ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ| ಶ್ರೀಗಳ ಹುಟ್ಟೂರಲ್ಲಿ ನೀರವ ಮೌನ; ಭಕ್ತರ ಕಂಬನಿ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಹುಟ್ಟೂರು ಹೆಬ್ರಿ ತಾಲ್ಲೂಕಿನ ವರಂಗ
Last Updated 24 ಮಾರ್ಚ್ 2023, 6:02 IST
ಅಕ್ಷರ ಗಾತ್ರ

ಹೆಬ್ರಿ: ಶ್ರವಣ ಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನದಿಂದ ಶ್ರೀಗಳ ಹುಟ್ಟೂರಾದ ಹೆಬ್ರಿ ತಾಲ್ಲೂಕಿನ ವರಂಗದಲ್ಲಿ ನೀರವ ಮೌನ ಆವರಿಸಿದೆ. ಮಠದ ಸಮೀಪದಲ್ಲಿ ಶ್ರೀಗಳು ಜನಿಸಿದ ಚಂದ್ರಮ್ಮ‌ ನಿಲಯವಿದ್ದು ಅಲ್ಲಿ ಸೂತಕದ ಛಾಯೆ ತುಂಬಿದೆ.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 1949 ಮೇ 3ರಂದು ಹೆಬ್ರಿ ತಾಲ್ಲೂಕಿನ ವರಂಗದಲ್ಲಿ ಜನಿಸಿದರು. ತಂದೆ ರತ್ನ ಚಂದ್ರ ರಾಜ ಇಂದ್ರ, ತಾಯಿ ಕಾಂತಮ್ಮ ದಂಪತಿಗಳ 6 ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದ ಶ್ರೀಗಳ ಮೂಲ ಹೆಸರು ರತ್ನವರ್ಮ.

ವಿದ್ಯಾಭ್ಯಾಸ:

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಪ್ರಾಥಮಿಕ ಶಿಕ್ಷಣ ವರಂಗದ ಪದ್ಮಾಂಬಿಕ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ನಂತರ ಕಾರ್ಕಳದ ಭುಜಬಲಿ ಆಶ್ರಮದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ ಹೊಂಬುಜ ಮಠದ ಕುಂದ ಬ್ರಹ್ಮಾಚಾರ್ಯ ಆಶ್ರಮದಲ್ಲಿ ಅಂದಿನ ಹೊಂಬುಜ ಮಠದ ಪೀಠಾಧಿಪತಿ ಅರಹದ್ದಾಸ್ ದೇವೇಂದ್ರ ಕೀರ್ತಿ ಸ್ವಾಮೀಜಿ ಅವರ ಬಳಿ ನಡೆಯಿತು. ಧಾರ್ಮಿಕ ಶಿಕ್ಷಣದ ಜತೆಗೆ ಸಂಸ್ಕೃತ, ಪ್ರಾಕೃತ ಭಾಷೆಗಳಲ್ಲಿ ಪಾಂಡಿತ್ಯ ಪಡೆದರು. 19ನೇ ವಯಸ್ಸಿಗೆ ಶ್ರವಣಬೆಳಗೊಳದಲ್ಲಿರುವ ಜೈನ ಮಠದ ಪೀಠಾರೋಹಣ ಮಾಡಿದರು.

ವರಂಗದ ಹೆಮ್ಮೆ:

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸಾಧನೆ, ಪ್ರಾಕೃತ ಸಂಸ್ಕೃತ ಭಾಷೆಗಳ ಮೇಲಿನ ಪಾಂಡಿತ್ಯ ಅಪಾರ. ತಮ್ಮ ಸಂಚಾರದ ಸಂದರ್ಭದಲ್ಲಿ ಹುಟ್ಟೂರಾದ ವರಂಗವನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು.

ಸ್ವಾಮೀಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವರಂಗದ ಪದ್ಮಾಂಬಿಕಾ ಪ್ರಾಥಮಿಕ ಶಾಲೆಗೆ ರಜೆ ನೀಡಲಾಯಿತು. ಸದಾ ಭಕ್ತರು ತುಂಬಿರುತ್ತಿದ್ದ ವರಂಗ ಬಸದಿ ಬಿಕೋ ಎನ್ನುತಿತ್ತು. ವರಂಗ ಮುನಿಯಾಲು ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು.

ಸ್ವಾಮೀಜಿ ಜನಿಸಿದ ಚಂದ್ರಮ್ಮ ನಿಲಯದಲ್ಲಿ ರತ್ನವರ್ಮರ ಬಾಲ್ಯದ ಚಿತ್ರ, ಪೀಠಾರೋಹಣ ಘಳಿಗೆ ಹಾಗೂ ಇತರ ಅಪರೂಪದ ಚಿತ್ರಗಳು ಗಮನ ಸೆಳೆಯುತ್ತಿವೆ.

ಶ್ರದ್ಧಾಂಜಲಿ:

ಶ್ರವಣ ಬೆಳಗೊಳ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯರಾದ ಸುದ್ದಿ ಅತೀವ ದುಃಖ ತಂದಿದೆ. ಪೀಠದಲ್ಲಿ ಕುಳಿತು ಐದು ದಶಕಗಳ ಕಾಲ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ನಾಲ್ಕು ಮಹಾಮಸ್ತಕಾಭಿಷೇಕ ಪೂರೈಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿರುವ ಸ್ವಾಮೀಜಿ ಸದಾ ಕಾಲ ಅಹಿಂಸೆ, ತ್ಯಾಗ ಹಾಗೂ ಶಾಂತಿಯಿಂದ ಜೈನ ಪರಂಪರೆಯನ್ನು ಬೆಳಗಿದ್ದರು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT