ಶನಿವಾರ, ಏಪ್ರಿಲ್ 1, 2023
33 °C

ಕಾಪು: ಹನೀಫ್ ಮೂಳೂರು ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಪಕ್ಷವು ರಾಜ್ಯದಲ್ಲಿ 100 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹನೀಫ್‌ ಮೂಳೂರು ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಫೆ.7ರಂದು ಪಕ್ಷದ ಅಧ್ಯಕ್ಷ ಎಂ.ಕೆ.ಫೈಝಿ 44 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಆಡಳಿತದಿಂದ ಜನರು ಬೇಸತ್ತಿದ್ದು ಪರ್ಯಾಯ ರಾಜಕಾರಣದತ್ತ ಚಿಂತಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಸ್‌ಡಿಪಿಐ ಬೆಂಬಲಿಸಿದರೆ ಮತದಾರರ ಆಶೋತ್ತರಗಳಿಗೆ ಬದ್ಧವಾಗಿ ಪಕ್ಷ ಕೆಲಸ ಮಾಡಲಿ ಎಂದು ಭರವಸೆ ನೀಡಿದರು.

ಜಾತ್ಯತೀತತೆ ಹೆಸರಿನಲ್ಲಿ ಗೆಲುವು ಸಾಧಿಸುವ ಕಾಂಗ್ರೆಸ್ ಶಾಸಕರು ಬಳಿಕ ಬಿಜೆಪಿ ಪಕ್ಷಕ್ಕೆ ಮಾರಾಟ ವಾಗುತ್ತಿದ್ದಾರೆ. ಇಷ್ಟಾದರೂ ಎಸ್‌ಡಿಪಿಐ ಜತೆ ಬಿಜೆಪಿಗೆ ನಂಟಿದೆ ಎಂದು ಆರೋಪ ಮಾಡುವ ಸಿದ್ದರಾಮಯ್ಯ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ, ಆರ್‌ಎಸ್‌ಎಸ್ ಕಡೆ ಬೊಟ್ಟುಮಾಡಿ ಅಲ್ಪಸಂಖ್ಯಾತರು ಹಾಗೂ ದಲಿತರು ಮತ ಪಡೆಯುವ ಕಾಂಗ್ರೆಸ್ ಅಧಿಕಾರ ಸಿಕ್ಕ ಬಳಿಕ ಎರಡೂ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡುತ್ತದೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್, ಅವ್ಯವಹಾರ, ಭ್ರಷ್ಟಾಚಾರಗಳಿಂದ ಜನರು ಬೇಸತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಉಡುಪಿ ಜಿಲ್ಲೆಯಲ್ಲಿಯೂ ಹಲವು ಸಮಸ್ಯೆಗಳಿದ್ದು ಕೊಡವೂರಿನ ಮುಸ್ಲಿಮರ ಆರಾಧನಾಲಯವನ್ನು ಮುಚ್ಚಿಸಿ ಅಲ್ಪಸಂಖ್ಯಾತರಿಗೆ ದ್ರೋಹ ಮಾಡಲಾಗಿದೆ. ಮೀನುಗಾರರಿಗೆ ಡೀಸೆಲ್‌, ಸೀಮೆಎಣ್ಣೆ ಸಬ್ಸಿಡಿ ದೊರೆಯುತ್ತಿಲ್ಲ. ಹಾಜಿ ಅಬ್ದುಲ್ಲ ಆಸ್ಪತ್ರೆಯಲ್ಲಿ ರಾಜಕೀಯ ಷಡ್ಯಂತ್ರ ನಡೆದಿದೆ. ಹೀಗೆ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು ಎಸ್‌ಡಿಪಿಐ ಪರಿಹಾರ ನೀಡುವ ನಿಟ್ಟಿನಲ್ಲಿ ಶ್ರಮಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಶಾಹಿದ್ ಅಲಿ, ಉಪಾಧ್ಯಕ್ಷ ಖಲೀಲ್ ಅಹಮದ್, ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹನೀಫ್‌ ಮೂಳೂರು, ರಾಜ್ಯ ಮುಖಂಡ ನವಾಜ್ ಉಳ್ಳಾಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು