ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಿಯುತ್ತಿರುವ ವರ್ಷಧಾರೆಯ ಅಬ್ಬರಕ್ಕೆ ಕುಂದಾಪುರ, ಬೈಂದೂರು ತತ್ತರ

Published 23 ಜುಲೈ 2023, 13:40 IST
Last Updated 23 ಜುಲೈ 2023, 13:40 IST
ಅಕ್ಷರ ಗಾತ್ರ

ಕುಂದಾಪುರ: ಶುಕ್ರವಾರ ಸಂಜೆಯ ಬಳಿಕ ವಿಶ್ರಾಂತಿ ಇಲ್ಲದೆ ಸುರಿಯುತ್ತಿರುವ ವರುಣನ ವರ್ಷಧಾರೆಯ ಅಬ್ಬರಕ್ಕೆ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ನದಿ ಸಮೀಪದ ಪ್ರದೇಶ ಹಾಗೂ ಕೃಷಿ ಗದ್ದೆಗಳ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ನೆರೆ ನೀರು ಕೃಷಿ ತೋಟ, ಗದ್ದೆಗಳನ್ನು ದಾಟಿ ಮನೆಯಂಗಳಕ್ಕೆ ಬಂದು ನಿಂತಿದ್ದು, ಸ್ಥಳೀಯರ ಆತಂಕವನ್ನು ಹೆಚ್ಚಿಸುತ್ತಿದೆ.

ಜಿಲ್ಲೆಯಾದ್ಯಂತ ಮಳೆಯೊಂದಿಗೆ ವೇಗವಾಗಿ ಬೀಸುತ್ತಿರುವ ಗಾಳಿಯ ಒತ್ತಡವೂ ಸೇರಿಕೊಂಡಿದ್ದು, ಉಭಯ ತಾಲ್ಲೂಕಿನಲ್ಲಿ ಹರಿಯುತ್ತಿರುವ ಸೌಪರ್ಣಿಕಾ, ವಾರಾಹಿ, ಗಂಗಾವಳಿ ಮುಂತಾದ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ನದಿ ನೀರಿನ ಬಣ್ಣ ಮಣ್ಣಿನ ಕೆಂಪು ಬಣ್ಣಕ್ಕೆ ತಿರುಗಿದೆ. ಘಟ್ಟದ ಮೇಲ್ಭಾಗದಲ್ಲಿಯೂ ಮಳೆಯಾಗುತ್ತಿರುವುದರಿಂದ ಪಶ್ಚಿಮ ಘಟ್ಟಗಳ ಮೇಲ್ಭಾಗದಿಂದ ಹರಿದು ಬರುವ ನೀರು ಕರಾವಳಿ ಭಾಗದ ನದಿಯನ್ನು ಸೇರಿ ನೆರೆ ಹಾಗೂ ಪ್ರವಾಹದ ಆತಂಕವನ್ನು ಹೆಚ್ಚಿಸುತ್ತಿದೆ.

ಸೌಪರ್ಣಿಕಾ ನದಿ ಹರಿಯುವ ಅಕ್ಕ-ಪಕ್ಕ ಪ್ರದೇಶಗಳಾದ ನಾವುಂದ ಸಾಲ್ಬುಡ, ಮರವಂತೆ, ನಾಡಾ ಗ್ರಾಮ ಪಂಚಾಯಿತಿಯ ಬಡಾಕೆರೆ, ಕಡ್ಕೆ, ಪಡುಕೋಣೆ, ಹಡವು, ತೆಂಗಿನ ಗುಂಡಿ, ಸೇನಾಪುರ, ಕುಂಬಾರಮಕ್ಕಿ, ಕಟ್ಟು, ಹಕ್ಲಾಡಿ ಗ್ರಾಮದ ಬಟ್ಟೆಕುದ್ರು, ಯಳೂರು, ತಪ್ಲು, ಕುಂದಾಪುರದ ಆನಗಳ್ಳಿ, ಬಳ್ಕೂರು ಮುಂತಾದ ಪ್ರದೇಶಗಳು ಜಲಾವೃತವಾಗಿದೆ.

ತೋಟ ಗದ್ದೆಗಳನ್ನು ದಾಟಿ ನೆರೆಯ ನೀರು ಮನೆಯಂಗಳಕ್ಕೆ ಬಂದಿರುವುದರಿಂದ, ಮನೆಯ‌ ಸುತ್ತೆಲ್ಲ ನೀರು ನಿಂತು ದ್ವೀಪದ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್‌ ಹಾಗೂ ಕಂದಾಯ ಇಲಾಖೆಯಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ನೆರೆಯ‌ ನೀರಿನಲ್ಲಿ ಸಿಲುಕಿದ ಜಾನುವಾರುಗಳನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿರುವ ಘಟನೆಯೂ ನಡೆದಿದೆ. ಮನೆಗೆ ತೆರಳುವ ರಸ್ತೆ ಹಾಗೂ ಕಾಲ್ನಡಿಗೆಯ ದಾರಿಗಳಲ್ಲಿ ನೆರೆ ನೀರು ತುಂಬಿರುವುದರಿಂದಾಗಿ ಸ್ಥಳೀಯರು ಸಂಚಾರಕ್ಕಾಗಿ ದೋಣಿ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ.

ಪ್ರತಿ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ನೆರೆಯ ತೊಂದರೆಯನ್ನು ಅನುಭವಿಸುತ್ತಿರುವ ಬೈಂದೂರು ತಾಲ್ಲೂಕಿನ ನಾವುಂದ ಗ್ರಾಮದ ಕುದ್ರು ಭಾಗದ ನೂರಕ್ಕೂ ಅಧಿಕ‌ ಮನೆಯವರು 4-5 ದಿನಗಳ ಕಾಲ ಮನೆ ಬಿಟ್ಟು ಹೊರ ಬರಲಾಗದ ದುಃಸ್ಥಿತಿ‌ ಅನುಭವಿಸುತ್ತಾರೆ.‌

ಹಿಡಿ ಉಪ್ಪು, ದಿನಸಿ, ತರಕಾರಿ ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ತರಬೇಕಾದರೂ ಕೂಡ ದೋಣಿಯನ್ನೇ ಆಶ್ರಯಿಸಿ, ತುಂಬಿ ಹರಿಯುವ ನೀರಿನ ನಡುವೆ ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕು. ಇಲ್ಲಿಗೊಂದು ತೂಗು ಸೇತುವೆ ಮಾಡಿ ಕೊಡಿ ಎಂದು ಆಗ್ರಹಿಸುತ್ತಿದ್ದರೂ, ಸಮಸ್ಯೆಗೆ ಸ್ಪಂದನ ದೊರಕುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT