ಕಾರ್ಕಳ: ‘ಸಂಘ ಸಂಸ್ಥೆಗಳು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು’ ಎಂದು ವಕೀಲ ಸಂತೋಷ್ ಕುಮಾರ್ ಹೇಳಿದರು.
ತಾಲ್ಲೂಕಿನ ಕಡ್ತಲ ಸಿರಿಬೈಲು ದೇವಸ್ಥಾನ ಸಭಾಂಗಣದಲ್ಲಿ ಈಚೆಗೆ ಕಾರ್ಕಳ-ಹೆಬ್ರಿ ತಾಲ್ಲೂಕು ಮರಾಠಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ತಾಲ್ಲೂಕು ಮರಾಠಿ ಸಮ್ಮಿಲನದಲ್ಲಿ ಅವರು ಮಾತನಾಡಿದರು.
‘ಕಾರ್ಕಳ ಮರಾಠಿ ಸಮಾಜ ಸೇವಾ ಸಂಘವು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ನೆರವು, ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸಾಧಕ ಪ್ರಶಸ್ತಿ, ತಾಲ್ಲೂಕಿನ ಗದ್ದಿಗೆ ಹಾಗೂ ಕೂಡುವಳಿಕೆಯ ಯಜಮಾನರಿಗೆ ಗೌರವದ ಸತ್ಕಾರ ಮುಂತಾದ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇದು ಇತರ ಸಂಘಟಣೆಗಳಿಗೂ ಮಾದರಿ’ ಎಂದರು.
ಚಂದ್ರ ನಾಯ್ಕ್ ಕೋಟೇಶ್ವರ ಮಾತನಾಡಿ, ‘ಉಳ್ಳವರು ಇಲ್ಲದವರಿಗೆ ಹಂಚಿಕೊಂಡು, ಕಷ್ಟದಲ್ಲಿದ್ದವರಿಗೆ ಊರುಗೋಲಾಗಿ, ಕಡು ಬಡವರಿಗೆ ಆಶ್ರಯದಾತರಾಗಿ ಸಮಾಜದಲ್ಲಿ ತೊಡಗಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ’ ಎಂದರು.
’ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಆಚಾರ–ವಿಚಾರಗಳನ್ನು ಕಲಿಸಿ ಸಮಾಜದ ಆಸ್ತಿಯನ್ನಾಗಿ ಮಾಡೋಣ ಎಂದು ಮಂಗಳೂರಿನ ವಿ.ಪಿ ನಾಯ್ಕ್ ಹೇಳಿದರು.
ಶೇಖರ ಕಡ್ತಲ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಶಂಕರ್ ನಾಯ್ಕ್, ಉಪಾಧ್ಯಕ್ಷೆ ಸುಗಂಧಿ ನಾಯ್ಕ್, ಸುಧಾಕರ ನಾಯ್ಕ್, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಹಿರ್ಗಾನ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಪವನ್ ದುರ್ಗಾ ಇದ್ದರು.
ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಧಕರಿಗೆ ಪ್ರಶಸ್ತಿ, ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಿತೇಶ್ ಕುಮಾರ್ ಬಳಗದಿಂದ ಭಕ್ತಿಗಾನ ಸೌರಭ ನಡೆಯಿತು.
ಕೋಶಾಧಿಕಾರಿ ಶ್ರೀನಿವಾಸ ನಕ್ರೆ ಲೆಕ್ಕಪತ್ರ ಮಂಡಿಸಿದರು. ಯುವ ಘಟಕದ ಅಧ್ಯಕ್ಷ ನಾಗೇಂದ್ರ ಹೆಬ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ ಇರ್ವತ್ತೂರು ವಾರ್ಷಿಕ ವರದಿ ವಾಚಿಸಿದರು. ನಿವೇದಿತಾ ಎಡಪದವು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.