ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಮಟ್ಟಕ್ಕೆ ಕಾರ್ಕಳದ ಬಿಳಿಬೆಂಡೆ: ಸಚಿವ ವಿ. ಸುನಿಲ್ ಕುಮಾರ್

ಅಧಿವೇಶನದಲ್ಲಿ ಶಾಸಕರಿಗೆ ಕಾರ್ಲ ಕಜೆ, ಕಾರ್ಕಳ ಬಿಳಿ ಬೆಂಡೆ: ಸುನಿಲ್‌
Last Updated 7 ಸೆಪ್ಟೆಂಬರ್ 2021, 3:07 IST
ಅಕ್ಷರ ಗಾತ್ರ

ಕಾರ್ಕಳ: ಮುಂದಿನ ದಿನಗಳಲ್ಲಿ ಕಾರ್ಲ ಕಜೆ ಮತ್ತು ಕಾರ್ಲ ಬಿಳಿಬೆಂಡೆಯನ್ನು ಕಾರ್ಕಳದ ಬ್ರಾಂಡ್ ಆಗಿ ರಾಷ್ಟ್ರ
ಮಟ್ಟಕ್ಕೆ ವಿಸ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ಇಲ್ಲಿನ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸೋಮವಾರ ಕಾರ್ಕಳ ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಬಿಳಿಬೆಂಡೆ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಅಧಿವೇಶನ ಸಂದರ್ಭದಲ್ಲಿ ಶಾಸಕರಿಗೆ ಊಟದ ವೇಳೆ ಕಾರ್ಕಳ ಬಿಳಿ ಬೆಂಡೆಯ ಖಾದ್ಯವನ್ನು ನೀಡುವ ಮೂಲಕ ರಾಜ್ಯದಾದ್ಯಂತ ಮಾರುಕಟ್ಟೆ ಕಲ್ಪಿಸುವ ಪ್ರಯತ್ನ ಮಾಡಲಾಗುವುದು.ಬಿಳಿ ಬೆಂಡೆಗೆ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಮೂಲಕ ಪ್ರಯತ್ನಿಸಲಾಗುತ್ತಿದೆ.ಅಧಿಕೃತ ಮಾನ್ಯತೆ ಲಭಿಸಿದರೆ ರೈತರಿಗೆ ಸಬ್ಸಿಡಿ, ಬೆಂಬಲ ದೊರೆಯುವ ಸಾಧ್ಯತೆಯಿದೆ. ಕಾರ್ಕಳದಲ್ಲಿ ಸುಮಾರು 20 ಸಾವಿರ ಕುಟುಂಬಗಳು ಬಿಳೆ ಬೆಂಡೆ ಬೆಳೆಸುವ ಮೂಲಕ ಬೆಂಡೆ ಕೃಷಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.

ಮಹಿಳಾ ಮೋರ್ಚಾದ ವತಿಯಿಂದ ಬಿಳಿ ಬೆಂಡೆ ಮೇಳ ಆಯೋಜಿಸುವ ಮೂಲಕ ಬೆಂಡೆಯಿಂದ ಹತ್ತಾರು ಬಗೆಯ ಖಾದ್ಯ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ವಕೀಲ ಎಂ.ಕೆ.ವಿಜಯ ಕುಮಾರ್ ಮಾತನಾಡಿ ಮಧುಮೇಹಿಯಾದ ನನ್ನನ್ನು ಔಷಧೀಯ ಗುಣವಿರುವ ಬಿಳಿಬೆಂಡೆ ರಕ್ಷಿಸಿದೆ ಎಂದರು.

ಇಲ್ಲಿನ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನಯ ಡಿ. ಬಂಗೇರಾ ಸ್ವಾಗತಿಸಿದರು. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು.

ಬೆಳ್ಮಣ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಲ್ಲಿಕಾ ರಾವ್ ನಿರೂಪಿಸಿದರು. ನಿಟ್ಟೆ ಶಕ್ತಿ ಕೇಂದ್ರದ ಅಧ್ಯಕ್ಷೆ ಮಾನಸ ವಂದಿಸಿದರು.

ಜ್ಯೋತಿ ರಮೇಶ್ ಬಹುಮಾನಿತರ ಪಟ್ಟಿ ವಾಚಿಸಿದರು.

250ಕ್ಕೂ ಹೆಚ್ಚು ಬೆಂಡೆ ಕಟ್ಟು, 75 ಖಾದ್ಯ

ಬೆಂಡೆ ಮೇಳ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚಿನ ಮನೆಗಳಿಂದ ಬೆಂಡೆ ಕಟ್ಟು, 75ಕ್ಕೂ ಹೆಚ್ಚು ಬೆಂಡೆ ಖಾದ್ಯಗಳನ್ನು ಸಿದ್ಧ ಪಡಿಸಿ ತರಲಾಗಿತ್ತು. ಬೆಂಡೆ ಪ್ರದರ್ಶನದಲ್ಲಿ ಪ್ರಥಮ ಸ್ಥಾನವನ್ನು ಮುಡಾರು ಬಿಜೆಪಿ ಮಹಾ ಶಕ್ತಿ ಕೇಂದ್ರ, ದ್ವಿತೀಯ ಸ್ಥಾನವನ್ನು ನಿಟ್ಟೆ ಮತ್ತು ಮರ್ಣೆ ಮಹಾಶಕ್ತಿ ಕೇಂದ್ರ, ತೃತೀಯ ಸ್ಥಾನವನ್ನು ಮುಂಡ್ಕೂರು ಹಾಗೂ ಕಾರ್ಕಳ ನಗರ ಶಕ್ತಿ ಕೇಂದ್ರ ಪಡೆದವು.

ಖಾದ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಹೆಬ್ರಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಸುಗಂಧಿ ನಾಯಕ್, ದ್ವಿತೀಯ ಸ್ಥಾನವನ್ನು ನಗರ ಶಕ್ತಿ ಕೇಂದ್ರದ ಕವಿತಾ ಹರೀಶ್ ಮತ್ತು ಕುಕ್ಕುಂದೂರು ಶಕ್ತಿ ಕೇಂದ್ರದ ಸುಚಿತ್ರಾ ಶೆಟ್ಟಿ, ತೃತೀಯ ಸ್ಥಾನವನ್ನು ನಿಟ್ಟೆ ಶಕ್ತಿ ಕೇಂದ್ರದ ಯಶೋಧಾ ಹಾಗೂ ಮರ್ಣೆ ಶಕ್ತಿ ಕೇಂದ್ರದ ಸುಮಂಗಳಾ ನಾಯಕ್ ಪಡೆದರು. ಮುಡಾರು ಶಕ್ತಿ ಕೇಂದ್ರದ ಗಾಯತ್ರಿ ಪ್ರಭು, ಮುಂಡ್ಕೂರು ಶಕ್ತಿ ಕೇಂದ್ರದ ಅರುಣಾ ಶೆಟ್ಟಿ ಸಮಾಧಾನಕರ ಬಹುಮಾನ ಪಡೆದರು.

ರೈತರ ಉತ್ಪನ್ನ

‘ರೈತರೇ ಸೂಚಿಸಿರುವ ಕಾರ್ಲ ಕಜೆ, ಬಿಳಿ ಬೆಂಡೆಯನ್ನು ಬ್ರಾಂಡ್ ಮಾಡಲಾಗುತ್ತಿದೆ. ಕಾರ್ಕಳ ಜನತೆ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಇವೆರೆಡು ಬೆಳೆ ವ್ಯಾಪಕ ಪ್ರಸಿದ್ಧಿಗೆ ಬರುವಂತಾಗಿದೆ’ ಎಂದು ಸಚಿವ ಸುನಿಲ್‌ಕುಮಾರ್ ಹೇಳಿದರು.

‘ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಮತ್ತು ಕಾರ್ಕಳದ ಆಯ್ದ ರೈತರು ಈ ಬಾರಿ ಬಿಳಿ ಬೆಂಡೆ ಬೀಜ ನೀಡಿರುತ್ತಾರೆ. ಮುಂದಿನ ಬಾರಿ ರೈತರು ತಾವಾಗಿಯೇ ಬಿಳಿ ಬೆಂಡೆ ಬೀಜ ಸಂಗ್ರಹಿಸಿ, ಬಿತ್ತನೆಗೆ ಸಿದ್ಧರಾಗಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT