ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹೆ ಕ್ಯಾಂಪಸ್‌ ವಿದ್ಯಾರ್ಥಿಗಳಿಗೆ ಮುಕ್ತ

2021–21ನೇ ಸಾಲಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ: ಹೊಸ ಕೋರ್ಸ್‌ಗಳ ಆರಂಭ
Last Updated 11 ಆಗಸ್ಟ್ 2021, 13:09 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಸವಾಲುಗಳ ಮಧ್ಯೆಯೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಮಣಿಪಾಲ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್‌ (ಮಾಹೆ) ಕ್ಯಾಂಪಸ್‌ ವಿದ್ಯಾರ್ಥಿಗಳಿಗೆ ಮುಕ್ತವಾಗುತ್ತಿದೆ ಎಂದು ಮಾಹೆ ಕುಲಪತಿ ಲೆಫ್ಟಿನಂಟ್ ಜನರಲ್‌ ಡಾ.ಎಂ.ಡಿ.ವೆಂಕಟೇಶ್ ತಿಳಿಸಿದರು.

ಬುಧವಾರ ಮಾಹೆ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಕನಿಷ್ಠ ಒಂದು ಡೋಸ್‌ ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು ಹಾಗೂ 72 ಗಂಟೆ ಮೀರದ ಕೋವಿಡ್‌ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಿ ಕ್ಯಾಂಪಸ್‌ನೊಳಗೆ ಪ್ರವೇಶ ಪಡೆಬೇಕು ಎಂಬ ನಿಯಮ ಪಾಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ದೇಶದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮಾಹೆ ಮುಂಚೂಣಿಯಲ್ಲಿದ್ದು, ಮುಂದಿನ ಐದು ವರ್ಷಗಳಲ್ಲಿ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ. ಅದರ ಭಾಗವಾಗಿ 2021–22ನೇ ಸಾಲಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪಠ್ಯಕ್ರಮ ಹಾಗೂ ಹೊಸ ಕೋರ್ಸ್‌ಗಳನ್ನು ಮಾಹೆ ಅನುಷ್ಠಾನಕ್ಕೆ ತರುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಅಂಶಗಳನ್ನು ಅಳವಡಿಸಿಕೊಳ್ಳಲು 6 ತಿಂಗಳಿನಿಂದ ನಿರಂತರ ಶ್ರಮ ವಹಿಸಲಾಗಿದ್ದು, ವಿದ್ಯಾರ್ಥಿಗಳ ಕೌಶಲ, ಆಸಕ್ತಿ, ಅಭಿರುಚಿಗೆ ತಕ್ಕಂತಹ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವದ 220 ವಿಶ್ವವಿದ್ಯಾಲಯಗೊಂದಿಗೆ ಮಾಹೆ ಅಕಾಡೆಮಿಕ್ ಸಹಭಾಗಿತ್ವ ಹೊಂದಿದ್ದು, ಸಂಶೋಧನೆ, ಹೊಸತನಕ್ಕೆ ಒತ್ತು ನೀಡುತ್ತಿದೆ. ಕೋವಿಡ್‌ ಸಂದರ್ಭದಲ್ಲಿಯೂ ವರ್ಚುವಲ್‌ ವೇದಿಕೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಮಾಡಿದೆ. 400ಕ್ಕೂ ಹೆಚ್ಚು ಸಂಶೋಧನಾ ಬರಹಗಳನ್ನು ಪ್ರಕಟಿಸಿದೆ ಎಂದರು.

ಮೂಲಕಸೌಕರ್ಯ ಅಭಿವೃದ್ಧಿಗೆ ₹ 1,000 ಕೋಟಿ ಬಂಡವಾಳ ಹೂಡುತ್ತಿದ್ದು, ಟಾಟಾ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಮಾಹೆಯ ಉನ್ನತ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಕೋವಿಡ್‌ನಿಂದಾಗಿ ಬೋಧನಾ ಕ್ರಮವನ್ನು ಸಂಪೂರ್ಣವಾಗಿ ಡಿಜಿಟಲ್‌ಗೆ ರೂಪಾಂತರಗೊಳಿಸಲಾಗಿದೆ ಎಂದರು.

ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್ ಮಾತನಾಡಿ, ‘ಕೋವಿಡ್‌ ಕಾರಣದಿಂದ ಮಣಿಪಾಲ ಗ್ರೂಪ್‌ನ ಆದಾಯ ಗಣನೀಯವಾಗಿ ಇಳಿಕೆಯಾಗಿದ್ದರೂ ಸಿಬ್ಬಂದಿಗೆ ಪೂರ್ಣ ವೇತನ ನೀಡಲಾಗಿದೆ. ಜತೆಗೆ, ಈ ವರ್ಷ ವೇತನವನ್ನೂ ಹೆಚ್ಚಳ ಮಾಡಲಾಗಿದೆ’ ಎಂದರು.

ಜಿಲ್ಲಾಡಳಿತದ ಮನವಿಯ ಮೇರೆಗೆ ಕಳೆದ ವರ್ಷ ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಸದ್ಯ ಎಂಐಟಿ ಹಾಸ್ಟೆಲ್ ಕಟ್ಟಡವನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಮಾಡಲಾಗಿದೆ. ಕೋವಿಡ್‌ ನಿಯಂತ್ರಿಸಲು ಜಿಲ್ಲಾಡಳಿತಕ್ಕೆ ಮಾಹೆ ಅಗತ್ಯ ಸಹಕಾರ ನೀಡುತ್ತಿದೆ ಎಂದರು.

ಮಾಹೆ ವಿವಿಯೊಂದಿಗೆ ಟ್ಯಾಪ್ಮಿ ವಿಲೀನವಾಗಿದ್ದು, ಮುಂದಿನ ವರ್ಷದಿಂದ ಟ್ಯಾಪ್ಮಿ ವಿದ್ಯಾರ್ಥಿಗಳು ಮಾಹೆ ಮೂಲಕ ಪ್ರವೇಶ ಪಡೆದುಕೊಳ್ಳಬೇಕು. ಇದರಿಂದ ಟ್ಯಾಪ್ಮಿ ಕಾರ್ಯಕ್ಷೇತ್ರ ವಿಸ್ತಾರಗೊಂಡಂತಾಗಿದೆ ಎಂದು ಬಲ್ಲಾಳ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹೆ ರಿಜಿಸ್ಟ್ರಾರ್ ನಾರಾಯಣ ಸಭಾಯಿತ್, ಸಾರ್ವಜನಿಕ ಸಂಪರ್ಕ, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ ಎಸ್‌.ಪಿ.ಕಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT