ಶುಕ್ರವಾರ, ಡಿಸೆಂಬರ್ 9, 2022
20 °C
ಉಡುಪಿಯಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ: ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‘ಪೇ ಸಿಎಂ’ ಪೋಸ್ಟರ್ ಅಂಟಿಸಿದ ಡಿಕೆಶಿ ಇಡಿ ಕಚೇರಿಗೆ ಹೋಗಿದ್ದು ಯಾಕೆ ಎಂದು ಸಿದ್ದರಾಮಯ್ಯ ಉತ್ತರಿಸಬೇಕು. ಭ್ರಷ್ಟಾಚಾರದ ಬಗ್ಗೆ ವಿಚಾರಣೆಗೆ ಒಳಗಾದವರಿಗೆ ಪೇ ಸಿಎಂ ಪೋಸ್ಟರ್ ಅಂಟಿಸುವ ನೈತಿಕತೆ ಇಲ್ಲ ಎಂದು ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದೆ. ಭ್ರಷ್ಟಾಚಾರ ನಡೆದಿದ್ದರೆ ನ್ಯಾಯಾಲಯ, ಮುಖ್ಯಮಂತ್ರಿ, ಲೋಕಾಯುಕ್ತಕ್ಕೆ ದೂರು ಕೊಡಲಿ. 10 ದಿನಗಳ ಅಧಿವೇಶನದಲ್ಲಿ ಒಂದು ದಿನವೂ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಟೀಕಿಸಿದರು.

ನಾಡಗೀತೆ ಅಂತಿಮ:

ಎಸ್‌.ಆರ್‌.ಲೀಲಾವತಿ ಸಮಿತಿ ಶಿಫಾರಸಿನಂತೆ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ 2 ನಿಮಿಷ 30 ಸೆಕೆಂಡ್‌ ನಾಡಗೀತೆಯನ್ನು ಅಂತಿಮಗೊಳಿಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

18 ವರ್ಷಗಳಿಂದ ನಾಡಗೀತೆಯ ಬಗ್ಗೆ ಸ್ಪಷ್ಟತೆ ಇರಲಿಲ್ಲ. ರಾಗ ಸಂಯೋಜನೆ ಮತ್ತು ಸಮಯ ನಿಗದಿಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಇದೀಗ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಂಡಿದ್ದು ಕುವೆಂಪು ಬರೆದ ನಾಡಗೀತೆಯಲ್ಲಿ ಯಾವುದೇ ಶಬ್ದ ಕಡಿತಗೊಳಿಸಿಲ್ಲ ಎಂದು ತಿಳಿಸಿದರು.

ನಾಡಗೀತೆ ಕರ್ನಾಟಕದ ಅಸ್ಮಿತೆಯ ಪ್ರಶ್ನೆಯಾಗಿದ್ದು ಸಾಂಸ್ಕೃತಿಕ ಲೋಕದಲ್ಲಿ, ಸಾಹಿತ್ಯ ವಲಯದಲ್ಲಿ ಸದಾಭಿಪ್ರಾಯಗಳು ಬಂದಿವೆ. ಬರಗೂರು ರಾಮಚಂದ್ರಪ್ಪರಿಂದ ಎಸ್‌.ಎಲ್‌.ಭೈರಪ್ಪನವರೆಗೆ ಎಲ್ಲ ಸಾಹಿತಿಗಳು ಒಪ್ಪಿಕೊಂಡಿದ್ದಾರೆ ಎಂದರು.

ಪಿಎಫ್‌ಐ ಬಗ್ಗುಬಡಿಯುತ್ತಿರುವ ಎನ್‌ಐಎ:

ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ಬಗ್ಗು ಬಡಿಯುತ್ತಿದೆ. ಬಂಧಿತರು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಕನಸು ಕಂಡಿದ್ದರು. ಜಗತ್ತಿನ ಯಾವುದೇ ರಾಷ್ಟ್ರ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಭಾರತ ಹಿಂದೂ ರಾಷ್ಟ್ರವಾಗಿದ್ದು, ಹಿಂದೂ ಸಂಸ್ಕೃತಿಯ ಮೇಲೆ ಮತ್ತಷ್ಟು ಸಬಲಗೊಳಿಸುತ್ತೇವೆ.

ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡುವುದಾಗಿ ಕಾರ್ಯಕರ್ತರಿಗೆ ಭರವಸೆ ನೀಡಿದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಸಿದ್ದರಾಮಯ್ಯ ಕಾಲದಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ಪೋಷಿಸಲಾಗುತ್ತಿತ್ತು. ಹಿಂದೂಗಳ ಕೊಲೆ ಪ್ರಕರಣದ ಆರೋಪಿಗಳ ಮೇಲಿನ ಪ್ರಕರಣವನ್ನು ವಾಪಸ್ ಪಡೆಯಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಮತ್ತೊಮ್ಮೆ ಬಿಜೆಪಿ ಸರ್ಕಾರ:

ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ. ಬೊಮ್ಮಾಯಿ ಅವರ ನೇತೃತ್ವ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. ನವರಾತ್ರಿ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು