ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಬಗೆಯ ಹಲಸು: ಸವಿಯಲು ಸೊಗಸು

ತರಹೇವಾರಿ ಹಲಸಿನ ಖಾದ್ಯಗಳು ಲಭ್ಯ: ಭಾನುವಾರವೂ ಇರಲಿದೆ ಮೇಳ
Last Updated 28 ಮೇ 2022, 15:56 IST
ಅಕ್ಷರ ಗಾತ್ರ

ಉಡುಪಿ: ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ, ಬ್ರಹ್ಮಾವರದ ಕೆವಿಕೆ ಸಹಯೋಗದಲ್ಲಿ ಹಿರಿಯಡ್ಕದ ವೀರಭದ್ರಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಆರಂಭವಾದ ಹಲಸಿನ ಮೇಳಕ್ಕೆ ಸಾರ್ವಜನಿಕರಿಗೆ ಉತ್ತಮ ಸ್ಪಂದನ ವ್ಯಕ್ತವಾಯಿತು.

ಬಯಲುಸೀಮೆ ಹಲಸಿನ ರುಚಿ:ದೊಡ್ಡ ಬಳ್ಳಾಪುರ, ತುಮಕೂರು ಜಿಲ್ಲೆ ಸೇರಿದಂತೆ ಬಯಲು ಸೀಮೆಯಲ್ಲಿ ಬೆಳೆಯುವ ರುಚಿಕರ ಹಲಸಿನ ಸವಿಯನ್ನು ಕರಾವಳಿಗರು ಸವಿದರು. ರುದ್ರಾಕ್ಷಿ ಹಲಸು, ಸಿದ್ದು ಹಲಸು ಮೇಳದ ಆಕರ್ಷಣೆಯಾಗಿತ್ತು. ರಾಜ್ಯದ ಹಲವು ಕಡೆಗಳಿಂದ ಬಂದಿದ್ದ ಹಲಸು ಇಡೀ ಪರಿಸರವನ್ನು ಘಮ್ಮೆನ್ನುವಂತೆ ಮಾಡಿತ್ತು. ಬಂದವರೆಲ್ಲರೂ ಸ್ಥಳದಲ್ಲೇ ಹಲಸಿನ ಹಣ್ಣಿನ ರುಚಿ ನೋಡುವುದರ ಜತೆಗೆ ಮನೆಗೂ ಹಲಸು ಕೊಂಡೊಯ್ದರು.

ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ: ಸಮೃದ್ಧಿ ಮಹಿಳಾ ಮಂಡಳಿಯ ಸದಸ್ಯರು ಹಲಸಿನಿಂದ ಮಾಡಬಹುದಾದ 15 ಬಗೆಯ ಖಾದ್ಯಗಳ ಪ್ರಾತ್ಯಕ್ಷಿಕೆ ತೋರಿಸಿದರು. ಹಲಸಿನ ಬೀಜದ ಪಾಯಸ, ಕಟ್ಲೆಟ್‌, ಹಲಸಿನ ತೊಳೆಯ ಪಲಾವ್‌, ಹಲಸಿನ ಮುಳಕ ಬಾಯಲ್ಲಿ ನೀರೂರಿಸಿದವು.

ಬೆಂಗಳೂರು ತೋಟಗಾರಿಕಾ ಮಹಾವಿದ್ಯಾಲದಯ ಪ್ರಾಧ್ಯಾಪಕ ಡಾ.ಜಿ.ಎಸ್‌.ಕೆ.ಸ್ವಾಮಿ ಹಲಸಿನ ವೈಜ್ಞಾನಿಕ ಕೃಷಿ, ಹಲಸಿನ ತಳಿಗಳ ವಿಶೇಷತೆ, ಗುಣಲಕ್ಷಣ, ಗಿಡಗಳ ಆಯ್ಕೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮಣಿಪಾಲದ ಮಾಹೆ ವೆಲ್‌ಕಮ್‌ ಗ್ರೂಫ್‌ ಗ್ರಾಜುಯೇಟ್ ಸ್ಕೂಲ್ ಆಫ್‌ ಹೋಟೆಲ್ ಅಡ್ಮಿನಿಸ್ಟ್ರೇಷನ್‌ ವಿದ್ಯಾರ್ಥಿಗಳು ತಯಾರಿಸಿದ್ದ ಹಲಸಿನ ಖಾದ್ಯಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಇತ್ತು.

ಇದಕ್ಕೂ ಮುನ್ನ ನಡೆದ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ನಾಯಕ್‌, ಬ್ರಹ್ಮಾವರ ಕೆವಿಕೆ ಹಿರಿಯ ವಿಜ್ಞಾನಿ ಡಾ.ಧನಂಜಯ ಸೇರಿದಂತೆ ಹಲವರು ಇದ್ದರು.

ಕೃಷಿಯಲ್ಲಿ ಸಾಧನೆ ಮಾಡಿದ 10 ಮಂದಿಯನ್ನು ಸನ್ಮಾನಿಸಲಾಯಿತು. ಭಾನುವಾರವೂ ಹಲಸಿನ ಮೇಳ ನಡೆಯಲಿದ್ದು ಸಾರ್ವಜನಿಕರು ಹಲಸಿನ ರುಚಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT