ಕಾರ್ಕಳ: ಸಮುದಾಯದ ಆಶೋತ್ತರಗಳನ್ನು ಈಡೇರಿಸುವಂತೆ ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರಕ್ಕೆ ನಿರಂತರವಾಗಿ ಹಕ್ಕೋತ್ತಾಯ ಸಲ್ಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯದ ಬೆಂಬಲ ಅವಶ್ಯ ಎಂದು ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ಹೇಳಿದರು.
ತಾಲ್ಲೂಕಿನ ಮಾಳ ಪೇರಡ್ಕದ ಮಲೆಕುಡಿಯ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಮಲೆಕುಡಿಯ ಸಂಘದ 12ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಮಾತನಾಡಿ, ಸಂಘ ಆರಂಭದಿಂದ ಈವರೆಗೂ ಸಮುದಾಯದ ಅಸಹಾಯಕರು, ಅನಾರೋಗ್ಯ ಪೀಡಿತರು, ದುರ್ಬಲರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಸಮುದಾಯದಲ್ಲಿ ವಿದ್ಯಾವಂತರು ಹೆಚ್ಚಾಗಬೇಕು ಎಂಬ ದೃಷ್ಟಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಹಕಾರ ನೀಡಿ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಸನ್ಮಾನ ಕಾರ್ಯಕ್ರಮ ಮಾಡಿ ಪ್ರೋತ್ಸಾಹಿಸಲಾಗುತ್ತಿದೆ. ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗಿದೆ. ಸರ್ವರ ಪ್ರಯತ್ನದಿಂದ ಸಮುದಾಯ ಭವನ ನಿರ್ಮಾಣವಾಗಿದ್ದು, ಇನ್ನಷ್ಟು ಚಟುವಟಿಕೆಗಳನ್ನು ಮಾಡಲು ಅನುಕೂಲವಾಗಿದೆ ಎಂದರು.
ಸಾಮೂಹಿಕ ಸತ್ಯನಾರಾಯಣ ಪೂಜೆ, ವಾರ್ಷಿಕ ಮಹಾಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್ಎಸ್ಎಲ್‌ಸಿ, ಪಿಯುಸಿ ಸಾಧಕರಾದ ಸುಜಯ್ ಪೇರಡ್ಕ, ಪೂಜಾ ರೆಂಜಾಳ, ಸುಚಿತ್ರಾ ಹೆರ್ಮುಂಡೆ, ಪ್ರಸಾದ್ ಮುದ್ರಾಡಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಪೇರಡ್ಕ ಕುಣಿತ ಭಜನೆ ನಡೆಸಿಕೊಟ್ಟರು. ಸಭೆಯಲ್ಲಿ ದರ್ಖಾಸು ಭೂಮಿ, ಮಹಿಳಾ ನಾಯಕತ್ವ ಕಾರ್ಯಾಗಾರ, ಕ್ರೀಡಾಕೂಟ, ಅಜೀವ ಸದಸ್ಯತ್ವ ಅಭಿಯಾನ, ಕಲಾ ತಂಡ ರಚನೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ನೋಣಯ್ಯ ಗೌಡ ರೆಂಜಾಳ, ಪೂರ್ವ ಜಿಲ್ಲಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಜಿಲ್ಲಾ ಸಂಘದ ವಕ್ತಾರ ದಿನೇಶ್ ಗೌಡ ನೂರಾಳ್‌ಬೆಟ್ಟು, ವಕ್ತಾರೆ ಸುಜಾತ ಕಬ್ಬಿನಾಲೆ ಇದ್ದರು. ಶ್ರಾವ್ಯಾ ಪ್ರಾರ್ಥಿಸಿದರು. ಕೋಶಾಧಿಕಾರಿ ಸುಂದರಿ ಪೇರಡ್ಕ ಸ್ವಾಗತಿಸಿ, ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ ವಾರ್ಷಿಕ ಆಡಳಿತ ವರದಿ ಮಂಡಿಸಿ, ನಿರೂಪಿಸಿದರು. ಸೌಮ್ಯ ಅಭಿನಂದನಾ ಪತ್ರ ವಾಚಿಸಿದರು. ಉಪಾಧ್ಯಕ್ಷೆ ಶೋಭ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.