ಬುಧವಾರ, ಆಗಸ್ಟ್ 4, 2021
23 °C
₹ 1 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ: ದಿನಕ್ಕೆ ಗರಿಷ್ಠ 300 ಮಾದರಿ ಪರೀಕ್ಷೆ

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಲ್ಯಾಬ್‌ ಪರೀಕ್ಷೆಗೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಗಂಟಲ ದ್ರವದ ಮಾದರಿ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋವಿಡ್‌ ಪ್ರಯೋಗಾಲಯ ನಿರ್ಮಿಸಲಾಗಿದ್ದು, ಕಾರ್ಯಾರಂಭಕ್ಕೆ ಸಜ್ಜಾಗಿದೆ.

ಜಿಲ್ಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಾತ್ರ ಅಧಿಕೃತ ಕೋವಿಡ್‌ ಪರೀಕ್ಷಾ ಪ್ರಯೋಗಾಲಯವಿತ್ತು. ಪರಿಣಾಮ, ಕಾರ್ಯದೊತ್ತಡದಿಂದ ಇತರೆ ಜಿಲ್ಲೆಗಳಿಗೆ ರೋಗಿಗಳ ಮಾದರಿಯನ್ನು ಕಳುಹಿಸುತ್ತಿದ್ದರಿಂದ ವರದಿ ತಡವಾಗಿ ಸಿಗುತ್ತಿತ್ತು. 

ಇದೀಗ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋವಿಡ್‌ ಲ್ಯಾಬ್‌ ನಿರ್ಮಾಣವಾಗಿದ್ದು, ಶಂಕಿತ ಕೊರೊನಾ ರೋಗಿಗಳ ಪರೀಕ್ಷಾ ವರದಿ ಶೀಘ್ರವಾಗಿ ಕೈಸೇರಲಿದೆ. ಕೋವಿಡ್ ಲ್ಯಾಬ್ ನಿರ್ಮಾಣಕ್ಕೆ ₹ 1 ಕೋಟಿ ತಗುಲಿದ್ದು, ಅತ್ಯಾಧುನಿಕ ಯಂತ್ರಗಳು ಹಾಗೂ ಉಪಕರಣಗಳನ್ನು ಅಳವಡಿಸಲಾಗಿದೆ.

ಲ್ಯಾಬ್ ಕಟ್ಟಡ ಕಾಮಗಾರಿಗೆ ₹ 45 ಲಕ್ಷ ವೆಚ್ಚವಾಗಿದೆ. ಪ್ರಯೋಗಾಲಯದಲ್ಲಿ ಒಬ್ಬರು ಮೈಕ್ರೋ ಬಯಾಲಜಿಸ್ಟ್ ಹಾಗೂ 8 ಲ್ಯಾಬ್ ಟೆಕ್ನಿಷಿಯನ್‌ ನೇಮಕ ಮಾಡಲಾಗಿದ್ದು, ಮೈಕ್ರೋ ಬಯಾಲಾಜಿಸ್ಟ್ ಹಾಗೂ ಇಬ್ಬರು ಲ್ಯಾಬ್ ಟೆಕ್ನಿಷಿಯನ್‌ಗಳಿಗೆ ಬೆಂಗಳೂರಿನ ನಿಮಾನ್ಸ್‌ನಲ್ಲಿ ತರಬೇತಿ ನೀಡಲಾಗಿದೆ.

ಸಂಪೂರ್ಣ ಹವಾನಿಯಂತ್ರಿತ ಲ್ಯಾಬ್‌ನಲ್ಲಿ ಒಂದು ಬಾರಿಗೆ 96 ಸ್ಯಾಂಪಲ್‌ಗಳ ಪರೀಕ್ಷೆ ಮಾಡಬಹುದಾಗಿದ್ದು, ವರದಿಗೆ 4 ರಿಂದ 6 ಗಂಟೆ ಬೇಕಾಗುತ್ತದೆ. ಅದರ ಪ್ರಕಾರ, ಲ್ಯಾಬ್‌ನಲ್ಲಿ ದಿನಕ್ಕೆ ಗರಿಷ್ಠ 300 ಮಾದರಿ ಪರೀಕ್ಷಿಸಿ ವರದಿ ಪಡೆಯಬಹುದು.

ಮಾದರಿ ಸಂಗ್ರಹದಿಂದ ವರದಿ ನೀಡುವವರೆಗಿನ ಎಲ್ಲ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ದಾಖಲಾಗಲಿದೆ. ಐಸಿಎಂಆರ್ ಮಾರ್ಗಸೂಚಿಯನ್ವಯ ನಡೆಯಲಿದೆ. ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಪರೀಕ್ಷೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಆರಂಭದಲ್ಲಿ ರೋಗಿಗಳ ಮಾದರಿಯನ್ನು ಪ್ರೊಸೆಸಿಂಗ್ ಕೊಠಡಿಯಲ್ಲಿ ಸ್ವೀಕರಿಸಿ, ಬಯೋ ಸೇಪ್ಟಿ ಕ್ಯಾಬಿನೆಟ್‌ನಲ್ಲಿಟ್ಟು, ಬಳಿಕ ಪಾಸ್ ಬಾಕ್ಸ್ ಮೂಲಕ ಪರೀಕ್ಷಾ ಕೊಠಡಿಗೆ ರವಾಣಿಸಲಾಗುವುದು. ನಂತರ ಆರ್‌ಟಿಪಿಸಿಆರ್ ಯಂತ್ರದಿಂದ ಮಾದರಿ ಪರೀಕ್ಷೆಗೊಳಪಡಿಸಲಾಗುವುದು ಎಂದು ಮೈಕ್ರೊ ಬಯಾಲಜಿಸ್ಟ್ ಡಾ. ಆನೀಟ್ ಡಿಸೋಜಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು