ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಸಮಾಜ ಮೈಕೊಡವಿ ನಿಲ್ಲಲಿ: ಜಗದೀಶ ಕಾರಂತ

ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ
Last Updated 15 ಅಕ್ಟೋಬರ್ 2021, 15:34 IST
ಅಕ್ಷರ ಗಾತ್ರ

ಉಡುಪಿ: ಹಿಂದೂ ಸಮಾಜ ಜಾಗೃತವಾಗಿರುವ ಕಡೆ ಗೋಹತ್ಯೆ, ಲವ್ ಜಿಹಾದ್‌, ಲ್ಯಾಂಡ್ ಜಿಹಾದ್‌ಗೆ ಅವಕಾಶ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಬೇಕು. ಇದಕ್ಕಾಗಿ ಹಿಂದೂ ಸಮಾಜ ಮೈಕೊಡವಿ ನಿಲ್ಲಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಹೇಳಿದರು.

ಶುಕ್ರವಾರ ಹಿಂದೂ ಜಾಗರಣ ವೇದಿಕೆಯಿಂದ ವಿಜಯ ದಶಮಿ ಪ್ರಯುಕ್ತ ಹಮ್ಮಿಕೊಂಡಿದ್ದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಹಿಂದೂ ಎಂಬುದು ಘೋಷಣೆಯಲ್ಲ; ಆಚರಣೆಯಾಗಬೇಕು. ಹಿಂದೂ ಸಮಾಜದ ದುರ್ಬಲವಲ್ಲ, ಅಪಮಾನ, ಆಕ್ರಮಣವನ್ನು ಒಪ್ಪುವುದಿಲ್ಲ ಎಂದರು.

ಧರ್ಮ ರಕ್ಷಣೆಗೆ, ಸಮಾಜದ ಸುರಕ್ಷತೆಗೆ, ರಾಷ್ಟ್ರದ ಉಳಿವಿಗೆ, ಎಲ್ಲ ಜಿಹಾದ್‌ಗಳನ್ನು ಮೆಟ್ಟಿನಿಲ್ಲಲು ಹಿಂದೂ ಸಮಾಜ ಎದ್ದು ನಿಲ್ಲಬೇಕು. ಬಹಳಷ್ಟು ಮಂದಿ ತಾಲಿಬಾನಿನ ಕನಸು ಕಾಣುತ್ತಿದ್ದು, ಉಳ್ಳಾಲದವರೆಗೂ ಐಸಿಎಸ್‌ ಉಗ್ರ ಸಂಘಟನೆಯ ಕಬಂಧಬಾಹು ಹರಡಿಕೊಂಡಿದ್ದು, ಜಾಗೃತ ಹಿಂದೂ ಸಮಾಜ ತಡೆಗೋಡೆ ಹಾಕಬೇಕಿದೆ ಎಂದು ದೂರಿದರು.

ರೈತರ ಹೆಸರನ್ನು ಬಳಸಿಕೊಂಡು ಅರಾಜಕತೆ ಹುಟ್ಟುಹಾಕುವ, ದಂಗೆಯನ್ನು ಎಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ. ದೇಶದಲ್ಲಿ ಕಮ್ಯುನಿಸಂ, ಜಾತ್ಯತೀತತೆ ಮಣ್ಣು ಪಾಲಾಗಿದ್ದು, ರಾಷ್ಟ್ರೀಯವಾದ ಮುನ್ನಲೆಗೆ ಬರುತ್ತಿರುವುದನ್ನು ಕಂಡು ವಿರೋಧಿಗಳು ಹತಾಶರಾಗಿದ್ದಾರೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಹಿಷ ಮರ್ಧಿನಿ ದೇವಾಲಯದಿಂದ ಅಂಬಲಪಾಡಿ ಮಹಾಕಾಳಿ ಸಾನಿಧ್ಯದವರೆಗೆ ದುರ್ಗಾದೌಡ್‌ ಪಾದಯಾತ್ರೆ ನಡೆಯಿತು.

ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ, ರಾಜ್ಯ ಪ್ರಚಾರ ಪ್ರಮುಖ್ ಅರವಿಂದ ಕೋಟೇಶ್ವರ, ಪ್ರಾಂತ ಉಪಾಧ್ಯಕ್ಷ ಕಿಶೋರ್ ಕುಮಾರ್, ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ವಿಭಾಗ ಕಾರ್ಯದರ್ಶಿ ಚಿನ್ಮಯ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರು ಇದ್ದರು.

ಹಿಂಜಾವೇ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಸ್ವಾಗತಿಸಿದರು. ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಕಲ್ಲೊಟ್ಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT