ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಪ್ರಸಾದ ಸೂರೆಗೈದ ಭಕ್ತರು, ಅದಮಾರು ಪರ್ಯಾಯ ಮಂಗಲೋತ್ಸವ ದಿನ ನಡೆದ ಆಚರಣೆ

Last Updated 17 ಜನವರಿ 2022, 15:05 IST
ಅಕ್ಷರ ಗಾತ್ರ

ಉಡುಪಿ: ಅದಮಾರು ಪೀಠಾಧೀಶರಾದ ಈಶಪ್ರಿಯ ತೀರ್ಥ ಶ್ರೀಗಳ ಪ್ರಥಮ ಪರ್ಯಾಯ ಮಂಗಲೋತ್ಸವದ ಅಂಗವಾಗಿ ಸೋಮವಾರ ಮಹಾ ಅನ್ನಸಂತರ್ಪಣೆಯ ಉಳಿಕೆ ಅನ್ನಪ್ರಸಾದವನ್ನು ಸಾರ್ವಜನಿಕರಿಗೆ ‘ಸೂರೆ’ ಬಿಡುವ ವಿಶಿಷ್ಟ ಆಚರಣೆ ನಡೆಯಿತು.

ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ನಡೆದ ಸಾಂಪ್ರದಾಯಿಕ ‘ಸೂರೆ’ ಆಚರಣೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ಕೈಗೆ ಸಿಕ್ಕಷ್ಟು ಕೃಷ್ಣನ ಪ್ರಸಾದವನ್ನು ತುಂಬಿಕೊಂಡು ಹೋದರು.

ಏನಿದು ಸೂರೆ?

ಕೃಷ್ಣಮಠದಲ್ಲಿ ಪರ್ಯಾಯ ಮುಕ್ತಾಯವಾಗುವ ದಿನ ನಡೆಯುವ ವಿಶೇಷ ಧಾರ್ಮಿಕ ವಿಧಿ ವಿಧಾನಗಳಲ್ಲಿ ‘ಸೂರೆ’ ಸಂಪ್ರದಾಯವೂ ಒಂದು. ಪರ್ಯಾಯ ಮಂಗಲೋತ್ಸವದ ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಮುಗಿದ ಬಳಿಕ, ಉಳಿಕೆ ಆಹಾರವನ್ನು ಕೊಂಡೊಯ್ಯಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಇದನ್ನು ‘ಸೂರೆ’ ಎನ್ನಲಾಗುತ್ತದೆ. ಪ್ರತಿ 2 ವರ್ಷಕ್ಕೊಮ್ಮೆ ಮಾತ್ರ ಈ ಸಂಪ್ರದಾಯ ನಡೆಯುತ್ತದೆ.

ಸೂರೆ ಮಾಡುವುದು ಹೇಗೆ ?

ಅನ್ನಸಂತರ್ಪಣೆ ಮುಗಿದ ನಂತರ ಮಠದ ಸಿಬ್ಬಂದಿ ‘ಸೂರೆ’ಗೆ ಸೂಚನೆ ಸಿಗುತ್ತಿದ್ದಂತೆ ಪಾಕಶಾಲೆಗೆ ನುಗ್ಗುವ ಭಕ್ತರು ಉಳಿದ ಅನ್ನ, ಸಾರು, ಹುಳಿ, ಪಾಯಸ ಸೇರಿದಂತೆ ಇತರ ಭಕ್ಷ್ಯಗಳನ್ನು ತುಂಬಿಕೊಳ್ಳಲು ಶುರುಮಾಡುತ್ತಾರೆ. ದೊಡ್ಡ ದೊಡ್ಡ ಪಾತ್ರೆ, ಕಡಾಯಿ, ಬಕೆಟ್‌, ಕ್ಯಾನ್‌ ಹೀಗೆ ಸಿಕ್ಕಸಿಕ್ಕ ವಸ್ತುಗಳಲ್ಲಿ ತುಂಬಿಸಿ ಮನೆಗೆ ಸಾಗಿಸುತ್ತಾರೆ.

ಕೈಗೆ ಎಟುಕದಿದ್ದರೆ ಪಾತ್ರೆಗಳಿಗೆ ಹಗ್ಗ ಕಟ್ಟಿ ಕಡಾಯಿಯೊಳಗೆ ಇಳಿಬಿಟ್ಟು ಹರಸಾಹಸ ಮಾಡಿ ಪ್ರಸಾದವನ್ನು ಸೂರೆ ಮಾಡುತ್ತಾರೆ. ಈ ಸನ್ನಿವೇಶ ಪರ್ಯಾಯ ಉತ್ಸವಗಳ ಪ್ರಮುಖ ಆಕರ್ಷಣೆಗಳಲ್ಲಿ ಒಂದು.

ಆಹಾರ ಸುಡುತ್ತಿದ್ದರೂ ಲೆಕ್ಕಿಸದೆ ಭಕ್ತರು ಸೂರೆಗೆ ಮುಗಿಬೀಳುವ ದೃಶ್ಯ ಭಕ್ತಿಯ ಪರಾಕಷ್ಠೆಯನ್ನು ತೋರಿಸುತ್ತದೆ. ಮಹಿಳೆಯರು, ಮಕ್ಕಳು, ವೃದ್ಧರೂ ಸೂರೆಗೆ ನಿಲ್ಲುವುದು ವಿಶೇಷ. ಸೂರೆಗೈದ ಪ್ರಸಾದ ಸೇವಿಸಿದರೆ ಒಳಿತಾಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿರುವುದರಿಂದ ಸೂರೆ ಪ್ರಸಾದಕ್ಕೆ ಎಲ್ಲಿಲ್ಲದ ಮಹತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT