ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕೋವಿಡ್‌ ಪ್ರಯೋಗಾಲಯ ಆರಂಭ

ಸೋಂಕು ಪತ್ತೆ ಪರೀಕ್ಷೆ ನಡೆಸಲು ಅನುಕೂಲ: ಶೀಘ್ರ ಕೈಸೇರಲಿದೆ ವರದಿ
Last Updated 8 ಜುಲೈ 2020, 13:51 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ತುರ್ತು ಬೇಡಿಕೆಯಾಗಿದ್ದ ಸರ್ಕಾರಿ ಕೋವಿಡ್‌ ಪ್ರಯೋಗಾಲಯ ಬುಧವಾರ ಅಧಿಕೃತವಾಗಿ ಆರಂಭವಾಗಿದೆ. ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಯೋಗಾಲಯವನ್ನು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಕೊರೊನಾ ಕಾಲಿಟ್ಟ ಸಂದರ್ಭ ರಾಜ್ಯದಲ್ಲಿ ಕೇವಲ ಒಂದು ಸೋಂಕು ಪತ್ತೆ‌ ಪರೀಕ್ಷಾ ಪ್ರಯೋಗಾಲಯವಿತ್ತು. ಸದ್ಯ ಉಡುಪಿಯ ಲ್ಯಾಬ್‌ ಸೇರಿ ರಾಜ್ಯದಲ್ಲಿ 82 ಪ್ರಯೋಗಾಲಯಗಳಿವೆ ಎಂದರು.

ಜಿಲ್ಲೆಯ ಶಂಕಿತರ ಕೊರೊನಾ ಸೋಂಕಿತರ ಮಾದರಿಗಳನ್ನು ಪರೀಕ್ಷೆ ಮಾಡಿಸಲು ಮಂಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಮೇಲೆ ಹೆಚ್ಚು ಅವಲಂಬನೆಯಾಗಬೇಕಿತ್ತು. ಈಗ ಜಿಲ್ಲೆಯಲ್ಲಿಯೇ ಲ್ಯಾಬ್ ಆರಂಭವಾಗಿರುವುದರಿಂದ ಶೀಘ್ರ ವರದಿಗಳು ಕೈಸೇರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 1,390ಕ್ಕೂ ಹೆಚ್ಚು ಕೋವಿಡ್‌ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಪೈಕಿ ಮಹಾರಾಷ್ಟ್ರದಿಂದ ಬಂದ ಸೋಂಕಿಂತರ ಸಂಖ್ಯೆಯೇ 1,100 ಮೀರಿದೆ. ಹೊರ ರಾಜ್ಯಗಳು, ವಿದೇಶಗಳಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಸ್ಥಳೀಯವಾಗಿ ಹೆಚ್ಚುವರಿ ಲ್ಯಾಬ್ ಆರಂಭ ಬಹಳ ಅಗತ್ಯವಿತ್ತು.

ಜಿಲ್ಲೆಯ ಅಗತ್ಯವನ್ನು ಮನಗಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಲ್ಯಾಬ್ ಮಂಜೂರು ಮಾಡಿದ್ದಾರೆ ಎಂದು ಸಚಿವ ಕೋಟ ತಿಳಿಸಿದರು.

ಕೊರೊನಾ ಸೋಂಕು ನಿಯಂತ್ರಣ ಹಾಗೂ ನಿರ್ವಹಣೆ ಕುರಿತು ಜಿಲ್ಲಾಡಳಿತ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕಾಗಿ ಸಚಿವರು, ಶಾಸಕರು ಹಾಗೂ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ವಿಳಂಬವಾಗದಂತೆ ರೂಪಿಸಿರುವ ಆಂಬುಲೆನ್ಸ್ ಮಾನಿಟರಿಂಗ್ ಸಿಸ್ಟಂ ಯೋಜನೆಯನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿದರು.

ಜಿಲ್ಲೆಯಲ್ಲಿರುವ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಬೆಡ್‌ಗಳ ಕುರಿತು ಮಾಹಿತಿ ನೀಡಲು ರೂಪಿಸಿರುವ ಬೆಡ್ ಮ್ಯಾನೇಜ್‌ಮೆಂಟ್‌ ಸಿಸ್ಟಂ ಅನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ, ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡಾ, ಕೋವಿಡ್ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಇದ್ದರು.

ಆಂಬುಲೆನ್ಸ್ ಮಾನಿಟರಿಂಗ್ ವಿಶೇಷ

ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಆಂಬುಲೈನ್ಸ್‌ಗಳಿಗೆ ಜಿಪಿಎಸ್ ಅಳವಡಿಸಿದ್ದು, ಅಂಬುಲೆನ್ಸ್‌ಗಳು ಯಾವ ಸ್ಥಳದಲ್ಲಿದೆ ಎಂಬ ಮಾಹಿತಿಯನ್ನು ಆಂಬುಲೆನ್ಸ್‌ ಮಾನಿಟರಿಂಗ್ ಸಿಸ್ಟಂ ಮೂಲಕ ಪಡೆಯಬಹುದು. ಕೋವಿಡ್ ಸೋಂಕಿತ ಇರುವ ಸಮೀಪದ ಆಸ್ಪತ್ರೆಗಳಿಂದ ಆಂಬುಲೆನ್ಸ್‌ ಪಡೆದು, ವಿಳಂಬವಾಗದಂತೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಲಿದೆ. ರಾಜ್ಯದಲ್ಲೇ ಈ ಯೋಜನೆ ಪ್ರಥಮ. ಹಾಗೆಯೇಬೆಡ್‌ ಮ್ಯಾನೇಜ್‌ಮೆಂಟ್‌ ವ್ಯವಸ್ಥೆಯಡಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ಗಳು ಖಾಲಿ ಇವೆ. ಸೋಂಕಿತನ ಸಮೀಪದಲ್ಲಿರುವ ಆಸ್ಪತ್ರೆ ಯಾವುದು ಎಂಬ ಮಾಹಿತಿ ಪಡೆಯಬಹುದು. ರೋಗಿಯನ್ನು ಕಡಿಮೆ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಿಸಲು ಇದರಿಂದ ಸಾಧ್ಯವಾಗಲಿದೆಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT