ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಬ್ಲೂಫ್ಲಾಗ್‌ ಗರಿ, ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆರಿದ್ದು ಹೆಮ್ಮೆ

65ನೇ ಕನ್ನಡ ರಾಜ್ಯೋತ್ಸವ: ಭುವನೇಶ್ವರಿ ದೇವಿಗೆ ಜಿಲ್ಲಾಧಿಕಾರಿ ಮಾಲಾರ್ಪಣೆ, ಕನ್ನಡ ಧ್ವಜಾರೋಹಣ
Last Updated 1 ನವೆಂಬರ್ 2020, 12:33 IST
ಅಕ್ಷರ ಗಾತ್ರ

ಉಡುಪಿ: ಕಾಪು ತಾಲ್ಲೂಕಿನ ಪಡುಬಿದ್ರಿ ಬೀಚ್‌ಗೆ ಪ್ರತಿಷ್ಠಿತ ಬ್ಲ್ಯೂಫ್ಲಾಗ್ ಪ್ರಮಾಣ ಪತ್ರ ಲಭಿಸಿರುವುದು, ಬೈಂದೂರು ಪಟ್ಟಣ ಪಂಚಾಯಿತಿ ರಚನೆ ಹಾಗೂ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಒಪ್ಪಿಗೆ ದೊರೆತಿರುವುದು ಸಂತಸ ಹಾಗೂ ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದರು.

ಜಿಲ್ಲಾಡಳಿತದಿಂದ ಭಾನುವಾರ ಅಜ್ಜರಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಿ ಜಿಲ್ಲಾಧಿಕಾರಿ ಮಾತನಾಡಿದರು.

ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯ ದೃಷ್ಟಿಯಿಂದ ಪಡುಬಿದ್ರಿಯ ಎಂಡ್‌ಪಾಯಿಂಟ್‌ ಬೀಚ್‌ಗೆ ಬ್ಲ್ಯೂಫ್ಲಾಗ್ ಪ್ರಮಾಣಪತ್ರ ಸಿಕ್ಕಿರುವುದು ಮಹತ್ವದ ವಿಚಾರ. ಇದರಿಂದ ಜಿಲ್ಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಗುರುತಿಸಲ್ಪಡಲಿದೆ. ಜಿಲ್ಲೆಯ ಎಲ್ಲ ಬೀಚ್‌ಗಳಿಗೂಬ್ಲ್ಯೂಫ್ಲಾಗ್ ಪ್ರಮಾಣಪತ್ರ ಪಡೆಯಲು ಶ್ರಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಬೈಂದೂರು, ಯಡ್ತರೆ, ಪಡುವರಿ ಗ್ರಾಮಗಳನ್ನು ಒಳಗೊಂಡ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿರುವುದು ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ನಿರ್ಧಾರ. ಉಡುಪಿ ಜಿಲ್ಲೆಯಾಗಿ 23 ವರ್ಷಗಳು ಕಳೆದಿದ್ದು, ಜನರ ಬಹುದಿನಗಳ ಬೇಡಿಕೆಯಾದ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿರುವುದು ಸಂತಸ ತಂದಿದೆ ಎಂದರು.

₹ 115 ಕೋಟಿ ಅನುದಾನದಲ್ಲಿ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡ, 250 ಬೆಡ್‌ಗಳ ವ್ಯವಸ್ಥೆ, 197 ಸಿಬ್ಬಂದಿ ನೇಮಕ, ಆಸ್ಪತ್ರೆಗೆ ಅಗತ್ಯ ಪೀಠೋಪರಣಗಳನ್ನು ಒದಗಿಸಲಾಗುವುದು ಎಂದರು.

ಪಥ ಸಂಚಲನ: ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕರಾವಳಿ ಕಾವಲು ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ಮತ್ತಿತರ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ದಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಬಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಎಸ್‌ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.

ಕೋವಿಡ್ ಹಿನ್ನಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇರಪ್ರಸಾರವನ್ನು ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ವೀಕ್ಷಿಸಲು ವೆಬ್‌ಕಾಸ್ಟ್ ಮತ್ತು ಫೇಸ್‌ಬುಕ್ ಲೈವ್ ವ್ಯವಸ್ಥೆ ಮಾಡಲಾಗಿತ್ತು.

‘ಸಾಧಕ ವಿದ್ಯಾರ್ಥಿಗಳಿಗೆ ₹ 1 ಲಕ್ಷ ಪುರಸ್ಕಾರ’
‌‌ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 36 ಸಾಧಕರಿಗೆ ಮತ್ತು 4 ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗರಿಷ್ಠ ಅಂಕ ಪಡೆದ 9 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್‌ಗಳನ್ನು ವಿತರಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಸಿ ವರ್ಗದ ವಿದ್ಯಾರ್ಥಿನಿ ಸ್ಫೂರ್ತಿ ಅಶೋಕ ರಾಥೋಡ ಮತ್ತು ಕೊಲ್ಲೂರಿನ ಮೂಕಾಂಬಿಕಾ ಪ್ರೌಢಶಾಲೆಯ ಎಸ್‌ಟಿ ವರ್ಗದ ವಿದ್ಯಾರ್ಥಿನಿ ರಶ್ಮಿತಾಗೆ ಸಮಾಜ ಕಲ್ಯಾಣ ಇಲಾಖೆಯಿಂದ, ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಲ ಅವರ ಸ್ಮರಣಾರ್ಥ ₹ 1 ಲಕ್ಷ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT