ಪಡುಬಿದ್ರಿ: ಪಡುಬಿದ್ರೆ- ಕಾರ್ಕಳ ರಾಜ್ಯ ಹೆದ್ದಾರಿ 1ರ ಕಂಚಿನಡ್ಕದಲ್ಲಿ ಪ್ರಸ್ತಾವಿತ ಟೋಲ್ ನಿರ್ಮಾಣ ರದ್ದುಗೊಳಿಸುವಂತೆ ಆಗ್ರಹಿಸಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಗುರುವಾರ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದ ಕಾಂಗ್ರೆಸ್ ಪಕ್ಷದ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ಮುನಿಯಾಲ್ ಉದಯಕುಮಾರ್ ಶೆಟ್ಟಿ, ಮುಖಂಡರು, ಕಾರ್ಯಕರ್ತರ ನಿಯೋಗ ತೆರಳಿ ಮನವಿ ಸಲ್ಲಿಸಿತು. ಇಲ್ಲಿನ ಟೋಲ್ ಸಂಗ್ರಹ ಕೇಂದ್ರವನ್ನು ನಿರ್ಮಾಣ ಮಾಡಿದಲ್ಲಿ ಜನಸಾಮಾನ್ಯರ ಮೇಲೆ ಹೊರೆಯಾಗಲಿದೆ. ಈ ನಿಟ್ಟಿನಲ್ಲಿ ಟೋಲ್ ಗೇಟ್ ರದ್ದುಗೊಳಿಸುವಂತೆ ಒತ್ತಾಯಿಸಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಟೋಲ್ ರದ್ದು ಮಾಡುವ ಭರವಸೆ ನೀಡಿದ್ದಾರೆ. ಪಕ್ಷದ ಮೇಲೆ ಇದ್ದ ಅಪವಾದ ಏನಿತ್ತು ಅದಕ್ಕೆ ವಿರಾಮ ಹಾಕುವ ಕೆಲಸ ಆಗಿದೆ ಎಂದು ಈ ಸಂದರ್ಭದಲ್ಲಿ ವಿನಯಕುಮಾರ್ ಸೊರಕೆ ಹೇಳಿದರು.