ಸೋಮವಾರ, ಆಗಸ್ಟ್ 8, 2022
23 °C

ಕೃಷ್ಣ ಮಠದಲ್ಲಿ ಸರಳ ಜನ್ಮಾಷ್ಟಮಿ: ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು, ಮಧ್ಯರಾತ್ರಿ 12:16ಕ್ಕೆ ಕೃಷ್ಣನಿಗೆ ಅರ್ಘ್ಯ ಸಮರ್ಪಿಸಲಾಯಿತು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ರಾತ್ರಿ ತುಳಸಿ ಅರ್ಚನೆ ಹಾಗೂ ಮಹಾಪೂಜೆ ನೆರವೇರಿಸಿ ಗರ್ಭಗುಡಿಯಲ್ಲಿ ಕೃಷ್ಣದೇವರಿಗೆ ಅರ್ಘ್ಯ ಅರ್ಪಿಸಿದರು. 

ಬಳಿಕ ಕೃಷ್ಣಾಪುರ ಮಠಾಧೀಶರಾದ  ವಿದ್ಯಾಸಾಗರತೀರ್ಥರು, ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥರು ಕೃಷ್ಣನಿಗೆ ಹಾಗೂ ಚಂದ್ರೋದಯ ಸಮಯದಲ್ಲಿ ತುಳಸೀಕಟ್ಟೆಯಲ್ಲಿ ಚಂದ್ರನಿಗೆ  ಅರ್ಘ್ಯ ಸಮರ್ಪಿಸಿದರು.

ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಧಾರ್ಮಿಕ ವಿಧಿವಿಧಾನಗಳಲ್ಲಿ ಅರ್ಘ್ಯ ಸಮರ್ಪಣೆ ಮುಖ್ಯವಾದುದು. ಶುಕ್ರವಾರ ಮಧ್ಯಾಹ್ನ ರಥ ಬೀದಿಯಲ್ಲಿ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಮೊಸರು ಕುಡಿಕೆ ಒಡೆಯುವುದು ಸೇರಿದಂತೆ ಕೃಷ್ಣನ ಲೀಲೋತ್ಸವಗಳು ನಡೆಯಲಿವೆ. ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಮೆರವಣಿಗೆ ನಡೆಸಿ ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ.

ವಿಟ್ಲಪಿಂಡಿ ಉತ್ರವದಲ್ಲಿ ಪ್ರತಿವರ್ಷ ಸಾವಿರಾರು ಭಕ್ತರು ಭಾಗವಹಿಸುತ್ತಿದ್ದರು. ಇಡೀ ರಥಬೀದಿ ಭಕ್ತರಿಂದ ತುಂಬಿ ಹೋಗುತ್ತಿತ್ತು. ಈ ವರ್ಷ ಕೋವಿಡ್ ಸೋಂಕು ಹರಡುವ ಭೀತಿಯಿಂದ ಸರ್ಕಾರದ ಮಾರ್ಗಸೂಚಿಯಂತೆ ಉತ್ಸವದಲ್ಲಿ ಭಾಹವಹಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಮಠದ ಸಂಪ್ರದಾಯದಂತೆ ಆಚರಣೆಗಳು ಮಾತ್ರ ನಡೆಯುತ್ತಿವೆ.

ವಿದ್ವಾಂಸರು, ಮಠದ ಸಿಬ್ಬಂದಿ ಹಾಗೂ ಯತಿಗಳು ಮಾತ್ರ ಭಾಗವಹಿಸಲಿದ್ದಾರೆ. ಭಕ್ತರು ಮನೆಯಲ್ಲಿಯೇ ಉತ್ಸವವನ್ನು ನೇರವಾಗಿ ಮಠದ ಫೇಸ್‌ಬುಕ್ ಪೇಜ್ ಹಾಗೂ ಸ್ಥಳೀಯ ವಾಹಿನಿಯಲ್ಲಿ ವೀಕ್ಷಣೆ ಮಾಡಬಹುದು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು