ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಣಿಗ ಕೊಲೆ ಪ್ರಕರಣ: ತನಿಖೆಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಗ್ರಹ

ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿಗೆ ಒತ್ತಾಯ
Last Updated 7 ಜೂನ್ 2021, 5:06 IST
ಅಕ್ಷರ ಗಾತ್ರ

ಕುಂದಾಪುರ: ಶನಿವಾರ ರಾತ್ರಿ ನಡೆದಿರುವ ಉದಯ ಗಾಣಿಗರ ಕೊಲೆ ಪ್ರಕರಣ ಪೂರ್ವಯೋಜಿತ ಸಂಚು, ಇದರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಮಾತ್ರವಲ್ಲದೆ, ಇನ್ನೂ ಸಾಕಷ್ಟು ಪ್ರಭಾವಿ ಮುಂಖಡರು ಭಾಗಿಯಾಗಿರುವ ಶಂಕೆ ಇದೆ. ಪೊಲೀಸ್ ಇಲಾಖೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಗ್ರಹಿಸಿದ್ದಾರೆ.

ಇಲ್ಲಿಗೆ ಸಮೀಪದ ಕಟ್‌ಬೇಲ್ತೂರಿನ ತಮ್ಮ ನಿವಾಸದಲ್ಲಿ ಭಾನುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೊಳವೆ ಬಾವಿ ತೆರೆಯುವ ಸಂದರ್ಭದಲ್ಲಿ ಉಂಟಾದ ವಿವಾದವೇ ಈ ಘಟನೆಗೆ ಕಾರಣ ಎಂಬ ಅಭಿಪ್ರಾಯ ಸಾರ್ವಜನಿಕರದು. ಗ್ರಾಮ ಪಂಚಾಯಿತಿ ಜನರ ಸಹಕಾರಕ್ಕೆ ಇರಬೇಕು,ಜನರ ಮೇಲೆ ದಬ್ಬಾಳಿಕೆಮಾಡೋದಕ್ಕೆ ಅಲ್ಲ. ಜನರಿಗೆ ರಕ್ಷಣೆ ನೀಡಬೇಕಾದ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಪ್ರಕರಣದಲ್ಲಿ ಭಾಗಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೋವಿಡ್‌ ಸೋಂಕು ನಿಯಂತ್ರಣ ಮಾಡಲು ಸಾರ್ವಜನಿಕರ ಸಹಕಾರ ಇರಲಿ ಎನ್ನುವ ಕಾರಣಕ್ಕಾಗಿ ರಚಿಸಲಾಗಿರುವ ಕಾರ್ಯಪಡೆಗಳ ಹೆಸರಿನಲ್ಲಿ ಬಿಜೆಪಿ ಪಕ್ಷದ ಮುಖಂಡರು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಈ ಕುರಿತು ನಾನು ಹಾಗೂ ಮಾಜಿ ಸಚಿವ ವಿನಯಕುಮಾರ ಸೊರಕೆ ಜಿಲ್ಲಾಧಿಕಾರಿ ಗಮನಕ್ಕೆತಂದಿದ್ದೇವೆ. ಉದಯ್ ಗಾಣಿಗರ ಹತ್ಯೆ ಪ್ರಕರಣಕ್ಕೂ ಪರೋಕ್ಷವಾಗಿ ಇದು ಕಾರಣ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಉದಯ ಗಾಣಿಗರ ಪತ್ನಿ ಹಾಗೂ ಅವರನ್ನು ಆಸ್ಪತ್ರೆಗೆ ಸೇರಿಸಿರುವವರ ಹೇಳಿಕೆಗಳ ಹಿನ್ನೆಲೆಯಲ್ಲಿ ಸಮಗ್ರತನಿಖೆ ನಡೆಯಬೇಕು. ಅನ್ಯಾಯವನ್ನು ಪ್ರಶ್ನೆ ಮಾಡದವರನ್ನೇ ಹತ್ಯೆ ಮಾಡುವ ಮನಃಸ್ಥಿತಿಯವರು ಗ್ರಾಮ
ಪಂಚಾಯಿತಿ ಹುದ್ದೆಯಲ್ಲಿ ಮುಂದುವರೆಯದೆ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಬೇಕು ಎಂದರು.

ಕೃಷಿ ಕೇಂದ್ರದಲ್ಲಿ ಕೃಷಿಕರಿಗೆ ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತಿದ್ದ ಪ್ರಾಮಾಣಿಕ ಸಮಾಜ ಸೇವಕ ಉದಯ್ ಗಾಣಿಗರ ಹತ್ಯೆ ನಡೆಸಿರುವ ಕೊಲೆಗಾರರಿಗೆ ಅವರ ಪತ್ನಿ ಮಕ್ಕಳ ನೆನಪಾಗಿಲ್ಲವೇ ? ಎಂದು ಪ್ರಶ್ನೆ ಮಾಡಿರುವ ಅವರು, ತನಿಖೆ ಕುರಿತು ಈಗಾಗಲೇ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಜತೆಗೆ ಮಾತನಾಡಿದ್ದೇನೆ. ನಿಷ್ಪಕ್ಷಪಾತ ತನಿಖೆಗೆ ಬಗ್ಗೆ ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಶರತಕುಮಾರ್ ಶೆಟ್ಟಿ ಕಟ್‌ಬೇಲ್ತೂರು ಇದ್ದರು.

ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ಕುಂದಾಪುರ: ಯಡಮೊಗೆ ಉದಯ ಗಾಣಿಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ತಾಲ್ಲೂಕು ಗಾಣಿಗ ಸೇವಾ ಸಂಘ ನಿಷ್ಪಕ್ಷಪಾತ ತನಿಖೆಗೆ ನಡೆಸುವಂತೆ ಒತ್ತಾಯಿಸಿ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿತು.

ಯಡಮೊಗೆ ಮೃತ ಉದಯ ಗಾಣಿಗ ಅವರ ಮನೆಗೆ ಬಂದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಗಾಣಿಗ ಸಮಾಜದ ನಿಯೋಗದ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಭಾಕರ ಬಿ ಕುಂಭಾಶಿ ಅವರು ಮಾತನಾಡಿ, ಮಾತುಕತೆಗೆ ಕರೆದು ಕೊಲೆ ಮಾಡುದ ಸಂಸ್ಕೃತಿ ನಮ್ಮದ್ದಲ್ಲ. ಕೃತ್ಯದಲ್ಲಿ ಭಾಗಿಯಾದ ಎಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು.ನಮಗೆ ನ್ಯಾಯ ಸಿಗಲಿಲ್ಲ ಎಂದರೆ ಖಂಡಿತವಾಗಿ ಹೋರಾಟಕ್ಕೆ ಇಳಿಯುತ್ತವೆ ಎಂದರು.

ಸಂಘದ ಗೌರವಾಧ್ಯಕ್ಷ ಕೆ.ಎಂ. ಲಕ್ಷ್ಮಣ್, ಕಾರ್ಯದರ್ಶಿ ನಾಗರಾಜ ಗಾಣಿಗ ಬಸ್ರೂರು, ಕೋಶಾಧಿಕಾರಿ ನಾಗರಾಜ ಗಾಣಿಗ ಹಿಲ್ಕೋಡು, ಉಪಾಧ್ಯಕ್ಷರಾದ ರವಿ ಗಾಣಿಗ ಆಜ್ರಿ, ಹಾಲಾಡಿ ಸೀತಾರಾಮ್ ಗಾಣಿಗ, ಮಾಜಿ ಅಧ್ಯಕ್ಷ ಕೊಗ್ಗ ಗಾಣಿಗ, ಆಡಳಿತ ಮಂಡಳಿಯ ಸದಸ್ಯರಾದಚಂದ್ರಶೇಖರ ಬೀಜಾಡಿ, ಸುಬ್ರಹ್ಮಣ್ಯ ಜಿ.ಉಪ್ಪೂಂದ, ರವಿ ಗಾಣಿಗ ಕೆಂಚನೂರು, ಬೈಂದೂರು ವಲಯ ಗಾಣಿಗ ಸಂಘದ ಅಧ್ಯಕ್ಷ ಗಣೇಶ್ ಉಪ್ಪುಂದ ಇದ್ದರು.

ವೈಯಕ್ತಿಕ ದ್ವೇಷ ಹಿನ್ನೆಲೆ ಕೊಲೆ: ಗ್ರಾ.ಪಂ. ಅಧ್ಯಕ್ಷನ ಬಂಧನ

ಸಿದ್ದಾಪುರ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಯಡಮೊಗೆ ಹೊಸಬಾಳು ನಿವಾಸಿ ಉದಯ ಗಾಣಿಗ ಎಂಬುವವರಿಗೆ ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಅವರನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಉದಯ ಗಾಣಿಗ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಪ್ರಕರಣದ ಆರೋಪಿಗೆ ಉಳ್ಳೂರು -74 ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಆಶ್ರಯ ನೀಡಿದ್ದು, ಅವರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ಶನಿವಾರ ರಾತ್ರಿ 8 ಗಂಟೆಗೆ ಉದಯ ಗಾಣಿಗ ಅವರು ಮನೆ ಎದುರು ನಿಂತಿದ್ದ ವೇಳೆ ಏಕಾಏಕಿ ಕಾರು ಡಿಕ್ಕಿ ಹೊಡೆಸಿ ಚಲಾಯಿಸಿದ ಪರಿಣಾಮ ಗಂಭೀರ ಗಾಯಗೊಂಡು ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಅನ್ಯಾಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಉದಯ ಗಾಣಿಗ ಪೋಸ್ಟ್‌ ಹಾಕಿದ್ದರು. ಈ ಕಾರಣದಿಂದ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್‌ ಹಾಗೂ ಉದಯ ಮಧ್ಯೆ ವೈಯಕ್ತಿಕ ದ್ವೇಷ ಇತ್ತು ಎನ್ನಲಾಗಿದೆ. ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ಉದಯ್‌ ವಿವಾಹಿತರು. ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT