ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಸಿಗದ ಬೇಸರ: ಖಿನ್ನತೆಗೆ ಜಾರಿ ಆತ್ಮಹತ್ಯೆ

ಲಾಕ್‌ಡೌನ್‌ ಜಾರಿಯಾದ ಬಳಿಕ 5 ಪ್ರಕರಣ ದಾಖಲು
Last Updated 30 ಮಾರ್ಚ್ 2020, 15:39 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಸೋಂಕು ಹರಡುವಿಕೆ ತಡೆಗೆ ರಾಜ್ಯವನ್ನು ಲಾಕ್‌ಡೌನ್‌ ಮಾಡಲಾಗಿದೆ. ಒಂದೆಡೆ ಅಗತ್ಯ ವಸ್ತುಗಳ ಖರೀದಿಗೆ ಜನರು ಪರದಾಡುತ್ತಿದ್ದರೆ, ಮತ್ತೊಂದೆಡೆ ವ್ಯಸನಿಗಳು ಮದ್ಯಕ್ಕೆ ಹಾತೊರೆಯುತ್ತಿದ್ದಾರೆ. ಮದ್ಯ ಮಾರಾಟ ಬಂದ್‌ ಆಗಿರುವುದರಿಂದ ಕೆಲವರು ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಪುವಿನ ಪಡು ಗ್ರಾಮದಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ 46 ವರ್ಷದ ವ್ಯಕ್ತಿ ಮಾರ್ಚ್‌ 28ರಂದು ನೇಣಿಗೆ ಶರಣಾಗಿದ್ದಾರೆ. ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ವ್ಯಕ್ತಿಯು, ಈಚೆಗೆ ಎಲ್ಲಿಯೂ ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೊಳಗಾಗಿದ್ದರು. ಆತ್ಮಹತ್ಯೆಗೆ ಖಿನ್ನತೆ ಕಾರಣ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಾರದಿಂದ ಮದ್ಯಪಾನ ಮಾಡಲು ಸಾಧ್ಯವಾಗದಿದ್ದಕ್ಕೆ ಮನನೊಂದುಕಾರ್ಕಳ ತಾಲ್ಲೂಕಿನ ತೆಳ್ಳಾರಿನಲ್ಲಿ 37 ವರ್ಷದ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ.26ರಂದು ಮಲಗುವ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.

ಕುಂದಾಪುರ ತಾಲ್ಲೂಕಿನ ಹೆಮ್ಮಾಡಿಯಲ್ಲಿ 37 ವರ್ಷದ ವ್ಯಕ್ತಿ, ಕಾಪು ತಾಲ್ಲೂಕಿನ ಉದ್ಯಾವರದ 42 ವರ್ಷದ ಮದ್ಯವ್ಯಸನಿಗಳು ಕೂಡ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿ ತಾಲ್ಲೂಕಿನ ಮೂಡಬೆಟ್ಟು ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸವಿದ್ದ 52 ವರ್ಷದ ವ್ಯಕ್ತಿಯೂ ಖಿನ್ನತೆಗೆ ಜೀವ ಕಳೆದುಕೊಂಡಿದ್ದಾರೆ.

ಕೇವಲ ವಾರದ ಅವಧಿಯಲ್ಲಿ ಮದ್ಯ ಸಿಗದ ಕಾರಣಕ್ಕೆ ಹಾಗೂ ಮಾನಸಿಕ ಖಿನ್ನತೆಯಿಂದ ಐವರು ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವುದು ಆತಂಕಕಾರಿ ವಿಚಾರ.

ನಗರದ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣ, ಕೃಷ್ಣಮಠದ ಆಸುಪಾಸು, ಅಜ್ಜರಕಾಡು ಉದ್ಯಾನದ ಬಳಿ ಹಲವು ಮದ್ಯ ವ್ಯಸನಿಗಳು ಅಸ್ವಸ್ಥರಂತೆ ಅಲೆಯುತ್ತಿದ್ದು, ಅವರಿಗೂ ಸೂಕ್ತ ಚಿಕಿತ್ಸೆ ದೊರೆಯಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಖಿನ್ನತೆಯಿಂದ ಹೆಚ್ಚುತ್ತಿರುವ ಆತ್ಮಹತ್ಯೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್‌, ‘ಮದ್ಯವ್ಯಸನಿಗಳಿಗೆ ಹಾಗೂ ಖಿನ್ನತೆಗೆ ಒಳಗಾದವರಿಗೆ ಮನಶಾಸ್ತ್ರಜ್ಞರಿಂದ ಕೌನ್ಸೆಲಿಂಗ್ ಕೊಡಿಸಿ ಅಗತ್ಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT