ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಯ ಕೃಷ್ಣ ಮಠಕ್ಕೆ ಸೋಮವಾರ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿದರು.
ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು, ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಬಾಲಕೃಷ್ಣನ ತೊಟ್ಟಿಲು ತೂಗುವ ಕಾಯಕ ಪರ್ಯಾಯ ಮಠಾಧೀಶರದ್ದಾಗಿತ್ತು. ಆದರೆ, ಈ ಬಾರಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರ ಚತುರ್ಥ ಪರ್ಯಾಯದ ಮೊದಲ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದಲ್ಲಿ ಭಕ್ತಾದಿಗಳಿಗೆ ಕೃಷ್ಣನ ತೊಟ್ಟಿಲು ತೂಗುವ ಅವಕಾಶ ನೀಡಲಾಯಿತು.
ಮಧ್ವಮಂಟಪದಲ್ಲಿ ಅಲಂಕೃತ ತೊಟ್ಟಿಲಲ್ಲಿ ಶ್ರೀಕೃಷ್ಣನ ವಿಗ್ರಹ ಇರಿಸಿ, ವಿದ್ವಾನ್ ಗೋಪಾಲಾಚಾರ್ಯ ದಂಪತಿ ತೊಟ್ಟಿಲು ತೂಗುವ ಮೂಲಕ ಡೊಲೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಮಠದ ರಾಜಾಂಗಣದಲ್ಲಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದರು.
ಇದೇ 27ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಲೀಲೋತ್ಸವ ಉದ್ಘಾಟನೆಗೊಳ್ಳಲಿದೆ. ಸಂಜೆ 5ರಿಂದ ವಿಟ್ಲಪಿಂಡಿ ಉತ್ಸವ, ವಿವಿಧ ವೇಷಧಾರಿಗಳ ಕುಣಿತ ಪ್ರದರ್ಶನ ಹಾಗೂ ಸ್ಪರ್ಧೆಗಳು ನಡೆಯಲಿವೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಯ ಕೃಷ್ಣ ಮಠದಲ್ಲಿ ಸೋಮವಾರ ಡೋಲೋತ್ಸವ ಜರುಗಿತು. ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಮತ್ತು ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು