ವಿ.ಎಸ್.ಆಚಾರ್ಯರ ಪಕ್ಷನಿಷ್ಠೆ ಮಾದರಿ: ಸಚಿವ ಜಗದೀಶ್ ಶೆಟ್ಟರ್

ಉಡುಪಿ: ಕರ್ನಾಟಕದಲ್ಲಿ ಜನಸಂಘ ಮೊದಲ ಬಾರಿಗೆ ನಗರಾಡಳಿತದಲ್ಲಿ ಅಧಿಕಾರ ಹಿಡಿಯಲು ಡಾ.ವಿ.ಎಸ್.ಆಚಾರ್ಯ ಅವರ ಶ್ರಮ ಅಪಾರ ಎಂದು ಪಕ್ಷದ ವರಿಷ್ಠರಾದ ಎಲ್.ಕೆ.ಅಡ್ವಾಣಿ ಸದಾ ಸ್ಮರಿಸುತ್ತಿರುತ್ತಾರೆ. ವಿ.ಎಸ್.ಆಚಾರ್ಯ ಅವರದ್ದು ಮೇರು ವ್ಯಕ್ತಿತ್ವ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಉಡುಪಿ ನಗರಸಭೆಯಿಂದ ಮಂಗಳವಾರ ಮಣಿಪಾಲ ಸಿಂಡಿಕೇಟ್ ವೃತ್ತದಿಂದ ಡಿಸಿ ಕಚೇರಿಗೆ ಹೋಗುವ ಮುಖ್ಯರಸ್ತೆಗೆ ಡಾ. ವಿ.ಎಸ್. ಆಚಾರ್ಯ ರಸ್ತೆ ಎಂದು ನಾಮಕರಣ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಶೆಟ್ಟರ್, ‘ಸಚಿವ, ಶಾಸಕರಾಗಿ ಪಕ್ಷ ಸಂಘಟನೆಗೆ ಶ್ರಮಿಸಿದ ವಿ.ಎಸ್.ಆಚಾರ್ಯ ಅವರ ವ್ಯಕ್ತಿತ್ವ ಹಾಗೂ ಪಕ್ಷ ನಿಷ್ಠೆ ಎಲ್ಲರಿಗೂ ಮಾದರಿ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದಲ್ಲಿದ್ದುಕೊಂಡು ಜನ ಸಂಘ ಹಾಗೂ ಬಿಜೆಪಿಯನ್ನು ಈ ಭಾಗದಲ್ಲಿ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗಿದ್ದರು ಎಂದರು.
ವಿ.ಎಸ್.ಆಚಾರ್ಯ ಅವರು ಉಡುಪಿಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿದರು. ದಿಢೀರ್ ಸಚಿವ, ಸಂಸದರಾದವರಲ್ಲ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸಿ ಹಂತಹಂತವಾಗಿ ರಾಜಕೀಯದಲ್ಲಿ ಬೆಳೆಯುತ್ತಾ ಬಂದರು. ವೈದ್ಯಕೀಯ ಶಿಕ್ಷಣದ ಜೊತೆಗೆ ಗೃಹ ಸಚಿವರೂ ಆಗಿದ್ದವರು. ಗೃಹ ಖಾತೆ ಸ್ವಭಾವಕ್ಕೆ ಹೊಂದದಿದ್ದರೂ ಕಠಿಣ ನಿಲುವುಗಳನ್ನು ತಳೆದು ಗೃಹ ಇಲಾಖೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು ಎಂದರು.
ಸಚಿವ ಸಂಪುಟದಲ್ಲಿ ಕ್ಲಿಷ್ಟಕರ ಸಮಸ್ಯೆಗಳು ಎದುರಾದರೆ, ಹಣಕಾಸು ಇಲಾಖೆಯಲ್ಲಿ ಆರ್ಥಿಕ ಸಮಸ್ಯೆಗಳು ತಲೆದೋರಿದರೆ ತಕ್ಷಣ ಪರಿಹಾರ ಸೂಚಿಸುತ್ತಿದ್ದರು. ಕರಾವಳಿ ಭಾಗದ ಅಭಿವೃದ್ಧಿಗೆ ಸದಾ ಮುಂದೆ ನಿಲ್ಲುತ್ತಿದ್ದರು. ಕರಾವಳಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನಕ್ಕೆ ಸಂಪುಟದಲ್ಲಿ ವಾದ ಮಾಡಿ ಮಂಜೂರು ಮಾಡಿಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿದರು.
ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ, ಪೌರಾಯುಕ್ತ ಡಾ. ಉದಯ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಡಾ. ವಿ.ಎಸ್. ಆಚಾರ್ಯ ಅವರ ಪುತ್ರ ಡಾ. ರವಿರಾಜ ಆಚಾರ್ಯ, ಡಾ. ಕಿರಣ್ ಆಚಾರ್ಯ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.