ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಓದು – ಬರಹದಿಂದ ರೂಪುಗೊಂಡ ಸಾಹಿತಿ ಮುದ್ರಾಡಿ

Last Updated 22 ಫೆಬ್ರುವರಿ 2023, 6:04 IST
ಅಕ್ಷರ ಗಾತ್ರ

ಹೆಬ್ರಿ: ‘ನಾನು ತಾಯಿ ಭದ್ರಕಾಳಿಯ ಸುತ, ಆಕೆ ಎಷ್ಟು ದಿನ ಬರೆಯಿಸುತ್ತಾಳೋ, ನಿಮ್ಮ ಪ್ರೀತಿ– ವಿಶ್ವಾಸ ಎಲ್ಲಿಯವರೆಗೆ ಸಿಗುತ್ತಿರುವುದೋ ಅಲ್ಲಿಯವರೆಗೆ ಚೆನ್ನಾಗಿ ಬರೆಯುತ್ತೇನೆ, ಬದುಕುತ್ತೇನೆ...’ ಎಂದು ತಮ್ಮನ್ನು ಭೇಟಿ ಮಾಡಲು ಬರುತ್ತಿದ್ದ ಆತ್ಮೀಯರಲ್ಲಿ ಹೇಳುತ್ತಿದ್ದ ಅಂಬಾತನಯ ಮುದ್ರಾಡಿ ಅವರು ಮುದ್ರಾಡಿಯಲ್ಲಿರುವ ತಮ್ಮ ಮನೆ ‘ಅಕ್ಷರ’ ದಲ್ಲಿ ಮಂಗಳವಾರ ನಿಧನಹೊಂದಿದರು.

ಮುದ್ರಾಡಿಯ ಬೂಬ ಶೆಟ್ಟಿಗಾರ್‌ ಮತ್ತು ಪುಟ್ಟಮ್ಮ ದಂಪತಿಯ ಪುತ್ರ ಕೇಶವ ಶೆಟ್ಟಿಗಾರ್ ಅವರು ‘ಅಂಬಾತನಯ ಮುದ್ರಾಡಿ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದರು.

ಪ್ರಾಥಮಿಕ ಶಾಲೆಯ ಶಿಕ್ಷಕರಾದ್ದರು. ಅವರ ‘ಪರಿತ್ಯಕ್ತ’ ನಾಟಕವು ಮಂಗಳೂರು ವಿಶ್ವವಿದ್ಯಾಲಯದ ಐಚ್ಚಿಕ ಕನ್ನಡಕ್ಕೆ ನಾಲ್ಕು ವರ್ಷಗಳ ಕಾಲ ಪಠ್ಯವಾಗಿತ್ತು. ಕಾರ್ಕಳ ತಾಲ್ಲೂಕು ಮತ್ತು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹೆಬ್ರಿಯಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಎಂಟನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದರೂ, ನಿರಂತರ ಓದು ಮತ್ತು ಬರವಣಿಗೆಯು ಅವರನ್ನು ಒಬ್ಬ ಉತ್ತಮ ಸಾಹಿತಿಯಾಗಿ ರೂಪಿಸಿತ್ತು. ಮನೆಗೆ ಬರುವವರನ್ನು, ‘ಹೇಗಿದ್ದೀರಿ, ಕೆಲಸ ಹೇಗೆ ನಡೆಯುತ್ತಿದೆ’ ಎಂದು ಪ್ರೀತಿಯಿಂದ ಕರೆದು ಮಾತನಾಡಿಸುವುದು ಅವರ ಸ್ವಭಾವ. ಭಾಷೆಯ ಬಗ್ಗೆ ಪ್ರೀತಿಯಷ್ಟೇ ಅಲ್ಲ ಅಪಾರ ಜ್ಞಾನವನ್ನು ಹೊಂದಿದ್ದ ಅವರು, ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದಾದ್ಯಂತ ಓಡಾಡಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದ್ದರು.

88ರ ಹರೆಯದಲ್ಲೂ ಸಾಹಿತ್ಯದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಅವರು ಇತ್ತೀಚೆಗೆ ಮುನಿಯಾಲಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದರು. ಆ ಸಮ್ಮೇಳನದಲ್ಲಿ ಮುದ್ರಾಡಿ ಅವರ ಬದುಕು ಬರಹ ಕುರಿತು ವಿಚಾರ ಗೋಷ್ಠಿಯೂ ನಡೆದಿತ್ತು. ಉಡುಪಿಯಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವು ಅವರು ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮವಾಗಿತ್ತು.

‘ಮುದ್ರಾಡಿಯೆಂದರೆ ಚೈತನ್ಯದ ಚಿಲುಮೆ, ಮುದ್ರಾಡಿ ಎಂದರೆ ಜೀವನೋತ್ಸವ, ಮುದ್ರಾಡಿ ಎಂದರೆ ಸಾಹಿತ್ಯ ಕಾಂತಿ, ಮುದ್ರಾಡಿ ಎಂದರೆ ಮನಸ್ಸಿನ ಶಾಂತಿ, ಮುದ್ರಾಡಿ ಎಂದರೆ ಕನ್ನಡದ ಧೈರ್ಯ ಆತ್ಮಸ್ಥೈರ್ಯ’ ಎಂಬ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಮಾತುಗಳು ಮುದ್ರಾಡಿಯವರ ಸಾಧನೆ– ಸಾಮರ್ಥ್ಯವನ್ನು ಕಟ್ಟಿಕೊಡುತ್ತವೆ.

‘ನಮ್ಮ ಸಂಸ್ಕೃತಿಯನ್ನು ಪ್ರಚಾರ ಪಡಿಸಿದ ಸವ್ಯಸಾಚಿ. ಕನ್ನಡ ವರಪುತ್ರರಾದ ಇವರು ನಿಜ ಅರ್ಥದ ಅಂಬಾತನಯರೇ ಆಗಿದ್ದಾರೆ’ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದರು. ಪೇಜಾವರ ಶ್ರೀಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಮುದ್ರಾಡಿ ಅವರು ‘ಶ್ರೀಗಳ ಶ್ರೀರಕ್ಷೆಯಿಂದಲೇ ತಾನು ಸರಸ್ವತಿಯ ಸೇವೆಯನ್ನು ಮಾಡಲು ಸಾಧ್ಯವಾಗುತ್ತಿದೆ’ ಎಂದು ಹೇಳುತ್ತಿದ್ದರು.

‘ಬಕ್ರೆ ಮಠದ ಭದ್ರಕಾಳಿಯೇ ನನ್ನನ್ನು ಅನವರತ ಕಾಪಾಡಿದ್ದಾಳೆ, ನಾನು ಈಗ ಭದ್ರಕಾಳಿಯ ಸುತ’ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಊರಿನ ಎಲ್ಲರಿಂದಲೂ ‘ಮಾಸ್ಟ್ರೇ’ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT