ಭಾನುವಾರ, ಮೇ 29, 2022
22 °C
ನಾಲ್ಕನೇ ಬಾರಿ ಸರ್ವಜ್ಞ ಪೀಠಾರೋಹಣ ಮಾಡಿದ ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ದರ್ಬಾರ್ ಶುರು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

ಸರ್ವಜ್ಞ ಪೀಠಾರೋಹಣ ಮಾಡಿದ ಬಳಿಕ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಮೊದಲ ಮಹಾಪೂಜೆ ನೆರವೇರಿಸಿದರು.

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಮಂಗಳವಾರ ಸರಳ, ಸಂಪ್ರದಾಯ ಬದ್ಧವಾಗಿ ಪರ್ಯಾಯ ಮಹೋತ್ಸವ ನೆರವೇರಿತು. ಕೃಷ್ಣಾಪುರ ಮಠದ ಯತಿ ಪರಂಪರೆಯ 34ನೇ ಯತಿಗಳಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಕೃಷ್ಣನ ದ್ವೈವಾರ್ಷಿಕ ಪೂಜಾಧಿಕಾರವನ್ನು ಪಡೆದುಕೊಂಡರು.

ಕೃಷ್ಣಮಠದಲ್ಲಿ ಶತಮಾನಗಳಿಂದ ಅನಾಚೂನವಾಗಿ ನಡೆದುಕೊಂಡು ಬಂದ ಸಂಪ್ರದಾಯದಂತೆ ಕೃಷ್ಣ ಪೂಜಾಧಿಕಾರ ಹಸ್ತಾಂತರ ಪ್ರಕ್ರಿಯೆಯು ಸರಳ, ಸುಸೂತ್ರವಾಗಿ ನೆರವೇರಿತು. ಪರ್ಯಾಯ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಆಗಮಿಸಿದ ವಿದ್ಯಾಸಾಗರ ತೀರ್ಥರಿಗೆ ಸ್ವಾಗತ ಕೋರಿದ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಗಳು ಮಧ್ವಚಾರ್ಯ ಕರಾರ್ಚಿತ ಅಕ್ಷಯ ಪಾತ್ರೆ, ಬೆಳ್ಳಿಯ ಸಟ್ಟುಗ ನೀಡಿ ಸರ್ವಜ್ಞ ಪೀಠದಲ್ಲಿ ಕೂರಿಸಿದರು.


ಪರ್ಯಾಯ ಮೆರವಣಿಗೆಯ ಮೂಲಕ ಕೃಷ್ಣಮಠಕ್ಕೆ ಆಗಮಿಸಿದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರಿಗೆ ಸ್ವಾಗತ ಕೋರಿದ ಅದಮಾರು ಮಠದ ಈಶಪ್ರಿಯ ತೀರ್ಥರು ಕೈಹಿಡಿದು ಸರ್ವಜ್ಞ ಪೀಠದಲ್ಲಿ ಕೂರಿಸಿದರು.

ಇದಕ್ಕೂ ಮುನ್ನ ಮಂಗಳವಾರ ನಸುಕಿನಲ್ಲಿ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಂಪ್ರದಾಯದಂತೆ 2.15ಕ್ಕೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮುಗಿಸಿ ಜಪತಪಾಧಿಗಳನ್ನು ಮುಗಿಸಿದ ವಿದ್ಯಾಸಾಗರ ತೀರ್ಥರು ಶಿಷ್ಯ ವರ್ಗದವರೊಂದಿಗೆ ಉಡುಪಿಯ ಜೋಡುಕಟ್ಟೆ ಪ್ರವೇಶಿಸಿದರು. ಈ ಸಂದರ್ಭ ಅಷ್ಟಮಠದ ಯತಿಗಳು ಯತಿಗಳಿಗೆ ಭವ್ಯ ಸ್ವಾಗತ ಕೋರಿದರು.

ಜೋಡುಕಟ್ಟೆಯೊಳಗಿನ ಚಿಕ್ಕಗುಡಿಯಲ್ಲಿ ಕೃಷ್ಣಾಪುರ ಮಠದ ಪಟ್ಟದ ದೇವರಾದ ದ್ವಿಭುಜ ಕಾಳೀಯ ಮರ್ಧನ ಮೂರ್ತಿಗೆ ಮಂಗಳಾರತಿ ಸಹಿತ ಪೂಜೆ ಸಲ್ಲಿಸಿದರು. ಬಳಿಕ ಪರ್ಯಾಯ ಮೆರವಣಿಗೆಗೆ ಚಾಲನೆ ದೊರೆಯಿತು. ಕೃಷ್ಣಾಪುರ ಮಠದ ಪಟ್ಟದ ದೇವರನ್ನು ಹೊತ್ತ ಚಿನ್ನದ ಪಲ್ಲಕ್ಕಿ ಮೆರವಣಿಗೆಯಲ್ಲಿ ಮುಂದೆ ಸಾಗಿದರೆ, ವಿದ್ಯಾಸಾಗರ ತೀರ್ಥರು ಮೊದಲ ಯತಿಯಾಗಿ ಮೇನೆಯಲ್ಲಿ ಸಾಗಿದರು.


ಪರ್ಯಾಯ ಪೀಠವೇರುವ ಮುನ್ನ ಮಂಗಳವಾರ ನಸುಕಿನಲ್ಲಿ ಕಾಪುವಿನ ದಂಡತೀರ್ಥದಲ್ಲಿ ವಿದ್ಯಾಸಾಗರ ತೀರ್ಥರು ಪವಿತ್ರ ಸ್ನಾನ ಮಾಡಿದರು.

ಬಳಿಕ ಜೇಷ್ಠತೆ ಆಧಾರದಲ್ಲಿ ಪಲಿಮಾರು ಮಠದ ವಿದ್ಯಾಸಾಗರ ತೀರ್ಥರು, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ತರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು, ಸೋದೆ ಮಠದ ವಿಶ್ವವಲ್ಲಭ ತೀರ್ಥರು, ಪಲಿಮಾರು ಕಿರಿಯ ಮಠಾಧೀಶರಾದ ವಿದ್ಯಾರಾಜೇಶ್ವರ ತೀರ್ಥರು ಹಾಗೂ ಶೀರೂರು ಮಠಾಧೀಶರಾದ ವೇದವರ್ಧನತೀರ್ಥರು ಅಲಂಕೃತಗೊಂಡ ಮೇನೆಯಲ್ಲಿ ಕುಳಿತು ಸಾಗಿದರು.

ವೇದ, ಮಂತ್ರ ಘೋಷಗಳು ಮೊಳಗಿದವು. ಚೆಂಡೆ, ಕೊಂಬು, ಕಹಳೆಯ ಸದ್ದು ಮಾರ್ಧನಿಸಿತು. ಸಾಂಪ್ರದಾಯಿಕ ವಾದ್ಯಗಳ ನಾದ, ಭಜನೆ, ಕುಣಿತ ತಂಡಗಳ ಪ್ರದರ್ಶನ, ಬಿರುದಾವಳಿಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಪೌರಾಣಿಕ ಪ್ರಸಂಗಗಳನ್ನು ಬಿಂಬಿಸುವ ಟ್ಯಾಬ್ಲೊಗಳು ಎಲ್ಲರ ಗಮನ ಸೆಳೆದವು. ನಿರ್ಧಿಷ್ಟ ಮಾರ್ಗದಲ್ಲಿ ಸಾಗಿದ ಮೆರವಣಿಗೆ ರಥಬೀದಿಯನ್ನು ತಲುಪುತ್ತಿದ್ದಂತೆ ಮೇನೆಯಿಂದ ಕೆಳಗಿಳಿದ ವಿದ್ಯಾಸಾಗರ ತೀರ್ಥರು ನೇರವಾಗಿ ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡಿದರು.

ಚಂದ್ರಮೌಳೇಶ್ವರ ಹಾಗೂ ಅನಂತೇಶ್ವರ ದೇವಸ್ಥಾನಗಳಿಗೆ ತೆರಳಿ ದರ್ಶನ ಮಾಡಿ, ಮಧ್ವಾಚಾರ್ಯರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕೃಷ್ಣಮಠದೊಳಗೆ ತೆರಳಿದ ವಿದ್ಯಾಸಾಗರ ತೀರ್ಥರಿಗೆ ಸ್ವಾಗತ ಕೋರಿದ ಅದಮಾರು ಮಠದ ಈಶಪ್ರಿಯ ತೀರ್ಥರು ಗರ್ಭಗುಡಿಯ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿಸಿ, ಮುಖ್ಯಪ್ರಾಣ ಹಾಗೂ ಗರುಡ ದೇವರಿಗೆ ಪೂಜೆ ಸಲ್ಲಿಸಿದರು.


ಜೋಡುಕಟ್ಟೆಯಲ್ಲಿ ಅಷ್ಟಮಠದ ಯತಿಗಳು ನೆರೆದಿದ್ದ ದೃಶ್ಯ.

ನಂತರ ಅಕ್ಷಯ ಪಾತ್ರೆ, ಸುಟ್ಟುಗ ಹಾಗೂ ದೇವರ ಗರ್ಭಗುಡಿಯ ಕೀಲಿಕೈ ಹಸ್ತಾಂತರಿಸಿ ಸುಮೂಹೂರ್ತದಲ್ಲಿ ಸರ್ವಜ್ಞ ಪೀಠದಲ್ಲಿ ಕೂರಿಸಿ ಕೃಷ್ಣ ಪೂಜಾ ಕೈಂಕರ್ಯದ ಜವಾಬ್ದಾರಿಯನ್ನು ಅಧಿಕೃತವಾಗಿ ಕೃಷ್ಣಾಪುರ ಮಠದ ಯತಿಗಳಿಗ ಹಸ್ತಾಂತರಿಸಿದರು. ಈ ಮೂಲಕ ಅದಮಾರು ಮಠದ ದ್ವೈವಾರ್ಷಿಕ ಪರ್ಯಾಯ ಮುಕ್ತಾಯಗೊಂಡು ಕೃಷ್ಣಾಪುರ ಮಠದ ಪರ್ಯಾಯ ಆರಂಭವಾಯಿತು.

ಸರ್ವಜ್ಞ ಪೀಠಾರೋಹಣದ ಬಳಿಕ ಬಡಗುಮಾಳಿಗೆ ಪ್ರವೇಶಿಸಿದ ವಿದ್ಯಾಸಾಗರ ತೀರ್ಥರು ಅರಳು ಗದ್ದುಗೆಯಲ್ಲಿ ಕುಳಿತು ಅಷ್ಠಮಠದ ಯತಿಗಳಿಗೆ ಗಂಧಾದ್ಯುಪಚಾರ ಮಾಡಿ, ಪಟ್ಟಕಾಣಿಕೆ ಸಲ್ಲಿಸಿ ಮಾಲಿಕೆ ಮಂಗಳಾರತಿ ನಡೆಸಿದರು. ಬಳಿಕ ರಾಜಾಂಗಣದಲ್ಲಿ ಸೀಮಿತ ಸಂಖ್ಯೆಯ ಮಠದ ಸಿಬ್ಬಂದಿ, ಗಣ್ಯರು ಹಾಗೂ ವಿದ್ವಾಸರನ್ನೊಳಗೊಂಡ ಪರ್ಯಾಯ ದರ್ಬಾರ್ ಸಭೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು