ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ಗೆ ಮತ್ತೆ ಸ್ತಬ್ಧವಾದ ಉಡುಪಿ

ಲಾಕ್‌ಡೌನ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
Last Updated 5 ಜುಲೈ 2020, 13:09 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಲಾಕ್‌ಡೌನ್‌ ಅಂತ್ಯವಾದ ಬಳಿಕ ಸಹಜ ಸ್ಥಿತಿಗೆ ಮರಳುತ್ತಿದ್ದ ನಗರ ಭಾನುವಾರ ಮತ್ತೆ ಸ್ತಬ್ಧವಾಗಿತ್ತು. ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಸರ್ಕಾರ ವಾರಕ್ಕೊಂದು ದಿನ ಲಾಕ್‌ಡೌನ್ ಘೋಷಿಸಿರುವ ಪರಿಣಾಮ ನಗರದಲ್ಲಿ ಮತ್ತೆ ಹಿಂದಿನ ಲಾಕ್‌ಡೌನ್‌ ಸನ್ನಿವೇಶ ನಿರ್ಮಾಣವಾಗಿತ್ತು.

ಸದಾಗಿಜಿಗಿಡುತ್ತಿದ್ದ ನಗರದ ಪ್ರಮುಖ ರಸ್ತೆಗಳಲ್ಲಿ ಮೌನ ಆವರಿಸಿತ್ತು. ಮಾರುಕಟ್ಟೆ, ಬಸ್‌ ನಿಲ್ದಾಣಗಳು ಬಿಕೊ ಎನ್ನುತ್ತಿದ್ದವು. ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳು ರಸ್ತೆಗಿಳಿಯಲಿಲ್ಲ. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆಯೂ ಇರಲಿಲ್ಲ.

ಬೆಳಿಗ್ಗೆ, ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆ ಸೇರಿದ ಸಾರ್ವಜನಿಕರು ಮತ್ತೆ ಹೊರ ಬರಲಿಲ್ಲ. ಉಡುಪಿ–ಮಣಿಪಾಲ್‌ ರಸ್ತೆ, ಚಿತ್ತರಂಜನ್ ಸರ್ಕಲ್‌, ಕರಾವಳಿ ಬೈಪಾಸ್‌, ಅಂಬಲಪಾಡಿ, ಕವಿ ಮುದ್ದಣ್ಣ ಮಾರ್ಗದ ರಸ್ತೆಗಳು ನಿರ್ಜನವಾಗಿದ್ದವು.

ಮೆಡಿಕಲ್‌ ಶಾಪ್‌ಗಳು ಹಾಗೂ ಕೆಲವು ಆಸ್ಪತ್ರೆಗಳು ಮಾತ್ರ ತೆರೆದಿದ್ದವು. ಪಾರ್ಸೆಲ್‌ ಕೊಡಲು ಅವಕಾಶವಿದ್ದರೂ ಹೋಟೆಲ್‌ಗಳು ತೆರೆದಿರಲಿಲ್ಲ. ಮಾಂಸದಂಗಡಿಗಳಲ್ಲೂ ಹೆಚ್ಚಿನ ಜನಸಂದಣಿ ಕಂಡುಬರಲಿಲ್ಲ.

ಮಣಿಪಾಲ ಹಾಗೂ ಉಡುಪಿ ರಸ್ತೆಯಲ್ಲಿ ಅನಗತ್ಯವಾಗಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕರನ್ನು ತಡೆದ ಪೊಲೀಸರು ಎಚ್ಚರಿಕೆ ನೀಡಿ ಕಳಿಸಿದರು. ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸ್ ವಾಹನಗಳು ನಗರದಲ್ಲಿ ಗಸ್ತು ತಿರುಗುತ್ತಿದ್ದವು.

ನಿರ್ಗತಿಕರ ಪರದಾಟ: ಬಹುತೇಕ ಹೋಟೆಲ್‌ಗಳು ಬಂದ್ ಆಗಿದ್ದರಿಂದ ಕೃಷ್ಣಮಠ, ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳ ಸುತ್ತಲೂ ತಂಗಿರುವ ನಿರ್ಗತಿಕರು ಆಹಾರಕ್ಕಾಗಿ ಪರದಾಡುವಂತಾಯಿತು. ಭಿಕ್ಷುಕರು ರಸ್ತೆ ಬದಿ, ಉದ್ಯಾನ ಹಾಗೂ ನಿರ್ಜನ ಪ್ರದೇಶಗಳಲ್ಲಿ ಮಲಗಿದ್ದ ದೃಶ್ಯ ಕಂಡುಬಂತು. ಕೆಲವರು ನಗರದೊಳಗೆ ಅಲೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT