ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕೂಳು ಬೆಳೆದವರ ಗೋಳು ಕೇಳಿ

ಕ್ವಿಂಟಲ್‌ ಭತ್ತಕ್ಕೆ ₹ 2,500 ಬೆಂಬಲ ಬೆಲೆ ಕೊಡಿ: ಸರ್ಕಾರಕ್ಕೆ ಕರಾವಳಿ ರೈತರ ಒಕ್ಕೊರಲ ಆಗ್ರಹ
Last Updated 4 ನವೆಂಬರ್ 2021, 3:28 IST
ಅಕ್ಷರ ಗಾತ್ರ

ಉಡುಪಿ: ಅತಿವೃಷ್ಟಿ, ಕೂಲಿಯಾಳುಗಳ ಸಮಸ್ಯೆ, ಕಟಾವು ಯಂತ್ರಗಳ ದುಬಾರಿ ಬಾಡಿಗೆ, ಮಾರುಕಟ್ಟೆಯಲ್ಲಿ ದರ ಕುಸಿತ, ದಲ್ಲಾಳಿಗಳ ಕಾಟ, ಕಾಡು ಪ್ರಾಣಿಗಳ ಉಪಟಳ, ಹೀಗೆ ಸವಾಲುಗಳ ಮಧ್ಯೆ ಕರಾವಳಿಯಲ್ಲಿ ಭತ್ತ ಬೆಳೆಯಬೇಕಾದ ಸಂದಿಗ್ಧತೆ ರೈತರದ್ದು. ಸರಿ, ಇಷ್ಟೆಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಭತ್ತ ಬೆಳೆದರೂ, ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಇಲ್ಲ. ಲಾಭದ ಮಾತಿರಲಿ, ಕೃಷಿಗೆ ವ್ಯಯಿಸಿರುವ ಖರ್ಚು ಕೂಡ ಅನ್ನದಾತರ ಕೈಸೇರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭತ್ತಕ್ಕಿಲ್ಲ ಬೆಲೆ:ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 36,000 ಹೆಕ್ಟೇರ್ ಅಂದರೆ 90,000 ಎಕರೆಯಲ್ಲಿ ಭತ್ತದ ಕೃಷಿ ನಡೆದಿದೆ. ಹಡಿಲು ಭೂಮಿ ಕೃಷಿ ಅಭಿಯಾನ ಹಾಗೂ ಕೋವಿಡ್‌ನಿಂದಾಗಿ ಹೊರ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ದುಡಿಯುತ್ತಿದ್ದವರು ತವರಿಗೆ ಬಂದು ಕೃಷಿ ಮಾಡಿದ್ದರಿಂದ ಈ ವರ್ಷ ಭತ್ತದ ಕೃಷಿ ಹೆಚ್ಚಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಭತ್ತದ ದರ ತೀವ್ರ ಕುಸಿತವಾಗಿರುವ ಪರಿಣಾಮ, ಕೃಷಿಯತ್ತ ಮುಖಮಾಡಿದ್ದ ಯುವಕರು ಮತ್ತೆ ಕೃಷಿಗೆ ಬೆನ್ನು ತೋರಿಸುವಂತಾಗಿದೆ. ಹಡಿಲು ಬಿದ್ದಿದ್ದ ಭೂಮಿಯಲ್ಲಿ ಕೃಷಿ ಮಾಡಿದ್ದ ರೈತರೂ ಮತ್ತೆ ಕೃಷಿಯಿಂದ ವಿಮುಖರಾಗುವತ್ತ ಯೋಚಿಸುವಂತಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಕರಾವಳಿಯಲ್ಲಿ ಬೇಡಿಕೆ ಇರುವ ಎಂಒ–4 ಭತ್ತಕ್ಕೆ ಕ್ವಿಂಟಲ್‌ಗೆ ₹ 1,500 ರಿಂದ ₹ 1,600 ದರವಿದೆ. ಇದು ಮೇಲ್ನೋಟಕ್ಕೆ ಕಾಣುವ ದರವಷ್ಟೆ. ಭತ್ತದಲ್ಲಿ ತೇವಾಂಶ ಕಾರಣವೊಡ್ಡಿ ಮಿಲ್ ಮಾಲೀಕರು ಚೀಲ ಭತ್ತಕ್ಕೆ ಐದಾರು ಕೆ.ಜಿ ಕಡಿತಗೊಳಿಸುತ್ತಿದ್ದಾರೆ. ಅಂದರೆ, ಅಸಲಿಗೆ ರೈತರಿಗೆ ಸಿಗುತ್ತಿರುವುದು ಕ್ವಿಂಟಲ್‌ಗೆ 1,400 ರಿಂದ 1,450 ಮಾತ್ರ. ಈ ಬೆಲೆಗೆ ಭತ್ತ ಮಾರಾಟ ಮಾಡಿ ಖರ್ಚು ಸರಿದೂಗಿಸುವುದು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ ರೈತರು.

ಗದ್ದೆ ಉಳುಮೆ, ಬಿತ್ತನೆ ಬೀಜ, ನಾಟಿ, ರಸಗೊಬ್ಬರ, ಕಳೆ, ಕೊಯ್ಲು, ಕೂಲಿ ಹಾಗೂ ಭೂಮಿ ಬಾಡಿಗೆ ಸೇರಿ ಒಂದು ಎಕರೆ ಭತ್ತದ ಕೃಷಿಗೆ ₹ 30,000 ಖರ್ಚಾಗುತ್ತಿದೆ. ಎಕರೆಗೆ 15 ರಿಂದ 20 ಕ್ವಿಂಟಲ್‌ ಭತ್ತ ಬೆಳೆದರೂ ಮಾಡಿದ ಖರ್ಚು ಸಿಗುವುದಿಲ್ಲ. ಹೀಗಿರುವಾಗ ಕೃಷಿ ಮಾಡುವುದು ಹೇಗೆ, ರೈತನ ಶ್ರಮಕ್ಕೆ ಬೆಲೆಯೇ ಇಲ್ಲವೇ ಎನ್ನುತ್ತಾರೆ ರೈತ ಮುಖಂಡರಾದ ಕೆ.ಶಿವಮೂರ್ತಿ.

ಸರ್ಕಾರ ಖರೀದಿ ಕೇಂದ್ರಗಳ ಮೂಲಕ ಕ್ವಿಂಟಲ್ ಭತ್ತಕ್ಕೆ ₹ 1,940 ಬೆಂಬಲ ಬೆಲೆ ಕೊಡುವುದಾಗಿ ಹೇಳುತ್ತಿದೆ. ಕರಾವಳಿಯಲ್ಲಿ ಭತ್ತ ಕಟಾವು ಮುಗಿಯುವ ಹಂತಕ್ಕೆ ಬರುತ್ತಿದೆ. ಇದುವರೆಗೂ ಖರೀದಿ ಕೇಂದ್ರ ತೆರೆಯಲಾಗಿಲ್ಲ. ₹ 1940 ಕೂಡ ರೈತನ ಪ್ರರಿಶ್ರಮಕ್ಕೆ ಸಮವಲ್ಲ. ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ ₹ 2,500 ದರ ಕೊಡಬೇಕು. ಇದೇ ದರಕ್ಕೆ ಖರೀದಿಸುವಂತೆ ಮಿಲ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳಿಗೆ ಎಂಆರ್‌ಪಿ (ಗರಿಷ್ಟ ಮಾರಾಟ ಬೆಲೆ) ಇರುವಾಗ ರೈತರ ಉತ್ಪನ್ನಗಳಿಗೆ ಎಂಆರ್‌ಪಿ ಏಕಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲವೆಂದಾರೆ ಕೃಷಿಗೆ ಉತ್ತೇಜನ ಕೊಡುವುದೇಕೆ, ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿರುವುದೇ ಎಂದು ಪ್ರಶ್ನಿಸುತ್ತಿದ್ದಾರೆ ರೈತರು.

ಕರಾವಳಿಯ ರೈತರು ಬೀದಿಗಿಳಿದು ಹೋರಾಟ ಮಾಡಿದವರಲ್ಲ. ಆದರೆ, ಭತ್ತದ ಕೃಷಿಕರ ಇಂದಿನ ಪರಿಸ್ಥಿತಿ ಬೀದಿಗಿಳಿಯುವಂತೆ ಮಾಡಿದೆ. ನ.5ರೊಳಗೆ ಕ್ವಿಂಟಲ್ ಭತ್ತಕ್ಕೆ 2,500 ಬೆಂಬಲ ಬೆಲೆ ಘೋಷಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ರೈತರು ಧರಣಿ ಕೂರುತ್ತೇವೆ. ನಂತರ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷರು ಹಾಗೂ ರೈತ ಮುಖಂಡರಾದ ಉಮಾನಾಥ್ ಹೆಗಡೆ.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆಯಾಗಿದ್ದಾರೆ. ಇಷ್ಟಾದರೂ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭವಾಗದಿರುವುದು ಜನಪ್ರತಿನಿಧಿಗಳ ರೈತ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ದೂರುತ್ತಾರೆ ಮುಖಂಡರು.

ಜನಪರ ಹೋರಾಟ ವೇದಿಕೆ ರಚನೆ

‘ಜಿಲ್ಲೆಯ ಭತ್ತ ಬೆಳೆಗಾರರ ಪರವಾದ ಹೋರಾಟದ ನೇತೃತ್ವವನ್ನು ಜನಪರ ಹೋರಾಟ ವೇದಿಕೆ ವಹಿಸಿಕೊಂಡಿದೆ. ಏಕ ನಾಯಕತ್ವ ಹೋರಾಟದ ವೇಗಕ್ಕೆ ಅಡ್ಡಿಯಾಗಬಹುದು ಎಂಬ ಕಾರಣದಿಂದ ರಾಜಕಿಯೇತರ ವೇದಿಕೆ ರಚಿಸಲಾಗಿದೆ. ಇಲ್ಲಿ, ಉತ್ಸಾಹಿ ಯುವ ರೈತರಿದ್ದಾರೆ, ಅನುಭವಿ, ಪ್ರಗತಿಪರ ರೈತರ ‌ದಂಡು ಇದೆ. ಸಂಘ ಸಂಸ್ಥೆಗಳ ಮುಖಂಡರು ಬೆನ್ನಿಗಿದ್ದಾರೆ. ಅದಮಾರು ಮಠದ ಈಶಪ್ರಿಯ ತೀರ್ಥರ ಬೆಂಬಲ ಇದೆ. ಸಾಮಾಜಿಕ ಜಾಲತಾಣವನ್ನೂ ಹೋರಾಟಕ್ಕೆ ವೇದಿಕೆಯನ್ನಾಗಿ ಬಳಸಿಕೊಳ್ಳಲಾಗಿದೆ. ಈಗಾಗಲೇ, ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಬೆಂಬಲ ಬೆಲೆಗಾಗಿ ಅಭಿಯಾನ ಆರಂಭಿಸಿಲಾಗಿದೆ. ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ’ ಎನ್ನುತ್ತಾರೆ ಹೋರಾಟ ಸಮಿತಿಯಲ್ಲೊಬ್ಬರಾದ ವಸಂತ್ ಗಿಳಿಯಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT