ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಾಲಿಗೆ ಸುಸಜ್ಜಿತ ಕ್ರೀಡಾಂಗಣ

ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌
Last Updated 15 ನವೆಂಬರ್ 2022, 5:10 IST
ಅಕ್ಷರ ಗಾತ್ರ

ಹೆಬ್ರಿ: ‘ಕಾರ್ಕಳ ಕ್ಷೇತ್ರದಲ್ಲಿರುವ ಪ್ರಮುಖ ಪೇಟೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಅದರಂತೆ ಮುನಿಯಾಲು ಪೇಟೆಯ ಅಭಿವೃದ್ಧಿಗೂ ಚಾಲನೆ ನೀಡಲಾಗಿದೆ. ಆದ್ಯತೆಯಲ್ಲಿ ಮುನಿಯಾಲಿಗೆ ಸುಸಜ್ಜಿತ ಕ್ರೀಡಾಂಗಣ ಮಂಜೂರು ಮಾಡಿಸುತ್ತೇನೆ’ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಹೆಬ್ರಿ ತಾಲ್ಲೂಕಿನ ಮುನಿಯಾಲು ಪೇಟೆಯಲ್ಲಿ ಭಾನುವಾರ ಕಾಡುಹೊಳೆ ಯಿಂದ ಚಟ್ಕಲ್‌ ಪಾದೆಯ ತನಕ
₹ 7 ಕೋಟಿ ವೆಚ್ಚದಲ್ಲಿ ನಡೆಯಲಿರುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಅವರು ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಕಾರ್ಕಳ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಯ ಪರ್ವ ನಡೆಯುತ್ತಿದೆ. ಅಭಿವೃದ್ಧಿಯಲ್ಲಿ‌ ಕಾರ್ಕಳ ಕ್ಷೇತ್ರಕ್ಕೆ ಎಲ್ಲಾ ಇಲಾಖೆಗಳ ಅನುದಾನಗಳನ್ನು ತಂದು ಮಾದರಿ ಕ್ಷೇತ್ರವಾಗಿ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ 236 ಕಿಂಡಿ ಅಣೆಕಟ್ಟುಗಳು, ಎಣ್ಣೆಹೊಳೆ ಏತನೀರಾವರಿಯ ಮೂಲಕ 1500 ಎಕರೆ ರೈತರ ಕೃಷಿಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಪರಶುರಾಮ‌ ಥೀಮ್‌ ಪಾರ್ಕ್‌ ಲೋಕಾ ರ್ಪಣೆ: ‘ಕಾರ್ಕಳದ ಬೈಲೂರಿನಲ್ಲಿ ವಿಶಾಲ ಪ್ರದೇಶದಲ್ಲಿ ಭವ್ಯವಾಗಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮ ಥೀಮ್ ಪಾರ್ಕ್ ಮತ್ತು ಬೃಹತ್‌ ಬಂಡೆಯ ಮೇಲೆ 33 ಅಡಿ ಎತ್ತರದ ಪರಶುರಾಮನ ಪ್ರತಿಮೆ ಡಿಸೆಂಬರ್‌ನಲ್ಲಿ ಲೋಕಾರ್ಪಣೆಯಾಗಲಿದೆ. ವಸ್ತು ಪ್ರದರ್ಶನದ ಸ್ಟೇಡಿಯಂ, ಮಿನಿ ಥಿಯೇಟರ್ ಒಳಗೊಂಡ ಥೀಮ್‌ ಪಾರ್ಕ್ ನಿರ್ಮಾಣವಾಗುತ್ತಿದೆ. ಕಾರ್ಕಳ ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಹೆಬ್ರಿ, ಕಾರ್ಕಳವನ್ನು ಸೇರಿಸಿ ಪ್ರವಾಸೋದ್ಯಮ ಸರ್ಕ್ಯೂಟ್ ನಿರ್ಮಾಣ ಮಾಡಲು ರೂಪು
ರೇಷೆಗಳು ಸಿದ್ಧವಾಗುತ್ತಿವೆ. ಆ ಮೂಲಕ ಕಾರ್ಕಳವನ್ನು ದಕ್ಷಿಣ ಭಾರತದ ಅತಿದೊಡ್ಡ ಪ್ರವಾಸಿ ತಾಣವಾಗಿ ಮೂಡಿಬರಲಿದೆ’ ಎಂದು ಹೇಳಿದರು.

ಮೆಸ್ಕಾಂ ನಿರ್ದೇಶಕ ಮುನಿಯಾಲು ದಿನೇಶ ಪೈ ಮಾತನಾಡಿ, ಮುನಿಯಾಲಿನ ಸಮಗ್ರ ಅಭಿವೃದ್ಧಿಗೆ ಸುನಿಲ್‌ ಕುಮಾರ್‌ ಕೊಡುಗೆ ಅಪಾರ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು. ವರಂಗ ಗ್ರಾಮ ಪಂಚಾಯಿತಿ ಅದ್ಯಕ್ಷೆ ಉಷಾ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ್ ಪೂಜಾರಿ, ವರಂಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರುತಿ ಆದರ್ಶ‌ ಶೆಟ್ಟಿ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು. ಸುಹಾಸ್ ಶೆಟ್ಟಿ ಮುಟ್ಲುಪಾಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT