ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಬದಿಯ ಗುಡ್ಡ ಮತ್ತೆ ಕುಸಿಯುವ ಆತಂಕ

ಬೈಂದೂರು- ಶಿರೂರು ನಡುವಿನ ಒತ್ತಿನಣೆ ಗುಡ್ಡದ ಸಂಚಾರ
Last Updated 26 ಜೂನ್ 2018, 17:48 IST
ಅಕ್ಷರ ಗಾತ್ರ

ಬೈಂದೂರು: ಮಳೆಗಾಲ ಶುರುವಾದರೆ ಸಾಕು, ಆತಂಕ ಶುರುವಾಗಿ ಬಿಡುತ್ತದೆ. ಅದಕ್ಕೆ ಕಾರಣವೂ ಇದೆ. ಬೈಂದೂರು- ಶಿರೂರು ನಡುವಿನ ಒತ್ತಿನಣೆ ಗುಡ್ಡದ ನಡುವೆ ನಿರ್ಮಾಣಗಿರುವ ಚಥುಷ್ಪಥ ಹೆದ್ದಾರಿ ಕಾಮಗಾರಿ.ಮತ್ತೆ ಗುಡ್ಡ ಕುಸಿದು ಬಿದ್ದರೆ ಸಂಚಾರವೇ ಕಷ್ಟ ಎಂಬ ಭಾವನೆ ಜನರಲ್ಲಿನ ಆತಂಕಕ್ಕೆ ಕಾರಣವಾಗಿದೆ.

ಒತ್ತಿನಣೆಯ ಕಡಿದಾದ ಏರಿನಲ್ಲಿ ಹೋಗಬೇಕಾದ ಹೆದ್ದಾರಿಯನ್ನು ಹಿಂದೆ ಗುಡ್ಡದ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಬಳಸಿ ಸಾಗುವಂತೆ ನಿರ್ಮಿಸಲಾಗಿತ್ತು. ಹೆದ್ದಾರಿಯನ್ನು ಚತುಷ್ಪಥಗೊಳಿಸುವಾಗ ಇಲ್ಲಿನ ತಿರುವನ್ನು ಕಡಿಮೆ ಮಾಡಲು ಒಂದಷ್ಟು ದೂರ ಗುಡ್ಡದ ನಡುವೆ ಮಣ್ಣು ತೆಗೆದು ಕಣಿವೆಯಲ್ಲಿ ರಸ್ತೆಯನ್ನು ಕೊಂಡೊಯ್ಯಲಾಯಿತು,ಇದು ಈಗ ಸಮಸ್ಯೆ ಉಂಟು ಮಾಡುತ್ತಿದೆ.

ಹೆದ್ದಾರಿ ವಿಸ್ತರಣೆ ಆರಂಭದ ಮೊದಲ ವರ್ಷ ಹೊಸದಾಗಿ ಕಡಿದು ನಿರ್ಮಿಸಿದ ಪ್ರದೇಶದ ಅಗಾಧ ಪ್ರಮಾಣದ ಮಣ್ಣು ಗುಡ್ಡದ ಎಲ್ಲೆಡೆಯಿಂದ ಹರಿದು ಬರುತ್ತಿದ್ದ ಮಳೆ ನೀರಿನೊಂದಿಗೆ ಸೇರಿ ಬೈಂದೂರು, ಯಡ್ತರೆ, ಪಡುವರಿ ಗ್ರಾಮಗಳ ರಸ್ತೆಗಳ ಚರಂಡಿ, ವ್ಯವಸಾಯದ ಭೂಮಿಯನ್ನು ಆಕ್ರಮಿಸಿ ಆತಂಕ ಉಂಟುಮಾಡಿತು. ಸಂತ್ರಸ್ತರು ಆಕ್ರೋಶ ವ್ಯಕ್ತ ಪಡಿಸಿದರು.

ಕಳೆದ ಮಳೆಗಾಲದಲ್ಲಿ ಹೆದ್ದಾರಿ ಅಗಲಗೊಳಿಸಲೆಂದು ಕಡಿದ ಗುಡ್ಡದ ಇಕ್ಕಲೆಗಳ ದೊಡ್ಡ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಕುಸಿಯಿತು. ಜನ, ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಈ ವರ್ಷವೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಯಿತು. ಕಡಿದಾಗಿದ್ದ ಇಕ್ಕೆಲಗಳ ಗುಡ್ಡಗಳನ್ನು ಇಳಿಜಾರುಗೊಳಿಸಲಾಯಿತು. ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಕಾಂಕ್ರೀಟ್‌ನ ಇಳಿಜಾರು ರಕ್ಷಣಾ ಪದರು ನಿರ್ಮಿಸಲಾಯಿತು. ಎಲ್ಲದರ ಪರಿಣಾಮವಾಗಿ ಸುರಕ್ಷಿತ ಮಳೆಗಾಲವನ್ನು ಎದುರುನೋಡಲಾಯಿತು. ಆದರೆ ಮಳೆ ಆರಂಭವಾದೊಡನೆ ಹರಿಯಲಾರಂಭಿಸಿದ ನೀರಿನ ಕಾರಣ ಕಾಂಕ್ರೀಟ್ ಪದರದ ಸ್ವಲ್ಪ ಭಾಗ ಕೊರೆದುಹೋಯಿತು.

ಈಗ ಕೊರೆತ ಮೂರು ನಾಲ್ಕು ಕಡೆ ಗುಡ್ಡದ ತುದಿಯಿಂದ ಬುಡದ ತನಕ ನಡೆದಿದೆ. ಗುತ್ತಿಗೆದಾರರ ಕಾರ್ಮಿಕರು ಅಲ್ಲೆಲ್ಲ ವೆಟ್‌ ಮಿಕ್ಷ್ ತುಂಬಿದ ಚೀಲ ಇಟ್ಟಿದ್ದಾರೆ. ಈ ಸಮಸ್ಯೆಗೆ ಇಲ್ಲಿನ ಮಣ್ಣು ಕಾರಣ ಎನ್ನುತ್ತಾರೆ ಸ್ಥಳೀಯರು. ಇಲ್ಲಿನ ಗುಡ್ಡದ ಮೇಲೆನ ಒಂದು ಪದರು ಗಟ್ಟಿ ಕಲ್ಲಿನದ್ದಾದರೆ ಅದರ ಕೆಳಭಾಗ ನೀರಿನೊಂದಿಗೆ ಬೆರೆತು ಹರಿದು ಹೋಗುವಂತ ಶೇಡಿ ಮಣ್ಣು.ಒಂದು ವೇಳೆ ಮತ್ತೆ ಏನಾದರೂ ಇಳಿಜಾರು ಮಣ್ಣು ಕುಸಿದರೆ ಸಂಚಾರಕ್ಕೆ ಕುತ್ತು ಬರುವ ಸಾಧ್ಯತೆ ಇದೆ.

ಹಳೆಯ ನೆನಪು

ಶಿರೂರು ನೀರುಗದ್ದೆಯ ರೈತರೊಬ್ಬರು ಹಳೆಯ ನೆನಪು ಹಂಚಿಕೊಂಡು, ‘ಒತ್ತಿನಣೆ ಗುಡ್ಡದ ಮೂಲಕ ಕೊಂಕಣ ರೈಲು ಸುರಂಗ ಮಾರ್ಗ ಮಾಡುತ್ತಿದ್ದಾಗ ಉತ್ತರ ಇಳಿಜಾರಿನ ಚಿಲುಮೆ ಎಂಬಲ್ಲಿ ಹೆದ್ದಾರಿಯ ನಡುವೆಯೇ ಪದೇ ಪದೇ ಮಣ್ಣು ಕುಸಿಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT