ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರ್ಡೂರು ಅನಂತಪದ್ಮನಾಭ ದೇಗುಲ ಜೀರ್ಣೋದ್ಧಾರ: ₹50 ಕೋಟಿ ಅನುದಾನಕ್ಕೆ ಪ್ರಸ್ತಾವ

Last Updated 15 ನವೆಂಬರ್ 2022, 5:31 IST
ಅಕ್ಷರ ಗಾತ್ರ

ಹಿರಿಯಡಕ: ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ, ವಿವಿಧ ಸಮಿತಿ ರಚನೆ ಕುರಿತಂತೆ ಸಮಾಲೋಚಿಸಲು ದೇವಸ್ಥಾನದಲ್ಲಿ ಗ್ರಾಮಸ್ಥರ, ಭಕ್ತರ ಸಭೆ ಭಾನುವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ‘ಈಗಾಗಲೇ ಅಷ್ಟಮಂಗಲ ಪ್ರಶ್ನೆ ಮೂಲಕ ದೇವಳದ ಜೀರ್ಣೋದ್ಧಾರ, ಪುನರ್‌ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ದೇವಳದ ಗರ್ಭಗುಡಿ, ತೀರ್ಥಮಂಟಪ, ಸುತ್ತುಪೌಳಿ, ತೀರ್ಥ ಸರೋವರ ಸೇರಿದಂತೆ ಪ್ರಥಮ ಹಂತದ ಜೀರ್ಣೋದ್ಧಾರಕ್ಕೆ ಸುಮಾರು ₹ 30 ಕೋಟಿಗಳ ಅನುದಾನ ಮತ್ತು ಯಾತ್ರಿನಿವಾಸ, ಕಲ್ಯಾಣಮಂಟಪ ಸೇರಿದಂತೆ ದ್ವಿತೀಯ ಮತ್ತು ತೃತೀಯ ಹಂತದ ನವೀಕರಣಕ್ಕಾಗಿ ಒಟ್ಟು ₹ 50 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಊರು ಮತ್ತು ಪರವೂರಿನಲ್ಲಿ ಸಮಿತಿಗಳನ್ನು ರಚಿಸಿ, ದಾನಿಗಳಿಂದ ಸಹಕಾರವನ್ನು ಕೋರಲಾಗುವುದು. ಜಾತಿ, ಮತ, ಭೇದವಿಲ್ಲದೆ ದೇವಳದ ಜೀರ್ಣೋದ್ಧಾರವನ್ನು ಪ್ರಧಾನ ಗುರಿಯಾಗಿಸಿ ಎಲ್ಲರೂ ದುಡಿಯೋಣ’ ಎಂದರು.

ದೇವಳದ ತಂತ್ರಿಗಳಾದ ಕುಕ್ಕಿಕಟ್ಟೆ ವಿಠಲ ತಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ‘800 ವರ್ಷಗಳ ಬಳಿಕ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಯೋಗ ನಮಗೆ ಒಲಿದಿದ್ದು, ಈಗಾಗಲೇ ಅಷ್ಟಮಂಗಲ ಪ್ರಶ್ನೆಯ ಮೂಲಕ ಸೂಚಿಸಿದ ದೋಷಗಳ ಪರಿಹಾರ ಕಾರ್ಯ ನಡೆಸಲಾಗಿದೆ. ದೇವರ ಕಾರ್ಯವನ್ನು ನಮ್ಮ ಮನೆ ಕೆಲಸ ಎಂಬಂತೆ ಅವಮಾನ, ಕಷ್ಟಗಳನ್ನು ಕಡೆಗಣಿಸಿ ಪುನರ್ ನಿರ್ಮಾಣ ಕಾರ್ಯವನ್ನು ಯಶಸ್ವಿಗೊಳಸಿ ದೇವರ ಕೃಪೆಗೆ ಪಾತ್ರರಾಗೋಣ’ ಎಂದರು.

ಪರ್ಯಾಯ ಅರ್ಚಕ ರಘುಪ್ರಸಾದ ಅಡಿಗ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಿಯಾನಂದ ಹೆಗ್ಡೆ, ಪೆರ್ಡೂರು ಪಂಚಾಯಿತಿ ಅಧ್ಯಕ್ಷ ದೇವು ಪೂಜಾರಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಸೇರ್ವೇಗಾರ್, ಉದ್ಯಮಿ ಸುಭಾಶ್ಚಂದ್ರ ಹೆಗ್ಡೆ, ಪ್ರಕಾಶ್ ಹೆಗ್ಡೆ, ಶ್ರೀಪಾದ ರೈ, ಸಂಜೀವ ಹೆಗ್ಡೆ, ವಸಂತ್ ಕುಮಾರ್ ಶೆಟ್ಟಿ ಇದ್ದರು.

ದೇವಳದ ಮುಖ್ಯ ಕಾರ್ಯ ನಿರ್ವಹಣಾಕಾರಿ ರಾಜಗೋಪಾಲ ಉಪಾಧ್ಯಾಯ ಸ್ವಾಗತಿಸಿದರು. ಸಂದೇಶ್ ಕುಮಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT