ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ನೆರೆ ಇಳಿಕೆ: ಸಹಜ ಸ್ಥಿತಿಗೆ ಜನಜೀವನ

ತಗ್ಗಿದ ಮಳೆ: ನೀರು ನುಗ್ಗಿದ ಮನೆ, ಅಂಗಡಿಗಳ ಸ್ವಚ್ಛತೆಗೆ ಜನರ ಹರಸಾಹಸ
Published 9 ಜುಲೈ 2024, 15:14 IST
Last Updated 9 ಜುಲೈ 2024, 15:14 IST
ಅಕ್ಷರ ಗಾತ್ರ

ಉಡುಪಿ: ಬಿರುಸಿನ ಮಳೆಗೆ ಜಲಾವೃತಗೊಂಡಿದ್ದ ನಗರದ ಹಲವು ಪ್ರದೇಶಗಳಲ್ಲಿ ಮಂಗಳವಾರ ನೆರೆ ನೀರು ಇಳಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಎರಡು ದಿನ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಗುಂಡಿಬೈಲು, ಕರಂಬಳ್ಳಿ, ಪಾಡಿಗಾರ, ಸಗ್ರಿ ಚಕ್ರ ತೀರ್ಥ, ಬನ್ನಂಜೆ, ಬಡಗುಪೇಟೆಯಲ್ಲಿ ನೆರೆ ಬಂದು ಹಲವು ಮನೆಗಳು ಹಾಗೂ ಅಂಗಡಿಗಳಿಗೆ ನೀರು ನುಗ್ಗಿತ್ತು.

ಸೋಮವಾರ ಹಗಲಿಡೀ ಎಡೆಬಿಡದೆ ಭಾರಿ ಮಳೆ ಸುರಿದ ಪರಿಣಾಮ ಪ್ರವಾಹದ ನೀರು ಇಳಿಮುಖವಾಗಿರಲಿಲ್ಲ. ನಗರದ ಹಲವೆಡೆ ರಸ್ತೆಗಳೂ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಹುತೇಕ ರಸ್ತೆಗಳಿಂದಲೂ ಮಂಗಳವಾರ ನೆರೆ ನೀರು ಇಳಿಕೆಯಾಗಿದೆ.

‌ಪಾಡಿಗಾರ್‌ನಲ್ಲಿ ಪಿ.ಜಿ.ಯಲ್ಲಿ ತಂಗಿದ್ದ ವಿದ್ಯಾರ್ಥಿನಿಯರನ್ನು ಬೋಟ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಅಗ್ನಿಶಾಮಕ ದಳದವರು ಸ್ಥಳಾಂತರಿಸಿದ್ದರು. ಅವರೆಲ್ಲ ಮತ್ತೆ ಪಿ.ಜಿ.ಗೆ ಮರಳಿದ್ದಾರೆ.‌ ಮಳೆ ಕಡಿಮೆಯಾದ ಕಾರಣ ಇಂದ್ರಾಳಿ ನದಿಯಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದೆ.

ಪ್ರತಿ ಸಲವೂ ಭಾರಿ ಮಳೆ ಬಂದಾಗ ಇಂದ್ರಾಳಿ ನದಿಯಲ್ಲಿ ನೀರು ಉಕ್ಕಿ ಹರಿದು ಸಮೀಪದ ತಗ್ಗು ಪ್ರದೇಶಗಳು ಜಲಾವೃತವಾಗುತ್ತದೆ. ಮಳೆ ನಿಂತ ಅಲ್ಪ ಸಮಯದಲ್ಲೇ ನೆರೆ ನೀರೂ ಇಳಿಕೆಯಾಗುತ್ತದೆ. ಆದರೆ ಈ ಬಾರಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಹೆಚ್ಚಿನ ಸ್ಥಳಗಳು ಜಲಾವೃತವಾಗಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಜೋರು ಮಳೆ ಬಂದಾಗ, ನೀರು ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆಯಿಲ್ಲದೆ ನೆರೆ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟವರು ಮುಂದಾಗಬೇಕು ಎಂದೂ ಒತ್ತಾಯಿಸಿದ್ದಾರೆ.

ಬಡಗುಪೇಟೆಯಲ್ಲಿ ಹಲವು ಅಂಗಡಿಗಳಿಗೆ ನೆರೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮಳೆ ನೀರಿನ ಜೊತೆ ಚರಂಡಿಯ ಕೊಳಚೆ ನೀರೂ ಅಂಗಡಿಗಳೊಳಗೆ ನುಗ್ಗಿದ ಕಾರಣ ಸ್ವಚ್ಛಗೊಳಿಸಲು ಹರಸಾಹಸ ಪಡಬೇಕಾಯಿತು ಎಂದು ವ್ಯಾಪಾರಿ ತಾರೇಶ್‌ ಅಳಲು ತೋಡಿಕೊಂಡರು.

ಕಲ್ಸಂಕ–ಅಂಬಾಗಿಲು ಮುಖ್ಯರಸ್ತೆಯ ಕೆಲವೆಡೆ ಮಾತ್ರ ಮಂಗಳವಾರ ಬೆಳಿಗ್ಗೆಯೂ ಅಲ್ಪ ಪ್ರಮಾಣದಲ್ಲಿ ಮಳೆಯ ನೀರು ಸಂಗ್ರಹಗೊಂಡಿದ್ದ ಪರಿಣಾಮವಾಗಿ ಪಾದಚಾರಿಗಳಿಗೆ ತೊಂದರೆಯಾಯಿತು.

ವಿವಿಧೆಡೆ ಮನೆಗಳಿಗೆ ಹಾನಿ: ಸೋಮವಾರ ಸುರಿದಿದ್ದ ಮಳೆಗೆ ಜಿಲ್ಲೆಯ ವಿವಿಧೆಡೆ ಮನೆಗಳಿಗೆ ಹಾನಿಯುಂಟಾಗಿದೆ.
ಕುಂದಾಪುರದ ಕಾಳಾವರ, ಕೋಟೇಶ್ವರ, ತಲ್ಲೂರು, ಬೈಂದೂರು ತಾಲ್ಲೂಕಿನ ಕಂಬದ ಕೋಣೆ, ಉಡುಪಿಯ ಕೊರಂಗ್ರಪಾಡಿಯಲ್ಲಿ ಮನೆಗಳು ಭಾಗಶಃ ಹಾನಿಗೊಂಡಿವೆ.

ಚರಂಡಿ ಸ್ವಚ್ಛತೆ:

ಭಾರಿ ಮಳೆಯಿಂದಾಗಿ ನೆರೆ ಬಂದಿದ್ದ ಮೂಡುಬೆಟ್ಟು ವಾರ್ಡಿನ ಮಧ್ವನಗರ, ಮೂಡುತೂಟ, ಪಲ್ಲಮಾರು, ಚೆಂಡ್ಕಳ  ಪ್ರದೇಶಗಳ ಮನೆಗಳಿಗೆ ಮೂಡುಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಶ್ರೀಶ ಕೊಡವೂರು ಭೇಟಿ ನೀಡಿದರು.

ಅವರು ಸಮಸ್ಯೆಯನ್ನು ಉಡುಪಿ ನಗರಸಭಾ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತುರ್ತಾಗಿ ಜೆಸಿಬಿ ಹಾಗೂ ಸಿಬಂದಿ ಮೂಲಕ  ಚರಂಡಿಯ ಅಡೆತಡೆಗಳನ್ನು ತೆಗೆದು ಸರಾಗವಾಗಿ ನೀರು ಹರಿದು ಹೋಗಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಯಿತು.

ಹಾನಿಗೀಡಾದ ಮನೆಗಳಿಗೆ ತಹಶೀಲ್ದಾರ್ ಗುರುರಾಜ್ ಹಾಗೂ ಮಲ್ಪೆ ವಿ.ಎ. ಕಾರ್ತಿಕ್ ಭಟ್  ಭೇಟಿ ನೀಡಿ ಪರಿಶೀಲಿಸಿದರು.

ಭಾರಿ ಮಳೆಯಿಂದಾಗಿ ನೆರೆ ಬಂದಿದ್ದ ಮೂಡುಬೆಟ್ಟು ವಾರ್ಡಿನ ಮಧ್ವನಗರ ಮೂಡುತೂಟ ಪಲ್ಲಮಾರು ಚೆಂಡ್ಕಳ ಪ್ರದೇಶಗಳ ಮನೆಗಳಿಗೆ ಮೂಡುಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಶ್ರೀಶ ಕೊಡವೂರು ಭೇಟಿ ನೀಡಿ ಪರಿಶೀಲಿಸಿದರು
ಭಾರಿ ಮಳೆಯಿಂದಾಗಿ ನೆರೆ ಬಂದಿದ್ದ ಮೂಡುಬೆಟ್ಟು ವಾರ್ಡಿನ ಮಧ್ವನಗರ ಮೂಡುತೂಟ ಪಲ್ಲಮಾರು ಚೆಂಡ್ಕಳ ಪ್ರದೇಶಗಳ ಮನೆಗಳಿಗೆ ಮೂಡುಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಶ್ರೀಶ ಕೊಡವೂರು ಭೇಟಿ ನೀಡಿ ಪರಿಶೀಲಿಸಿದರು

‘ಮಳೆನೀರು ಹರಿದು ಹೋಗಲು ವ್ಯವಸ್ಥೆ’

ನಗರಸಭೆ ಸಿಬ್ಬಂದಿ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಿ ಚರಂಡಿ ತೋಡುಗಳನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದ್ದಾರೆ. ಪ್ರವಾಹ ಸಂತ್ರಸ್ಥರಿಗಾಗಿ ನಗರ ಸಭೆಯ ಪಕ್ಕದ ಶಾಲೆಯೊಂದು ಸೇರಿದಂತೆ ಪರಿಹಾರ ಕೇಂದ್ರಗಳನ್ನು ಗುರುತಿಸಲಾಗಿತ್ತು ಆದರೆ ಇಂತಹ ಕೇಂದ್ರಗಳಿಗೆ ಬರುವವರ ಸಂಖ್ಯೆ ವಿರಳ. ಪ್ರವಾಹದ ನೀರು ಇಳಿಕೆಯಾಗಿರುವ ಬಹುತೇಕ ಪ್ರದೇಶಗಳಲ್ಲಿ ನಗರಸಭೆ ಸಿಬ್ಬಂದಿ ಬ್ಲೀಚಿಂಗ್ ಪೌಡರ್‌ಗಳನ್ನು ಹರಡಿದ್ದಾರೆ. ಈ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ನಗರಸಭೆಯ ಪೌರಾಯುಕ್ತ ರಾಯಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT