ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಖರದಿಂದ ಸಾಗರದವರೆಗೆ ನಾರಿ ಶಕ್ತಿ ಅಭಿಯಾನ

ಕೊಲೋಯ್‌ ಶಿಖರ ಏರಿದ, 3,000 ಕಿ.ಮೀ ಸೈಕ್ಲಿಂಗ್ ಮಾಡಿದ, 300 ಕಿ.ಮೀ ಸಮುದ್ರಯಾನ ಮಾಡುತ್ತಿರುವ ಯುವತಿಯರ ತಂಡ
Last Updated 28 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

ಉಡುಪಿ: 5,425 ಮೀಟರ್ ಎತ್ತರದ ಕಾಶ್ಮೀರದ ಕೊಲೋಯ್‌ ಶಿಖರವನ್ನು ಯಶಸ್ವಿಯಾಗಿ ಏರಿ, 3,000 ಕಿ.ಮೀ ದುರ್ಗಮ ಹಾದಿಯ ಸೈಕಲ್ ಯಾನವನ್ನು ಮುಗಿಸಿ, ಕಾರವಾರದಿಂದ ಮಂಗಳೂರಿನವರೆಗೂ 300 ಕಿ.ಮೀ ಕಯಾಕಿಂಗ್ ಯಾನ ಆರಂಭಿಸಿರುವ ಕರ್ನಾಟಕದ ಐವರು ಸಾಹಸಿ ಯುವತಿಯರ ಯಶೋಗಾಥೆ ಇದು.

ಶಿವಮೊಗ್ಗ ಜಿಲ್ಲೆಯ ಐಶ್ವರ್ಯಾ, ಧನಲಕ್ಷ್ಮೀ, ಬೆಂಗಳೂರಿನವರಾದ ಆಶಾ, ಮಡಿಕೇರಿಯ ಪುಷ್ಪಾ ಹಾಗೂ ಮೈಸೂರಿನ ಬಿಂದು ಒಟ್ಟಾಗಿ ‘ಶಿಖರದಿಂದ ಸಾಗರ’ ಎಂಬ ಸಾಹಸಮಯ ಅಭಿಯಾನವನ್ನು ಕೈಗೊಂಡಿದ್ದು, ಗುರಿ ಮುಟ್ಟಲು ಕೆಲವೇ ಹೆಜ್ಜೆಗಳು ಮಾತ್ರ ಬಾಕಿ ಉಳಿದಿವೆ.

ಸಾಧನೆಯ ಹಾದಿ:

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್‌ 17ರಂದು ಅಭಿಯಾನ ಶುರುಮಾಡಿರುವ ಯುವತಿಯರು, ಈಗಾಗಲೇ ಅತಿ ದುರ್ಗಮ ಹಾಗೂ ಅಪಾಯಕಾರಿ ಕಾಶ್ಮೀರದ ಕೊಲೋಯ್‌ ಶಿಖರವನ್ನು ಯಶಸ್ವಿಯಾಗಿ ಏರಿ ಇಳಿದಿದ್ದಾರೆ. 2019ರಲ್ಲಿ ಕೊಲೋಯ್ ಶಿಖರ್ ಏರುವಾಗ ಇಬ್ಬರು ಮೃತಪಟ್ಟಿದ್ದರು. ಬಳಿಕ ಈ ಶಿಖರವನ್ನು ಯಾರೂ ಏರಿರಲಿಲ್ಲ. ಇದೀಗ ಕರ್ನಾಟಕದ ಕುವರಿಯರು ಶಿಖರ ಏರಿರುವುದು ಸಾಧನೆಯೇ ಸರಿ.

ಶಿಖರವೇರಿದ ಬಳಿಕ ಲಡಾಕ್‌ನ ಖರ್ದೂಲಾದ ಅತಿ ಎತ್ತರದ ಪಾಯಿಂಟ್‌ನಿಂದ ಕಾರವಾರದವರೆಗೂ 3,000 ಕಿ.ಮೀ ಸವಾಲಿನ ಹಾದಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಒಂದೇ ದಿನ 200 ಕಿ.ಮೀ ಸೈಕ್ಲಿಂಗ್‌ ಮಾಡಿದ್ದು ಯುವತಿಯರ ಸಾಧನೆ.

ಸದ್ಯ ಕಾರವಾರದಿಂದ ಮಂಗಳೂರಿನವರೆಗೆ ಸಮುದ್ರದಲ್ಲಿ 300 ಕಿ.ಮೀ ಕಯಾಕಿಂಗ್ ಯಾನ ಆರಂಭಿಸಿರುವ ತಂಡ ಈಗಾಗಲೇ 230 ಕಿ.ಮೀ ಕ್ರಮಿಸಿದ್ದು, ಗುರಿ ಮುಟ್ಟಲು ಕೇವಲ 70 ಕಿ.ಮೀ ಮಾತ್ರ ಬಾಕಿ ಇದೆ.

ಸಾಹಸಯಾನದ ಉದ್ದೇಶ:

ಸ್ವಾತಂತ್ರ್ಯಕ್ಕೂ ಮುನ್ನ ಮಹಿಳೆಯರ ಸ್ಥಿತಿಗತಿ ಶೋಚನೀಯವಾಗಿತ್ತು. ಈಗ ಕಾಲ ಬದಲಾಗಿದ್ದು, ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಪುರುಷನಿಗೆ ಸಮನಾಗಿ ಸಾಧನೆ ಮಾಡುತ್ತಿದ್ದಾಳೆ. ಸ್ತ್ರೀ ಮನಸ್ಸು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬ ಸತ್ಯವನ್ನು ಜಗತ್ತಿಗೆ ತೋರಿಸಬೇಕು ಎಂಬುದು ಈ ಸಾಹಸಯಾನದ ಉದ್ದೇಶ ಎಂದರು ‘ಶಿಖರ ಟು ಸಾಗರ’ ಅಭಿಯಾನದ ನೇತೃತ್ವ ವಹಿಸಿರುವ ಮೈಸೂರಿನ ಬಿಂದು.

ಅಭಿಯಾನ ಕೇವಲ ನಗರದ ರಸ್ತೆಗಳಲ್ಲಿ ಸಾಗುವುದಿಲ್ಲ. ಯಾನದ ಮಧ್ಯೆ ಸಿಗುವ ಹಳ್ಳಿಗಳಲ್ಲಿ ವಾಸ್ತವ್ಯ ಹೂಡುತ್ತೇವೆ. ಮಹಿಳಾ ಸಬಲೀಕರಣ ಕುರಿತು ಗ್ರಾಮೀಣ ಭಾಗದ ಮಹಿಳೆಯರ ಜತೆ ಸಂವಾದ, ಚರ್ಚೆ ನಡೆಸಿದ್ದೇವೆ. ಸಮಾಜವನ್ನು ಬದಲಿಸುವ ಶಕ್ತಿ ಸ್ತ್ರೀಗಿದೆ ಎಂಬುದನ್ನು ಮನದಟ್ಟು ಮಾಡಿಸುತ್ತಿದ್ದೇವೆ ಎಂದರು ಅವರು.

ಈ ಸಾಹಸಯಾನಕ್ಕೆ ಬೆಂಬಲವಾಗಿ ಕೀರ್ತಿ, ವಿಜಯ್‌ ರಾಘವನ್, ಶಬ್ಬೀರ್, ಬಷೀರ್, ವಿನಾಯಕ್ ನಿಂತಿದ್ದಾರೆ.

ಮಲ್ಪೆ ಬೀಚ್‌ನಲ್ಲಿ ಸ್ವಾಗತ

ಕಾರವಾರ ಸಮುದ್ರದಿಂದ ಮಂಗಳೂರಿನವರೆಗೂ ಸಾಗರ ಯಾನ ಆರಂಭಿಸಿರುವ ಯುವತಿಯರ ತಂಡ ಮಲ್ಪೆ ಬೀಚ್‌ಗೆ ಬಂದಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌, ಪ್ರವಾಸೋದ್ಯ ಇಲಾಖೆಯ ಸಹಾಯಕ ನಿರ್ದೇಶಕ (ಪ್ರಭಾರ) ಕ್ಲಿಫರ್ಡ್ ಡಿಸೋಜಾ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಸ್ವಾಗತ ಕೋರಿದರು. ಬಳಿಕ ಪ್ಯಾರಡೈಸ್ ಐಸ್ಲ್ ರೆಸಾರ್ಟ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿಇಒ, ಪ್ರಾಕೃತಿಕ ಸವಾಲುಗಳನ್ನು ಮೆಟ್ಟಿನಿಂತು ಸಾಧನೆಯ ಶಿಖರ ಏರಿ ಬಂದಿರುವುದು ಶ್ಲಾಘನೀಯ. ಯುವತಿಯರ ಸಾಧನೆ ಮತ್ತಷ್ಟು ಮಹಿಳೆಯರಿಗೆ ಸ್ಫೂರ್ತಿ, ಪ್ರೇರಣೆಯಾಗಲಿ ಎಂದು ಹಾರೈಸಿದರು.

ಸುಧೀರ್ಘ ಯಾನ

60 ದಿನಗಳ ಶಿಖರದಿಂದ ಸಾಗರ ಅಭಿಯಾನವನ್ನು ಭಾರತೀಯ ಪರ್ವತರೋಹಣ ಸಂಸ್ಥೆಯ ದಕ್ಷಿಣ ವಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ನಡೆಸುತ್ತಿದೆ. ರಾಜ್ಯದ ಐವರು ಯುವತಿಯರು ಈ ಯಾನದ ಭಾಗವಾಗಿದ್ದು, ಯಶಸ್ವಿಯಾಗಿ ಗುರಿ ಮುಟ್ಟುವ ಹಂತ ತಲುಪಿದ್ದಾರೆ.

ಸಾಧನೆಯ ಹಾದಿ...

ಶಿವಮೊಗ್ಗ ಜಿಲ್ಲೆಯವರಾದ ಐಶ್ವರ್ಯಾ, ಧನಲಕ್ಷ್ಮಿ ಹಾಗೂ ಬೆಂಗಳೂರಿನವರಾದ ಆಶಾ ಓರಿಯಂಟೇಷನ್ ಹಾಗೂ ಪ್ರಾಥಮಿಕ ಹಂತದ ಪರ್ವತಾರೋಹಣ ಕೋರ್ಸ್ ತೇರ್ಗಡೆಯಾಗಿದ್ದು, 2020ರಲ್ಲಿ ಮಿಷನ್ ಸುಭದ್ರ ಕಾರ್ಯಕ್ರಮದಡಿ ಭದ್ರಾನದಿಯಲ್ಲಿ 135 ಕಿ.ಮೀ ಕಯಾಕಿಂಗ್ ಯಾನ ಪೂರೈಸಿದ್ದಾರೆ. 2020, 2021ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದಾರೆ. ಧನಲಕ್ಷ್ಮಿ 2021ರಲ್ಲಿ ಖೇಲೋ ಇಂಡಿಯಾ ವಿಂಟರ್‌ಗೇಮ್ಸ್‌ನಲ್ಲಿ 5 ಕಿ.ಮೀ ಹಾಗೂ 1.5 ಕಿ.ಮೀ ಸ್ಕೋ ಪೂಸ್ ಓಡುವ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ. ಮಡಿಕೇರಿಯವರಾದ ಪುಷ್ಟ 2020ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಕ್‌ ಸ್ಕೈಂಬಿಂಗ್ ತರಬೇತಿ ಪೂರ್ಣಗೊಳಿಸಿದ್ದಾರೆ. ಮೈಸೂರಿನ ಬಿಂದು, 2020ರಲ್ಲಿ ಮೊಟ್ಟಮೊದಲ ಬಾರಿಗೆ ಮಧುಗಿರಿಯಲ್ಲಿ ನಡೆದ ಮಹಿಳೆಯರ ಶಿಲಾರೋಹಣ ಅಭಿಯಾನದಲ್ಲಿ 350 ಮೀಟರ್‌ನ ‘ನಿರ್ಭಯ’ 6 ‘ಸಿ’ ಗ್ರೇಡ್ ಮಾರ್ಗ ತೆರೆದ ತಂಡದ ಅಭ್ಯರ್ಥಿಯಾಗಿದ್ದರು. 2020ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಕ್ ಕ್ಲೈಂಬಿಂಗ್ ತರಬೇತಿ ಶಿಬಿರಗಳಲ್ಲಿ ತೇರ್ಗಡೆ ಹೊಂದಿದ್ದು, 2021ರಲ್ಲಿ ಕೋಲಾರ್‌ ಬೌಲರಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT