ಶುಕ್ರವಾರ, ಡಿಸೆಂಬರ್ 4, 2020
24 °C
ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕರಾವಳಿ ರಕ್ಷಣೆಗೆ, ಮೀನುಗಾರರ ನೆರವಿಗೆ ‘ಕಡಲು’ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರಾವಳಿ ತೀರಗಳ ರಕ್ಷಣೆ ಹಾಗೂ ಮೀನುಗಾರರ ಹಿತದೃಷ್ಟಿಯಿಂದ ಕರಾವಳಿ ಕಾವಲು ಪಡೆ ಹಾಗೂ ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ‘ಕಡಲು’ ಆ್ಯಪ್‌ ಸಿದ್ಧಪಡಿಸಲಾಗಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಲ್ಯಾಣಪುರದ ಮೂಡುಕುದ್ರುವಿನಲ್ಲಿ ಹಮ್ಮಿಕೊಂಡಿದ್ದ ‘ಕಡಲು’ ಆ್ಯಪ್‌ ಬಿಡುಗಡೆ ಹಾಗೂ ಪಂಜರ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮೀನುಗಾರರ ಹಾಗೂ ಬೋಟ್‌ಗಳ ಚಲನವಲನಗಳ ಮೇಲೆ ನಿಗಾ ಇಡುವುದು, ಮೀನುಗಾರರು ಸಮಸ್ಯೆಗೆ ಸಿಲುಕಿದಾಗ ನೆರವಿಗೆ ಧಾವಿಸುವುದು, ಕರಾವಳಿಯ ಭದ್ರತೆ ಮಾಡುವುದು ಆ್ಯಪ್‌ ರಚನೆಯ ಹಿಂದಿರುವ ಮುಖ್ಯ ಉದ್ದೇಶ. ಆ್ಯಪ್‌ನಿಂದ ಸಾಕಷ್ಟು ಪ್ರಯೋಜನಗಳಿದ್ದು, ಮೀನುಗಾರರು ಬಳಸಿಕೊಳ್ಳಬೇಕು’ ಎಂದರು.

ದೇಶದಲ್ಲಿ ಕಡಲ ಮೀನುಗಾರಿಕೆಯಲ್ಲಿ ರಾಜ್ಯ ನಾಲ್ಕನೇ ಸ್ಥಾನ, ಒಳನಾಡು ಮೀನುಗಾರಿಕೆ 9ನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೇರುವ ನಿಟ್ಟಿನಲ್ಲಿ ಶ್ರಮವಹಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಮೀನುಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ, ಆಧುನಿಕ ಪದ್ಧತಿಯಲ್ಲಿ ಮೀನು ಮರಿಗಳ ಉತ್ಪಾದನೆ, ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಕೋವಿಡ್‌ ಕಾರಣದಿಂದ ಎಲ್ಲ ಕ್ಷೇತ್ರಗಳು ಹಿನ್ನಡೆಯಲ್ಲಿದ್ದರೂ ಕೃಷಿ ಹಾಗೂ ಮೀನುಗಾರಿಕಾ ಕ್ಷೇತ್ರ ಪ್ರಗತಿ ಸಾಧಿಸಿವೆ. ನಿರುದ್ಯೋಗಿಗಳು ಮತ್ಸ್ಯೋದ್ಯಮದತ್ತ ಒಲವು ತೋರುತ್ತಿದ್ದು, ಅವರಿಗೆ ನೆರವಾಗಲು ರಾಜ್ಯದಾದ್ಯಂತ ಪಂಜರ ಕೃಷಿಗೆ ಒತ್ತು ನೀಡಲಾಗುತ್ತಿದೆ. ಪಂಜರ ಕೃಷಿ ಮಾಡುವುದು ಹೇಗೆ, ಸರ್ಕಾರದಿಂದ ಸಿಗುವ ಸವಲತ್ತುಗಳು ಏನು ಎಂಬ ಬಗ್ಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎಂದರು.

ಕರಾವಳಿ ಕಾವಲು ಎಸ್‌ಪಿ ಆರ್‌.ಚೇತನ್ ಮಾತನಾಡಿ, ‘ಮುಂಬೈ ಮೇಲಿನ ಉಗ್ರರ ದಾಳಿಯ ನಂತರ ಕರಾವಳಿ ತೀರಗಳ ರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಕರಾವಳಿಯ ರಕ್ಷಣಾ ದೃಷ್ಟಿಯಿಂದ ‘ಕಡಲು’ ಆ್ಯಪ್‌ ನೆರವಾಗಲಿದೆ’ ಎಂದರು.

ಹಿಂದೆ, ಸಮುದ್ರಕ್ಕಿಳಿಯುವ ಬೋಟ್‌ಗಳು ಹಾಗೂ ಮೀನುಗಾರರ ಬಗ್ಗೆ ನಿಖರ ಮಾಹಿತಿ ಸಿಗುತ್ತಿರಲಿಲ್ಲ. ಈಗ ‘ಕಡಲು’ ಆ್ಯಪ್‌ನಲ್ಲಿ ಮೀನುಗಾರರು ಬೋಟ್‌ ಸಂಖ್ಯೆ, ಸಮುದ್ರಕ್ಕಿಳಿಯುವವರ ಆಧಾರ್ ಸಂಖ್ಯೆ ಸಹಿತ ಮಾಹಿತಿ ನೋಂದಣಿ ಮಾಡುವುದರಿಂದ ಪ್ರತಿದಿನ ಎಷ್ಟು ಬೋಟ್‌ಗಳು ಕಡಲಿಗಿಳಿದಿವೆ. ಎಷ್ಟು ಮೀನುಗಾರರು ಮೀನುಗಾರಿಕೆ ಮಾಡುತ್ತಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಲಿದೆ ಎಂದರು.

ಮೀನುಗಾರರಿಗೆ ಹೆಚ್ಚು ಅನುಕೂಲ

ಮೊಬೈಲ್‌ ನೆಟ್‌ವರ್ಕ್‌ ಸಿಗುವಷ್ಟು ವ್ಯಾಪ್ತಿಯಲ್ಲಿ ಮೀನುಗಾರರು ಸಮಸ್ಯೆಗೆ ಸಿಲುಕಿದರೆ ಅವರ ನೆರವಿಗೆ ಧಾವಿಸಲು ಸಾಧ್ಯವಿದೆ. ತೂಫಾನ್‌ ಮಾಹಿತಿ, ಗಾಳಿಯ ವೇಗ, ವಾತಾವರಣದ ವಿವರಗಳು ಪ್ರತಿದಿನ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಮುಂದೆ, ಸಮುದ್ರದಲ್ಲಿ ಪ್ರತಿಕೂಲ ಹವಾಮಾನದ ಮುನ್ಸೂಚನೆ, ಮೀನುಗಾರಿಕೆಗೆ ತೆರಳಬೇಕೆ, ಬೇಡವೇ, ಮೀನಿನ ಲಭ್ಯತೆಯ ಸ್ಥಳಗಳನ್ನು ಗುರುತಿಸಿ ಆ್ಯಪ್‌ನಲ್ಲಿ ಮೀನುಗಾರರಿಗೆ ಲಭ್ಯವಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಸ್‌ಪಿ ಆರ್‌.ಚೇತನ್‌ ಭರವಸೆ ನೀಡಿದರು.

ಜಿಲ್ಲಾ ಮೀನುಗಾರಿಕಾ ಇಲಾಖೆ ಹಿರಿಯ ಉಪ ನಿರ್ದೇಶಕರಾದ ಗಣೇಶ್‌, ಪಾರ್ಶ್ವನಾಥ್‌ (ಮಂಗಳೂರು), ಜಂಟಿ ನಿರ್ದೇಶಕ ಡಿ.ತಿಪ್ಪೇಸ್ವಾಮಿ, ಉಪ ನಿರ್ದೇಶಕ ಜಿ.ಎಂ.ಶಿವಕುಮಾರ್‌, ಸಹಾಯಕ ನಿರ್ದೇಶಕ ದಿವಾಕರ್ ಖಾರ್ವಿ, ವಿಜ್ಞಾನಿಗಳಾದ ಡಾ.ಪ್ರತಿಭಾ ರೋಹಿತ್‌, ಡಾ.ರಾಜೇಶ್‌, ಪಿಡಿಒ ಯೋಗಿತಾ, ಪಂಚರ ಕೃಷಿ ತಜ್ಞ ಪ್ರೊ.ಮನೋಹರ್ ಪೈ, ನಗರಸಭೆ ಸದಸ್ಯ ವಿಜಯ್ ಕೊಡವೂರು, ಮುಖಂಡ ವಿಶುಕುಮಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು