ಕುಂದಾಪುರ: ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನಕ್ಕೆ ಹರಕೆಯ ರೂಪದಲ್ಲಿ ಬಂದಿದ್ದ ಚಿನ್ನದ ಆಭರಣಗಳನ್ನು ಕಳವು ಮಾಡಿ, ನಕಲಿ ಆಭರಣಗಳನ್ನು ಇಟ್ಟು ಪೂಜೆ ಮಾಡುತ್ತಿದ್ದ, ದೇವಸ್ಥಾನದ ಅರ್ಚಕ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನರಸಿಂಹ ಭಟ್ (43) ಎಂಬುವವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹರಕೆ ರೂಪದಲ್ಲಿ ಭಕ್ತರು ಒಪ್ಪಿಸುತ್ತಿದ್ದ ಚಿನ್ನ ಬಳಸಿ ದೇವಸ್ಥಾನದ ಆಡಳಿತ ದೇವಿಗೆ ಚಿನ್ನಾಭರಣಗಳನ್ನು ಮಾಡಿಸಿತ್ತು. ಅದನ್ನು ನಿತ್ಯ ಪೂಜೆಯ ವೇಳೆ ಅಮ್ಮನವರಿಗೆ ತೊಡಿಸಲಾಗುತ್ತಿತ್ತು. ನವರಾತ್ರಿ ಸಂಭ್ರಮಾಚರಣೆಗೆ ಆಭರಣಗಳ ಶುದ್ಧಾಚಾರಕ್ಕಾಗಿ ಕೊಡುವಂತೆ ನರಸಿಂಹ ಭಟ್ ಬಳಿ ಆಡಳಿತ ಮಂಡಳಿ ಶನಿವಾರ ಕೇಳಿತ್ತು. ಆಭರಣದ ಬಗ್ಗೆ ಸಂದೇಹ ಬಂದು ವಿಚಾರಿಸಿದಾಗ ವೈಯಕ್ತಿಕ ಕಾಣಕ್ಕಾಗಿ ಆಭರಣ ತೆಗೆದು ನಕಲಿ ಆಭರಣ ಇರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಭಕ್ತರು ದೇವಿಗೆ ಅರ್ಪಿಸಿದ 40 ಗ್ರಾಂ ತೂಕದ ಚಿನ್ನದ ಜೋಬಿನ ಸರ, 73 ಗ್ರಾಂ ತೂಕದ ಚಿನ್ನದ ಕಾಸಿ ತಾಳಿ ಸರ, 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 6 ಗ್ರಾಂ ತೂಕದ ಚಿನ್ನದ 3 ತಾಳಿ, 64 ಗ್ರಾಂ ತೂಕದ ಚಿನ್ನದ ನೆಕ್‌ಲೇಸ್, 8 ಗ್ರಾಂ ತೂಕದ ಚಿನ್ನದ ಚೈನ್ ಕಳವಾಗಿದ್ದು ಇದರ ಅಂದಾಜು ಬೆಲೆ ₹ 21.12 ಲಕ್ಷ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮಡಿ ಶಂಕರ ಖಾರ್ವಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿಯೂ ಇದೇ ಮಾದರಿಯಲ್ಲಿ ಅಸಲಿ ಚಿನ್ನಾಭರಣಗಳನ್ನು ಕಳವು ಮಾಡಿ ಅದಕ್ಕೆ ಪರ್ಯಾಯವಾಗಿ ನಕಲಿ ಚಿನ್ನಾಭರಣ ಇಟ್ಟಿದ್ದ ಪ್ರಕರಣ ಸಂಚಲನ ಸೃಷ್ಟಿಸಿತ್ತು. ಪ್ರಕರಣ ವಿಚಾರಣೆಯ ಹಂತದಲ್ಲಿ ಇದ್ದರೂ ಇನ್ನೂ ಕಳವಾಗಿರುವ ಚಿನ್ನ ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಬಂದಿಲ್ಲ ಎನ್ನುತ್ತಾರೆ ಭಕ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.