಗೆ ನೀಡುತ್ತಿರುವ ಸಹಾಯಧನ ಕ್ರಮವಾಗಿ ₹1,500ದಿಂದ 3,000, 3,000ರಿಂದ 6,000ಕ್ಕೆ ಏರಿಸಬೇಕು. ಬುದ್ದಿಮಾಂಧ್ಯ ಹಾಗೂ ಅಂಗವಿಕಲರನ್ನು ನೋಡಿಕೊಳ್ಳುವ ಪೋಷಕರಿಗೆ ಕನಿಷ್ಠ ₹ 3,000 ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತರಿಗೆ ಖಾಸಗಿ ಬಸ್‌ಗಳಲ್ಲಿ ಶೇ 50ರಷ್ಟು ರಿಯಾಯಿತಿ, ಅಂತ್ಯೋದಯ ಕಾರ್ಡ್‌ ಸೌಲಭ್ಯ, ಅಂಗವಿಕಲರ ಭವನ ನಿರ್ಮಾಣಕ್ಕೆ ಜಾಗ ಮೀಸಲಿಡಬೇಕು. ಜಿಲ್ಲಾಮಟ್ಟದ ಸಮಿತಿಗೆ ಅಂಗವಿಕಲರ ಪೋಷಕರನ್ನು ನೇಮಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಹೆಬ್ಬಾರ್, ಕಾರ್ಯದರ್ಶಿ ಕೃಷ್ಣ ಪೂಜಾರಿ, ಸಹ ಕಾರ್ಯದರ್ಶಿ ನಾರಾಯಣ ಶೇರಿಗಾರ, ಕೋಶಾಧಿಕಾರಿ ಬಾಬು ದೇವಾಡಿಗ, ಗಣಪತಿ ಪೂಜಾರಿ, ಇಂದಿರಾ ಹೆಗ್ಡೆ ಪ್ರತಿಭಟನೆಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.