ಶನಿವಾರ, ಮೇ 15, 2021
23 °C
ಪಿಡಿ ಖಾತೆಯಲ್ಲಿರುವ ಬಾಕಿ ಬಿಡುಗಡೆಗೆ ಭರವಸೆ ನೀಡಿದ ಶಾಸಕ ರಘುಪತಿ ಭಟ್‌

ಸರ್ವೆ ಆರಂಭ: ಭೂಮಾಪಕರ ಸಭೆಯಲ್ಲಿ ಅಂತಿಮ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: 2013ರಿಂದ ಪಿಡಿ ಖಾತೆಯಲ್ಲಿ ಉಳಿಕೆಯಾಗಿರುವ ಭೂಮಾಪಕರ ಬಾಕಿ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ರಘುಪತಿ ಭಟ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಏ.19ರಂದು ಪರವಾನಗಿ ಭೂಮಾಪಕರ ಸಭೆ ಕರೆದು ಮುಷ್ಕರ ಹಿಂಪಡೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದುಷ್ಯಂತ್ ಕುಮಾರ್ ತಿಳಿಸಿದರು.

ಶನಿವಾರ ಶಾಸಕರ ಕಚೇರಿಯಲ್ಲಿ ಮಾತನಾಡಿದ ಅವರು, ಭೂಮಾಪಕರು ಕೆಲಸ ನಿರ್ವಹಿಸಿದ ಕಡತಗಳಲ್ಲಿ ಬರಬೇಕಾಗಿರುವ ಬಾಕಿ ಹಣ ಪಿಡಿ ಖಾತೆಯಲ್ಲಿದೆ. ಪ್ರತಿ ಸರ್ವೆಯರ್‌ಗೂ ಕನಿಷ್ಠ ₹ 2 ರಿಂದ ₹ 4 ಲಕ್ಷದವರೆಗೆ ಬರಬೇಕಿದೆ. ಜನಪ್ರತಿನಿಧಿಗಳು ಹಣ ಬಿಡುಗಡೆಗೆ ಒಪ್ಪಿರುವುದರಿಂದ ಈ ವಿಚಾರವನ್ನು ಸಂಘದ ಸದಸ್ಯರ ಸಭೆಯಲ್ಲಿ ಚರ್ಚಿಸಿ, ಒಪ್ಪಿಗೆ ಪಡೆದು ಶೀಘ್ರ ಸರ್ವೆ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ರಘುಪತಿ ಭಟ್‌, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 2 ತಿಂಗಳಿನಿಂದ ಸರ್ವೆಯರ್‌ಗಳು ಮುಷ್ಕರ ನಡೆಸುತ್ತಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ 8 ರಿಂದ 10 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಭೂಮಾಪಕರು ಮುಷ್ಕರ ಕೈಬಿಟ್ಟು ಸರ್ವೆ ಆರಂಭಿಸಿದರೆ ಏ.22ರಂದು ಕಂದಾಯ ಸಚಿವರ ಬಳಿ ಭೂಮಾಪಕರ ನಿಯೋಗ ಕೊಂಡೊಯ್ದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಭೂಮಾಪಕರ ಹುದ್ದೆ ಕಾಯಂಗೊಳಿಸುವುದು, ಕನಿಷ್ಠ ವೇತನ ನೀಡುವ ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪಿಲ್ಲ. ಸರ್ವೆಯರ್‌ಗಳು ಮುಷ್ಕರ ಕೈಬಿಟ್ಟರೆ ಪಿಡಿ ಖಾತೆಯಲ್ಲಿ ಉಳಿಕೆಯಾಗಿರುವ ಹಣ ಬಿಡುಗಡೆ ಮಾಡಿಸುವ ಜವಾಬ್ದಾರಿಯನ್ನು ಹೊರಲು ಸಿದ್ಧ ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

ಭೂಮಿ ಮಾರಾಟ, ಕ್ರಯ, ದಾನಪತ್ರ, ವಿಭಾಗಪಟ್ಟಿ, ಭೂಮಿ ಪರಿವರ್ತನೆ, ನಕ್ಷೆ ಸೇರಿದಂತೆ ಭೂಮಿಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೆ ಸರ್ವೆ ಅಗತ್ಯವಾಗಿದೆ. 2 ತಿಂಗಳುಗಳಿಂದ ಸರ್ವೆಯರ್‌ಗಳು ಮುಷ್ಕರ ನಡೆಸುತ್ತಿರುವುದರಿಂದ ಸರ್ವೆ ಕಾರ್ಯ ನಡೆಯದೆ ಜನಸಾಮಾನ್ಯರಿಗೆ ತೀವ್ರ ಸಮಸ್ಯೆಯಾಗಿದೆ. ಮತ್ತೆ ಸರ್ವೆ ಕಾರ್ಯ ಆರಂಭವಾದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಸಭೆಯಲ್ಲಿ ಭೂಮಾಪಕರ ಸಂಘದ ಶಶಿಕುಮಾರ್, ರವಿಕಾಂತ್‌, ನಾಗೇಶ್‌, ಶಿವಕುಮಾರ್‌ ಇದ್ದರು.

ಮೇಲ್ನೋಟಕ್ಕೆ ಅನುಮಾನ: ರಘುಪತಿ ಭಟ್‌

ಸರ್ವೆ ಕಾರ್ಯಕ್ಕೆ ರೈತರು ಹಣ ಪಾವತಿ ಮಾಡಿದ್ದಾರೆ. ಭೂಮಾಪಕರು ಸರ್ವೆ ಕಾರ್ಯ ಮುಗಿಸಿದರೂ ಅವರಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ. ಬದಲಿಗೆ ಪಿಡಿ ಖಾತೆಗೆ ಹಣ ಜಮೆಯಾಗಿದೆ. ಈ ಖಾತೆಯನ್ನು ನಿರ್ವಹಣೆ ಮಾಡುತ್ತಿರುವುದು ಸರ್ಕಾರದ ಅಧಿಕಾರಿಯೇ ಅಥವಾ ಖಾಸಗಿ ಕಂಪೆನಿಯೇ ಎಂಬ ಬಗ್ಗೆ ಪರಿಶೀಲಿಸಲಾಗುವುದು. ಮೇಲ್ನೋಟಕ್ಕೆ ಹಲವು ಅನುಮಾನಗಳಿದ್ದು, ಈ ಬಗ್ಗೆ ತನಿಖೆಯ ಅವಶ್ಯಕತೆ ಇದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.