ಹಿರಿಯಡ್ಕ: ಬೈಂದೂರು ತಾಲ್ಲೂಕು ನಾಗೂರಿನ ಕಲಾಪ್ರಿಯ ಮಿತ್ರ ಬಳಗ ಈ ಬಾರಿ ಜನ್ಮಕುಂಡಲಿ ಮಾದರಿಯಲ್ಲಿ ‘ಯಕ್ಷಕುಂಡಲಿ’ ಕರಪತ್ರ ಸಿದ್ಧಪಡಿಸಿ ಯಕ್ಷಪ್ರಿಯರ ಗಮನ ಸೆಳೆಯುತ್ತಿದ್ದು, ವೈರಲ್ ಆಗುತ್ತಿದೆ.
ಕಲಾಪ್ರಿಯ ಮಿತ್ರ ಬಳಗ ತನ್ನ ‘ಯಕ್ಷಾಮೃತ–11’ ಕಾರ್ಯಕ್ರಮಕ್ಕೆ ಈ ವಿಭಿನ್ನ ಕರಪತ್ರ ಸಿದ್ಧಪಡಿಸಿದೆ. ಪ್ರತಿ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಯಕ್ಷಗಾನ ಕಲಾವಿದರಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನ ಆಯೋಜಿಸುವ ತಂಡ ಪ್ರತಿ ಬಾರಿ ವಿಭಿನ್ನ ಕರಪತ್ರ ತಯಾರಿಸುತ್ತಿದೆ. ಈ ಹಿಂದೆ ಮದುವೆ ಆಮಂತ್ರಣ ಪತ್ರಿಕೆ, ಪಡಿತರ ಚೀಟಿ, ಆಧಾರ್ ಕಾರ್ಡ್, ದಿನಪತ್ರಿಕೆ ಮುಖಪುಟ, ಇನ್‌ಲ್ಯಾಂಡ್ ಲೆಟರ್ ಮಾದರಿ ಹೀಗೆ ವಿಭಿನ್ನ, ವಿಶೇಷ ಕರಪತ್ರ ಸಿದ್ಧಪಡಿಸಿದೆ.
ಈ ಬಾರಿ ದಿ.ಸುಬ್ರಹ್ಮಣ್ಯ ಧಾರೇಶ್ವರ ಅವರ ಸವಿನೆನಪಿಗಾಗಿ ಆ. 15ರಂದು ನಾಗೂರಿನ ಒಡೆಯರಮಠ ಶ್ರೀಕೃಷ್ಣಲಲಿತ ಕಲಾ ಮಂದಿರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಕಲಾಪ್ರಿಯ ಮಿತ್ರ ಬಳಗ, ಅಭಯಹಸ್ತ ಚಾರಿಟಬಲ್ ಟ್ರಸ್ಟ್ ಉಡುಪಿ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಸಂಜೆ 5ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಬಾಲಕೃಷ್ಣ ಗಾಣಿಗ ಹೇರಂಜಾಲು ಅವರಿಗೆ ಹುಟ್ಟೂರ ಸನ್ಮಾನ ನಡೆಯಲಿದೆ.
ವೈರಲ್ ಆಗುತ್ತಿದೆ ‘ಯಕ್ಷ ಕುಂಡಲಿ’ ಕರಪತ್ರ: ನಾಗೂರಿನ ವಿಶ್ವ ಪ್ರಿಂಟರ್ಸ್ ತಯಾರಿಸಿರುವ ಯಕ್ಷಕುಂಡಲಿ ಕರಪತ್ರದಲ್ಲಿ ಜನ್ಮ ನಕ್ಷತ್ರ, ರಾಶಿ, ಸಂವತ್ಸರ, ಮಾಸ, ವಾರ, ನಕ್ಷತ್ರ, ನಾಮ, ಕರಣ, ವಿಷ, ಅಮೃತ ದಿವಾಮಾನ ಮಾದರಿಯಲ್ಲಿ ವಿಶೇಷ ತಾಳಮದ್ದಳೆ ‘ಝೇಂಕಾರ’ ಶೀರ್ಷಿಕೆಯಡಿಯಲ್ಲಿ ಕಲಾವಿದರ ಸನ್ಮಾನ, ಕಾರ್ಯಕ್ರಮ ನಡೆಯುವ ಸ್ಥಳ, ದಿನಾಂಕ, ತಿಂಗಳು, ಪ್ರಸಂಗದ ಹೆಸರು, ಪಾತ್ರಗಳ ಹೆಸರು ಮುದ್ರಿಸಲಾಗಿದೆ.
10 ಜನ ಸದಸ್ಯರ ಕಲಾಪ್ರಿಯ ಮಿತ್ರಬಳಗ 11 ವರ್ಷಗಳಿಂದ ದೇಣಿಗೆ ಪಡೆಯದೆ ಯಕ್ಷಗಾನ ಪ್ರದರ್ಶನ, ಕಲಾವಿದರಿಗೆ ಸನ್ಮಾನ ಆಯೋಜಿಸುತ್ತಿದ್ದು, ಪ್ರತಿವರ್ಷ ವಿಭಿನ್ನ ಕರಪತ್ರ ಸಿದ್ದಪಡಿಸಿಸುತ್ತಿರುವುದು ಗಮನಾರ್ಹ. ಚಲನಚಿತ್ರ ರಂಗಕ್ಕೆ ಮಾತ್ರ ಸೀಮಿತವಾಗಿದ್ದ ವಿಭಿನ್ನ ಮಾದರಿಯ ಪೋಸ್ಟರ್‌ಗಳು ಇದೀಗ ಯಕ್ಷಗಾನ ರಂಗದಲ್ಲಿಯೂ ಪ್ರಸಿದ್ಧಿಯಾಗುತ್ತಿವೆ ಎಂದು ರಾಘವೇಂದ್ರ ಭಟ್ ತಿಳಿಸಿದರು.
ಸುದರ್ಶನ ವಿಜಯ ತಾಳಮದ್ದಳೆಯಲ್ಲಿ ಭಾಗವತರಾಗಿ ಹೆಬ್ರಿ ಗಣೇಶ್ ಕುಮಾರ್, ಸೀತಾರಾಮ್ ಹೆಬ್ಬಾರ್, ಮದ್ದಳೆಯಲ್ಲಿ ಶಶಾಂಕ್ ಆಚಾರ್ಯ, ಚೆಂಡೆಯಲ್ಲಿ ಉದಯ್ ಕುಮಾರ್ ಐರೋಡಿ ಭಾಗವಹಿಸಲಿದ್ದು, ಅರ್ಥಧಾರಿಗಳಾಗಿ ಜಬ್ಬಾರ್ ಸಮೊ, ವಾಸುದೇವ ರಂಗಾ ಭಟ್, ಪ್ರದೀಪ್ ಸಾಮಗ, ಸುನಿಲ್ ಕುಮಾರ್ ಹೊಲಾಡು, ಸುಧಾಕರ ಆಚಾರ್ಯ ನಂದ್ರೋಳ್ಳಿ ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.