ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಸಿಯಲ್ಲಿ ಯಶಸ್ವಿ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ

Last Updated 3 ಡಿಸೆಂಬರ್ 2021, 12:59 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಈಚೆಗೆ ಅಪರೂಪದ ಹಾಗೂ ತೀರಾ ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿವೆ ಎಂದು ಕೆಎಂಸಿ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಅರವಿಂದ್ ಬಿಷ್ಣೋಯ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನವಜಾತ ಶಿಶು ವಿಭಾಗ ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಲೆಸ್ಲಿ ಎಡ್ವರ್ಡ್ ಲೆವಿಸ್ ಮಾತನಾಡಿ, ಹಿಂದೆ ಸಂಕೀರ್ಣವಾದ ಹೃದಯ ಕಾಯಿಲೆ ಹೊಂದಿರುವ ಶಿಶುಗಳನ್ನು ಶಸ್ತ್ರಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಶಿಶುಗಳು ಸಾವನ್ನಪ್ಪಿದ ಕಹಿ ಘಟನೆಗಳು ನಡೆಯುತ್ತಿದ್ದವು.

ಇದೀಗ ಕೆಎಂಸಿಯಲ್ಲಿ ನವಜಾತ ಹಾಗೂ ಚಿಕ್ಕ ಶಿಶುಗಳಲ್ಲಿ ಸಂಕೀರ್ಣ ಹುಟ್ಟಿನಿಂದಲೇ ಕಾಣಿಸಿಕೊಂಡ ‌ಹೃದ್ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ನೆರೆಯ 8 ಜಿಲ್ಲೆಗಳಲ್ಲಿ ಹೃದ್ರೋಗ ಸಮಸ್ಯೆಯಿಂದ ನರಳುತ್ತಿರುವ ಶಿಶುಗಳಿಗೆ ಕಸ್ತೂರಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ದೇಶದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಕೆಎಂಸಿಯಲ್ಲಿ. ಪ್ರಸೂತಿ, ಪಿಡಿಯಾಟ್ರಿಕ್ಸ್‌, ಕಾರ್ಡಿಯಾಲಜಿ, ಕಾರ್ಡಿಯಾಕ್ ಸರ್ಜರಿ, ಅರಿವಳಿಕೆ ವಿಭಾಗ ಮತ್ತು ಹೃದಯ ರಕ್ತನಾಳದ ತಂತ್ರಜ್ಞಾನ ವಿಭಾಗ ಆಸ್ಪತ್ರೆಯಲ್ಲಿದ್ದು ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಹೃದ್ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಎಂದರು.

ಮಕ್ಕಳ ಹೃದ್ರೋಗ ತಜ್ಞೆ ಡಾ. ಗುಂಜನ್ ಬಂಗಾ ಮಾತನಾಡಿ, ಕಸ್ತೂರಬಾ ಆಸ್ಪತ್ರೆಯಲ್ಲಿ ಪ್ರಸವ ಪೂರ್ವ ಮತ್ತು ಜನನ ನಂತರದಲ್ಲಿ ಕಾಣಿಸಿಕೊಳ್ಳುವ ಸಂಕೀರ್ಣ ಹೃದ್ರೋಗಕ್ಕೆ ಅಗತ್ಯ ಚಿಕಿತ್ಸೆ ಹಾಗೂ ಆರೈಕೆ ನೀಡಲಾಗುತ್ತಿದೆ. ನವಜಾತ ಶಿಶುಗಳಲ್ಲಿ ರೋಗವನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಕಸ್ತೂರಬಾ ಆಸ್ಪತ್ರೆ ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸಾ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಜನ್ಮಜಾತ ಹೃದಯ ಕಾಯಿಲೆಯನ್ನು ಜಯಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಹೃದ್ರೂಗ ವಿಭಾಗ ಮುಖ್ಯಸ್ಥ ಡಾ.ಪದ್ಮಕುಮಾರ್, ನವಜಾತ ಶಿಶು ವಿಭಾಗದ ಡಾ. ಅಪೂರ್ವ್‌ ಬರ್ಚೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT