ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರ್ವ: ಜೇನುಕೃಷಿಯಲ್ಲಿ ಖುಷಿಕಂಡ ‘ಬಡವರ ಡಾಕ್ಟರ್’ ಉದಯ್

ವೈದ್ಯ ವೃತ್ತಿಯೊಂದಿಗೆ ಸಾವಯವ ಕೃಷಿ
Published 29 ಮೇ 2024, 5:55 IST
Last Updated 29 ಮೇ 2024, 5:55 IST
ಅಕ್ಷರ ಗಾತ್ರ

ಶಿರ್ವ: ಹಲವಾರು ವರ್ಷಗಳಿಂದ ಕಟಪಾಡಿಯಲ್ಲಿ ಬರೇ ₹20ಕ್ಕೆ ಬಡವರಿಗೆ ಚಿಕಿತ್ಸೆ ಕೊಡುವ ಮೂಲಕ ಬಡವರ ಡಾಕ್ಟರ್ ಎಂದೇ ಖ್ಯಾತಿ ಪಡೆದಿರುವ ಡಾ.ಉದಯ್ ಕುಮಾರ್ ವೈದ್ಯಕೀಯ ವೃತ್ತಿ ಜೊತೆಗೆ ಇದೀಗ ಜೇನು ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಕಟಪಾಡಿ ಪೇಟೆಯಲ್ಲಿ ಪವಿತ್ರ ಕ್ಲಿನಿಕ್ ನಡೆಸುತ್ತಿರುವ ಉದಯ್ ಕುಮಾರ್ ತನ್ನ ಮನೆಯಂಗಳದಲ್ಲಿ, ಸುತ್ತಮುತ್ತಲಿನಲ್ಲಿ ವಿವಿಧ ರೀತಿಯ ತರಕಾರಿ, ಹಣ್ಣು ಹಂಪಲು ಬೆಳೆಸಿ ಮಾದರಿ ಕೃಷಿಕನಾಗಿ ಮನೆ ಮಾತಾಗಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದಿಟ್ಟು ಜೇನುಕೃಷಿ ಆರಂಭಿಸಿ ಯಶಸ್ಸು ಕಂಡಿದ್ದಾರೆ.

3 ತಿಂಗಳ ಹಿಂದೆ ಜೇನುಕೃಷಿ ಬಗ್ಗೆ ಆಸಕ್ತಿ ತಳೆದು, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪಡೆದುಕೊಂಡು ಮನೆಯಂಗಳದಲ್ಲಿ ಜೇನುಸಾಕಣೆ ಮಾಡುತ್ತಿದ್ದಾರೆ. ಮೂಡುಬೆಳ್ಳೆಯ ಜೇನು ಕೃಷಿಕರಿಂದ ಜೇನು ಸಹಿತ ಆಧುನಿಕ ಮಾದರಿಯ ಜೇನುಗೂಡುಗಳನ್ನು ತರಿಸಿಕೊಂಡು ಮನೆಯ ಹಿತ್ತಲಿನಲ್ಲಿ ಅಳವಡಿಸಿದ್ದಾರೆ. ಜೇನು ಸಾಕಣೆ, ನಿರ್ವಹಣೆ ಬಗ್ಗೆ ಅವರಿಂದಲೇ ಕಾಲಕಾಲಕ್ಕೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

‘ಮನೆಯಂಗಳದಲ್ಲಿ ಜೇನುಗೂಡಿನಲ್ಲಿ ಬೆಳೆಸಿರುವ ಜೇನು ಆರೋಗ್ಯಕರವಾಗಿದೆ. ಮುಂದಿನ ದಿನಗಳಲ್ಲಿ ನಾಲ್ಕೈದು ಹೆಚ್ಚುವರಿ ಜೇನು ಗೂಡುಗಳನ್ನು ಅಳವಡಿಸಿಕೊಂಡು ಜೇನುಕೃಷಿ ವಿಸ್ತರಿಸುವ ಯೋಜನೆಯಿದೆ’ ಎಂದು ಉದಯ್ ತಿಳಿಸಿದರು.

ಅವರು ಬಿಡುವಿನ ವೇಳೆಯಲ್ಲಿ ಹೆಚ್ಚು ಹೆಚ್ಚು ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೈತೋಟದಲ್ಲಿ ಬೆಂಡೆ, ಮಟ್ಟುಗುಳ್ಳ, ಹೀರೆಕಾಯಿ, ಹರಿವೆ, ಬಸಳೆ, ಮಾವು, ಹಲಸು, ಲಕ್ಷ್ಮಣ ಫಲ, ಚಿಕ್ಕು, ಪೇರಳೆ, ಪಪ್ಪಾಯಿ, ಗೆಣಸು ಸೇರಿದಂತೆ ವಿವಿಧ ಕೃಷಿಯನ್ನು ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರ ಬಳಸಿಯೇ ಬೆಳೆಸು‌ತ್ತಾರೆ. ಪತ್ನಿ ಪ್ರತಿಭಾ ಅವರು ಕೃಷಿ ಕೆಲಸಗಳಲ್ಲಿ ಸಾಥ್ ನೀಡುವುದರಿಂದ ವೈದ್ಯ ಕುಟುಂಬ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ.

ಜೇನು ಸಾಕಣೆ ಕೃಷಿಕರಿಗೆ ವರದಾನ: ಜೇನು ಸಾಕಣೆ ಒಂದು ಹೊಸ ಅನುಭವ. ತರಕಾರಿ, ಹಣ್ಣಿನ ತೋಟದಲ್ಲಿ ಜೇನು ಸಾಕಣೆ ಆರಂಭ ಮಾಡಿರುವುದರಿಂದ ಜೇನು ನೊಣಗಳು ಹೂವಿನ ಮಕರಂದ ಹೀರಿ ಪರಾಗಸ್ಪರ್ಶ ಕ್ರಿಯೆ ಹೆಚ್ಚಿಸಿ, ಇಳುವರಿ ಕೂಡಾ ಅಧಿಕವಾಗಿದೆ. ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಕೃಷಿ ಚಟುವಟಿಕೆ ನೆಚ್ಚಿಕೊಂಡಿದ್ದು, ಜೇನು ಕೃಷಿ ಬಹಳಷ್ಟು ಖುಷಿಕೊಟ್ಟಿದೆ ಎನ್ನುತ್ತಾರೆ ಡಾ.ಉದಯ್ ಕುಮಾರ್ ಶೆಟ್ಟಿ.

‘ಜೇನು ಸಾಕಣೆ ಕೃಷಿಕರಿಗೆ ವರದಾನ’

ಜೇನು ಸಾಕಣೆ ಒಂದು ಹೊಸ ಅನುಭವ. ತರಕಾರಿ ಹಣ್ಣಿನ ತೋಟದಲ್ಲಿ ಜೇನು ಸಾಕಣೆ ಆರಂಭ ಮಾಡಿರುವುದರಿಂದ ಜೇನು ನೊಣಗಳು ಹೂವಿನ ಮಕರಂದ ಹೀರಿ ಪರಾಗಸ್ಪರ್ಶ ಕ್ರಿಯೆ ಹೆಚ್ಚಿಸಿ ಇಳುವರಿ ಕೂಡಾ ಅಧಿಕವಾಗಿದೆ. ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಕೃಷಿ ಚಟುವಟಿಕೆ ನೆಚ್ಚಿಕೊಂಡಿದ್ದು ಜೇನು ಕೃಷಿ ಬಹಳಷ್ಟು ಖುಷಿಕೊಟ್ಟಿದೆ ಎನ್ನುತ್ತಾರೆ ಡಾ.ಉದಯ್ ಕುಮಾರ್ ಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT