ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾರ: ₹70 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು ಲೋಕಾರ್ಪಣೆಗೆ ಸಿದ್ಧ

ಸಂಚಾರಕ್ಕೆ ಮುಕ್ತವಾಗಲಿದೆ ಬೇಳಂಜೆ ಸೇತುವೆ
Published 11 ಜೂನ್ 2024, 8:05 IST
Last Updated 11 ಜೂನ್ 2024, 8:05 IST
ಅಕ್ಷರ ಗಾತ್ರ

ಹೆಬ್ರಿ: ತಾಲ್ಲೂಕಿನ ಕೃಷಿಕರಿಗೆ ನೆರವಾಗುವಂತೆ ಚಾರ ಜವಾಹರ್‌ ನವೋದಯ ವಿದ್ಯಾಲಯದ ಬಳಿ ಸೀತಾನದಿಗೆ ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ₹70 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ಲೋಕಾರ್ಪಣೆಗೆ ಸಿದ್ಧವಾಗಿದೆ.

ಹೆಚ್ಚಿನ ಸಂಖ್ಯೆಯ ರೈತರು ಈ ಅಣೆಕಟ್ಟೆಯ ಪ್ರಯೋಜನ ಪಡೆಯಲಿದ್ದಾರೆ. ಅಂತರ್ಜಲ ವೃದ್ಧಿ, ಕೃಷಿಕರ ತೋಟಗಳಿಗೆ ನೀರಿನ ವ್ಯವಸ್ಥೆ, ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವಿಕೆ, ಕುಡಿಯುವ ನೀರಿನ ಪೂರೈಕೆಗೆ ಇದರಿಂದ ಉಪಯೋಗವಾಗಲಿದೆ.

ಹಳೆಯ ಶಿಥಿಲಗೊಂಡ ಸೇತುವೆಯನ್ನು ಒಡೆಯಲು ಸುಮಾರು ಎರಡು ತಿಂಗಳು ಶ್ರಮಿಸಲಾಗಿದೆ. ಕಾಮಗಾರಿ ಆರಂಭವಾದ ಒಂದೇ ವರ್ಷದಲ್ಲಿ ಅತ್ಯಂತ ಸುಸಜ್ಜಿತ, ವ್ಯವಸ್ಥಿತ ಕಾಮಗಾರಿ ನಡೆದಿದೆ.

ವಾಹನ ಸಂಚಾರಕ್ಕೆ ಮುಕ್ತ: ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣವಾಗುತ್ತಿರುವುದರಿಂದ ಹೆಬ್ರಿ ಹಾಗೂ ಕುಂದಾಪುರ ಸಂಪರ್ಕಿಸುವ ವಾಹನ ಸವಾರರು ಚಾರ ಬಸದಿ ರಸ್ತೆ ಸುತ್ತು ಬಳಸಿ ಹೋಗುತ್ತಿದ್ದರು. ಮಳೆಗಾಲದಲ್ಲಿ ಆಗಾಗ ರಸ್ತೆ ಸಮಸ್ಯೆ ಕಾಡುತ್ತಿತ್ತು.

ಅತಿ ಕಿರಿದಾದ ರಸ್ತೆ ಇರುವುದರಿಂದ ಬಹಳಷ್ಟು ಸಮಸ್ಯೆ ಒಂದು ವರ್ಷದಿಂದ ಉಂಟಾಗಿದೆ. ಸೇತುವೆ ಲೋಕಾರ್ಪಣೆಯ ನಂತರ ಬಹು ಹತ್ತಿರದಿಂದ ಉತ್ತಮ ರಸ್ತೆಯ ವ್ಯವಸ್ಥೆಯೊಂದಿಗೆ ಸವಾರರು ತಲುಪಬಹುದು.

800 ಹೆಕ್ಟೇರ್ ಪ್ರದೇಶಗಳಿಗೆ ಉಪಯೋಗ: ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಸುಮಾರು 800 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿಯಿಂದ ಉಪಯೋಗವಾಗಲಿದೆ. ಕೃಷಿ ತೋಟಗಳಿಗೆ, ಕುಡಿಯುವ ನೀರಿಗಾಗಿ, ಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚುತ್ತದೆ. ಈ ಮೂಲಕ ಅಂತರ್ಜಲ ವೃದ್ಧಿಗೆ ಸಹಾಯಕವಾಗುತ್ತದೆ.

ಮೈಸೂರು ಸರ್ಕಾರದ ಸೇತುವೆ: ಈ ಹಿಂದೆ ಈ ಜಾಗದಲ್ಲಿ ಇದ್ದ ಸೇತುವೆಯು 1965ರಲ್ಲಿ ₹4.30 ಲಕ್ಷ  ವೆಚ್ಚದಲ್ಲಿ ಅಂದಿನ ಮೈಸೂರು ಸರ್ಕಾರದ ಕಾಲದಲ್ಲಿ ನಿರ್ಮಾಣವಾಗಿತ್ತು. ಕೆಲವೆಡೆ ಶಿಥಿಲವಾಗಿದ್ದು ಬಿಟ್ಟರೆ ಇನ್ನು ಕೆಲವು ವರ್ಷಗಳ ಕಾಲ ಉಪಯೋಗ ಮಾಡಬಹುದಾಗಿತ್ತು.

ಸ್ವಯಂ ಚಾಲಿತ ಗೇಟುಗಳು: ಅಣೆಕಟ್ಟು 110 ಮೀಟರ್ ಉದ್ದ, 12 ಮೀಟರ್ ಅಗಲವಿದೆ. 3 ಹಾಗೂ 5 ಮೀಟರ್‌ನ ಎರಡು ಸ್ತರದಲ್ಲಿ ನೀರು ಶೇಖರಣೆಗೆ ವ್ಯವಸ್ಥೆ ಇದೆ. ಸುಮಾರು 20.41 ಎಂಸಿಎಫ್‌ಟಿ ನಷ್ಟು ನೀರು ಶೇಖರಣೆಯಾಗುತ್ತದೆ. 8 ಸ್ವಯಂ ಚಾಲಿತ ಗೇಟುಗಳಿದ್ದು ವ್ಯವಸ್ಥಿತ ರೀತಿಯಲ್ಲಿ ಅಳವಡಿಕೆ ನಡೆದಿದೆ.

ಅಣೆಕಟ್ಟಿನಿಂದ ಅನೇಕ ರೈತರಿಗೆ ಉಪಯೋಗವಾಗಲಿದೆ. ಕಾರ್ಕಳ ಹಾಗೂ ಹೆಬ್ರಿ ತಾಲ್ಲೂಕಿಗೆ ಸುಮಾರು 257 ಕಿಂಡಿ ಅಣೆಕಟ್ಟುಗಳು ವರದಾನ ಆಗಿದೆ. ಅತ್ಯಂತ ಸಮರ್ಪಕವಾಗಿ ಕೆಲಸಗಳು ಮುಗಿದಿದ್ದು ಶೀಘ್ರದಲ್ಲಿ ಲೋಕಾರ್ಪಣೆಯಾಗಲಿದೆ. ಸುಮಾರು 800 ಹೆಕ್ಟೇರ್ ಪ್ರದೇಶಗಳಿಗೆ ಪ್ರಯೋಜನ ದೊರಕಲಿದೆ.
–ಸುನಿಲ್ ಕುಮಾರ್, ಶಾಸಕ
ಬಹಳ ಕಡಿಮೆ ಅವಧಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಸ್ಥಳೀಯವಾಗಿ ಅಂತರ್ಜಲ ವೃದ್ಧಿಗೆ ಬಾವಿಯಲ್ಲಿ ನೀರು ಹೆಚ್ಚಾಗಲು ಇದರಿಂದ ಸಹಾಯಕವಾಗಲಿದೆ. ಬಹುತೇಕ ಕೆಲಸ ಮುಗಿದಿದೆ. ಶೀಘ್ರದಲ್ಲಿ ಲೋಕಾರ್ಪಣೆಯಾಗಲಿದೆ.
–ಜೆ.ಎಂ.ರಾಥೋಡ್, ಎಇ ಸಣ್ಣ ನೀರಾವರಿ ಇಲಾಖೆ
ಕೇವಲ ಒಂದೇ ವರ್ಷದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣವಾಗಿದೆ. ಎಲ್ಲರಿಗೂ ಉಪಯೋಗವಾಗಲಿದೆ. ಸಮರ್ಪಕ ರಸ್ತೆ ಕೊರತೆಯಿಂದ ಸುತ್ತು ಬಳಸಿ ಹೋಗಬೇಕಿತ್ತು. ರಸ್ತೆ ಉತ್ತಮವಾಗಿರದ ಕಾರಣ ಸಂಚಾರ ದುಸ್ತರವಾಗಿತ್ತು. ಸೇತುವೆ ಸಹಿತ ಕಿಂಡಿಆಣೆಕಟ್ಟಿನ ಲೋಕಾರ್ಪಣೆಗೆ ನಾವೆಲ್ಲ ಕಾಯುತ್ತಿದ್ದೇವೆ.
–ಪ್ರಸನ್ನ, ಆಟೊ ಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT