ಮಂಗಳವಾರ, ಜನವರಿ 19, 2021
17 °C
ಗ್ರಾಮೀಣಾಭಿವೃದ್ಧಿಗೆ ಕಾಂಗ್ರೆಸ್-ಜೆಡಿಎಸ್‌ ಕೊಡುಗೆ ಶೂನ್ಯ; ಗ್ರಾಮ ಸ್ವರಾಜ್ಯ ಸಭೆಯಲ್ಲಿ ಡಾ.ಅಶ್ವತ್ಥನಾರಾಯಣ

ಪಂಚಾಯಿತಿಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅಧಿಕಾರಕ್ಕೆ ಅಂಟಿಕೊಂಡಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಶೂನ್ಯ. ಕಳೆದ ಒಂದೂವರೆ ವರ್ಷದಲ್ಲಿ ಬಿಜೆಪಿ  ಸರ್ಕಾರ ಅತಿಹೆಚ್ಚು ಅನುದಾನ ಒದಗಿಸಿ ಜನರ ಇಚ್ಛೆಯಂತೆ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಉಡುಪಿಯಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ‘ಗ್ರಾಮ ಸ್ವರಾಜ್ಯ’ ಸಮಾವೇಶದಲ್ಲಿ ಮಾತನಾಡಿದ ಅವರು, ನಗರಗಳಂತೆಯೇ ಗ್ರಾಮೀಣ ಪ್ರದೇಶಗಳೂ ಅಭಿವೃದ್ಧಿ ಹೊಂದಬೇಕು. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರ ಅಭಿವೃದ್ಧಿಯನ್ನು ಕಡೆಗಣಿಸಿ ಜನರಿಗೆ ವಂಚನೆ ಎಸಗಿವೆ. ಎರಡೂ ಪಕ್ಷಗಳು ಮಾಡಿರುವ ಅನ್ಯಾಯವನ್ನು ಬಿಜೆಪಿ ಸರ್ಕಾರ ಸರಿಪಡಿಸುತ್ತಿದೆ ಎಂದರು.

ಮುಂದೆ, ಎಲ್ಲ ಪಂಚಾಯಿತಿಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಆಡಳಿತ ನಡೆಯಲಿದೆ. ಖರ್ಚಾಗುವ ಪೈಸೆಗೂ ಲೆಕ್ಕ ಸಿಗುತ್ತದೆ. ಇಂತಹ ಬದಲಾವಣೆಗೆ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬರಬೇಕು. ಆಡಳಿತದಲ್ಲಿ ಡಿಜಿಟಲೀಕರಣ ಬರಬೇಕು. ಆಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಪ್ರತಿಪಾದಿಸಿದರು.

ಗ್ರಾಮೀಣ ಭಾಗದ ಕೆಲಸಗಳು ಹಳ್ಳಿಗಳಲ್ಲೇ ಆಗಬೇಕು ಎಂಬದು ಗ್ರಾಮ ಸ್ವರಾಜ್ಯದ ಪರಿಕಲ್ಪನೆ. ಗ್ರಾಮದ ಜನಪ್ರತಿನಿಧಿಗಳು ಕೆಲಸಕ್ಕಾಗಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳ ಸುತ್ತ ಅಲೆಯಬಾರದು. ಮುಂದೆ ಪಂಚಾಯಿತಿಗಳಿಗೆ ಅಗತ್ಯ ಶಕ್ತಿ ತುಂಬಲಾಗುವುದು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ತಿಲಕರು ʼಸ್ವರಾಜ್ಯʼದ ಕಲ್ಪನೆ ಕೊಟ್ಟರು. ನಂತರ ಗಾಂಧೀಜಿ ಗ್ರಾಮ ಸ್ವರಾಜ್ಯದ ಆಶಯ ತುಂಬಿದರು. ಇದೀಗ ಬಿಜೆಪಿ ಇಬ್ಬರು ಮಹನೀಯರ ಕನಸುಗಳನ್ನು ಹಳ್ಳಿಹಳ್ಳಿಗಳ‌ಲ್ಲಿ ಸಾಕಾರಗೊಳಿಸುತ್ತಿದೆ. ಪಕ್ಷದ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದ ನಾಯಕರು ಪಕ್ಷದ ಆಶಯ, ಗುರಿಗಳ ಬಗ್ಗೆ ಸ್ಟಷ್ಟತೆ ಹೊಂದಿ ಪಕ್ಷವನ್ನು ಸಂಘಟಿಸಬೇಕು ಎಂದು ಸಲಹೆ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ಮುಂಬರುವ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಮೂಲಕ ಕಾಂಗ್ರೆಸ್‌ ಮುಕ್ತ ಪಂಚಾಯಿತಿ ಗುರಿ ಹೊಂದಲಾಗಿದೆ’ ಎಂದರು.

ಗಾಂಧೀಜಿ ಹೆಸರಿನಲ್ಲಿ ಕಾಂಗ್ರೆಸ್ ಮತ ಪಡೆಯಿತೇ ವಿನಾ ಗಾಂಧಿ ವಿಚಾರಧಾರೆಗಳನ್ನು ಅನುಸರಿಸಲಿಲ್ಲ. ಆದರೆ, ಬಿಜೆಪಿ ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 18,000 ಗ್ರಾಮಗಳನ್ನು ಕತ್ತಲುಮುಕ್ತಗೊಳಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯಿತಿಗೆ ಒಂದು ವರ್ಷದಲ್ಲಿ ಕೇಂದ್ರದಿಂದ ₹ 70 ಕೋಟಿ ಅನುದಾನ ಬಂದಿದೆ ಎಂದರು.

ಕರಾವಳಿಯಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಗೆ ಒತ್ತು ಹಾಗೂ ಕುಮ್ಕಿ ಜಮೀನಿಗೆ ಹಕ್ಕುಪತ್ರ ನೀಡುವ ಕೆಲಸವನ್ನು ಮಾಡಲಾಗುವುದು ಎಂದರು.

ಸಮಾವೇಶದಲ್ಲಿ ಶಾಸಕ ರಘುಪತಿ ಭಟ್‌, ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು