ಉಡುಪಿ: ಬಿಸಿಲಿನ ದಗೆ ಹೆಚ್ಚಾಗುತ್ತಿದ್ದಂತೆ ಎಳನೀರು, ಕಲ್ಲಂಗಡಿ, ಜ್ಯೂಸ್ ಹಾಗೂ ಐಸ್‌ಕ್ರೀಂಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿಯ ಬೇಸಗೆ ಹೆಚ್ಚು ತಾಪಮಾನದಿಂದ ಕೂಡಿದ್ದು ದಾಹ ತಣಿಸಿಕೊಳ್ಳಲು ಸಾರ್ವಜನಿಕರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ನಗರದ ಬಹುತೇಕ ಎಳನೀರು ಅಂಗಡಿಗಳ ಮುಂದೆ ಗ್ರಾಹಕರು ಹೆಚ್ಚಾಗಿರುವ ದೃಶ್ಯಗಳು ಕಂಡು ಬರುತ್ತಿವೆ. ಬೊಂಡಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆಯೂ ಸ್ವಲ್ಪ ಹೆಚ್ಚಾಗಿದೆ. ಸಾಮಾನ್ಯವಾಗಿ 30 ರಿಂದ 35ಕ್ಕೆ ಸಿಗುತ್ತಿದ್ದ ಎಳನೀರು ₹ 40 ಮುಟ್ಟಿದೆ. ಬೆಲೆ ಸ್ವಲ್ಪ ಹೆಚ್ಚಾದರೂ ಬಿಸಿಲಿನ ಪ್ರಖರತೆ ತಾಳಲಾಗದೆ ನಾಗರಿಕರು ಖರೀದಿಯಲ್ಲಿ ತೊಡಗಿದ್ದಾರೆ.
ಮಾರಾಟ ಶೇ 40ರಷ್ಟು ಹೆಚ್ಚಳ:
ಸಾಮಾನ್ಯ ದಿನಗಳಲ್ಲಿ ಪ್ರತಿ ದಿನ 60 ರಿಂದ 70 ಬೊಂಡ ಖರ್ಚಾಗುತ್ತಿತ್ತು. ಬಿಸಿಲಿನ ತಾಪ ಹೆಚ್ಚಾದ ಬಳಿಕ ಶತಕದ ಗಡಿ ದಾಟಿದೆ ಎನ್ನುತ್ತಾರೆ ಎಳನೀರು ವ್ಯಾಪಾರಿ ಕೃಷ್ಣಮೂರ್ತಿ.
ಉಡುಪಿ ಜಿಲ್ಲೆಗೆ ನೆರೆಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಿಂದ ಹೆಚ್ಚಾಗಿ ಎಳನೀರು ಪೂರೈಕೆಯಾಗುತ್ತದೆ. ಬೇಡಿಕೆ ಹೆಚ್ಚಾಗಿರುವುದರಿಂದ ಪೂರೈಕೆ ಪ್ರಮಾಣವೂ ಕಡಿಮೆಯಾಗಿದೆ ಎನ್ನುತ್ತಾರೆ ಅವರು.
ಕಲ್ಲಂಗಡಿಗೆ ಬೇಡಿಕೆ:
ಅತಿ ಹೆಚ್ಚು ದ್ರವದ ಪ್ರಮಾಣ ಹೊಂದಿರುವ ದೇಹಕ್ಕೆ ಹಿತ ಹಾಗೂ ಆರೋಗ್ಯಯುತವಾದ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಪೂರ್ಣ ಕಡು ಹಸಿರು ಬಣ್ಣದ ಕಲ್ಲಂಗಡಿ ಕೆ.ಜಿಗೆ ₹ 20 ರಿಂದ ₹ 25 ಇದ್ದರೆ, ಹಸಿರು ಬಣ್ಣದ ಮಧ್ಯೆ ಗೆರೆ ಹೊಂದಿರುವ ದೊಡ್ಡ ಗಾತ್ರದ ಕಲ್ಲಂಗಡಿಗೆ ಕೆ.ಜಿಗೆ ₹ 25 ರಿಂದ ₹30 ದರ ಇದೆ. ಸಾಮಾನ್ಯವಾಗಿ ಎರಡೂ ತಳಿಯ ಕಲ್ಲಂಗಡಿ ಕೆ.ಜಿಗೆ 15 ರಿಂದ 20ಕ್ಕೆ ಲಭ್ಯವಾಗುತ್ತಿತ್ತು.
ಚಳಿಗಾಲದಲ್ಲಿ ಗ್ರಾಹಕರ ಬರ ಎದುರಿಸುತ್ತಿದ್ದ ಐಸ್‌ಕ್ರೀಂ ಹಾಗೂ ಜ್ಯೂಸ್ ಅಂಗಡಿಗಳಲ್ಲಿ ಗ್ರಾಹಕರು ಗಿಜಿಗುಡುತ್ತಿದ್ದಾರೆ. ಕಬ್ಬಿನ ಹಾಲು ಮಾರಾಟವೂ ಜೋರಾಗಿದೆ.
ತರಕಾರಿ ದರ:
ಕಳೆದ ವಾರದ ದರಕ್ಕೆ ಹೋಲಿಸಿದರೆ ಕೆಲವು ತರಕಾರಿಗಳ ಬೆಲೆ ಸ್ವಲ್ಪ ಹೆಚ್ಚಾಗಿದ್ದು ಕೆಲವು ಇಳಿಕೆಯಾಗಿವೆ. ತೀವ್ರ ಕುಸಿತ ಕಂಡಿದ್ದ ಈರುಳ್ಳಿಯ ದರ 20 ರಿಂದ 25ಕ್ಕೆ ಹೆಚ್ಚಾಗಿದೆ. ಕಳೆದವಾರ ₹ 60 ಇದ್ದ ಬೀನ್ಸ್ ದರ ಈ ವಾರ ₹ 80 ಮುಟ್ಟಿದೆ. ಟೊಮೆಟೊ 25 ರಿಂದ 30 ತಲುಪಿದೆ.
ಕ್ಯಾರೆಟ್ ದರ ಸ್ಥಿರವಾಗಿದ್ದು ಕೆ.ಜಿಗೆ 25 ರಿಂದ 35ಕ್ಕೆ ಸಿಗುತ್ತಿದೆ. ಈರೇಕಾಯಿ ದರ 50 ರಿಂದ 55 ಇದ್ದರೆ, ಬೆಂಡೆಕಾಯಿ ಬೆಲೆ ಗಗನಮುಖಿಯಾಗಿದ್ದು 60 ದಾಟಿದೆ. ಕ್ಯಾಪ್ಸಿಕಂ ದರವೂ 70ರಿಂದ 80ಕ್ಕೆ ಏರಿಕೆಯಾಗಿದೆ. ಸೋರೆಕಾಯಿ ₹ 30, ಎಲೆಕೋಸು ಕೆ.ಜಿಗೆ 20, ಆಲೂಗಡ್ಡೆ 30, ಬದನೆಕಾಯಿ 30, ಸಾಂಬಾರ್ ಸೌತೆ 20 ರಿಂದ 25, ಹೂಕೋಸು ₹ 30, ಹಸಿರು ಬಟಾಣಿ 60 ದರ ಇದೆ.
ಕಳೆದವಾರ 40 ಇದ್ದ ತೊಂಡೆಕಾಯಿ ಈ ವಾರ 60 ಮುಟ್ಟಿದೆ. ಕ್ಯಾಪ್ಸಿಕಂ ದರವೂ 60 ರಿಂದ 70 ತಲುಪಿದೆ. ಬೀಟ್‌ರೂಟ್ 30, ಕುಂಬಳಕಾಯಿ 20, ಬೂದು ಕುಂಬಳ 30 ದರ ಇದೆ. ಬೆಳ್ಳುಳ್ಳಿ ₹ 100. ಸಿಹಿ ಗೆಣಸು 40, ಮೂಲಂಗಿ 35, ಸೌತೆಕಾಯಿ 35, ನವಿಲುಕೋಸು 30, ಪಡವಲಕಾಯಿ 30, ಹಸಿ ಮೆಣಸಿನಕಾಯಿ 60, ಶುಂಠಿ 70 ಬೆಲೆ ಇತ್ತು.
ಬಾಳೆಹಣ್ಣು ಏರಿಕೆ:
ಬಾಳೆಹಣ್ಣಿನ ದರ ಸ್ಥಿರವಾಗಿದ್ದು ಕೆ.ಜಿ ಏಲಕ್ಕಿ ಬಾಳೆಗೆ 80 ಇದೆ. ಪಚ್ಚಬಾಳೆ ದರ 40 ಇದೆ. ಧಾರ್ಮಿಕ ಕಾರ್ಯಕ್ರಮ, ಮದುವೆ, ಶುಭ ಸಮಾರಂಭಗಳು ಹೆಚ್ಚು ನಡೆಯುತ್ತಿರುವ ಕಾರಣ ಬಾಳೆಹಣ್ಣಿಗೆ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಹಣ್ಣಿನ ದರ ಎಷ್ಟು:
ಪಪ್ಪಾಯ ದರ ದಿಢೀರ್ ಏರಿಕೆಯಾಗಿದ್ದು ಕೆ.ಜಿಗೆ 35 ರಿಂದ 50ಕ್ಕೆ ತಲುಪಿದೆ. ಹಸಿರು ದ್ರಾಕ್ಷಿ ಕೆ.ಜಿಗೆ 70, ಕಪ್ಪು ದ್ರಾಕ್ಷಿ 120, ದಾಳಿಂಬೆ ಕೆ.ಜಿಗೆ ₹ 200, ಸೇಬು ₹150 ರಿಂದ ₹250, ಸಪೋಟ ₹60, ಮೊಸಂಬಿ ₹70, ಕಿತ್ತಳೆ ₹ 70, ಮಸ್ಕ್ ಮೆಲನ್ 40, ಪೈನಾಪಲ್ 40ಕ್ಕೆ ಮಾರಾಟವಾಯಿತು.
ಸೊಪ್ಪಿನ ದರ ಅಲ್ಪ ಹೆಚ್ಚಳ:
ಸೊಪ್ಪಿನ ದರ ಸ್ವಲ್ಪ ಇಳಿಮುಖವಾಗಿದ್ದು ಹಸಿರು ದಂಟು ಕಟ್ಟಿಗೆ ₹ 8, ಕೆಂಪು ದಂಟು ₹10, ಕರಿಬೇವು ₹4, ಕೊತ್ತಂಬರಿ ₹4, ಸಬ್ಸಿಗೆ ₹5, ಮೆಂತೆ ₹5, ಪಾಲಕ್ ₹5, ಪುದೀನ ₹5 ದರ ಇತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.