ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯಿಂದ 3ನೇ ಬಾರಿಗೆ ಪ್ರಧಾನಿಯಾದ ಮೋದಿ:ರಾಘವೇಂದ್ರ

Published 22 ಜೂನ್ 2024, 5:41 IST
Last Updated 22 ಜೂನ್ 2024, 5:41 IST
ಅಕ್ಷರ ಗಾತ್ರ

ಕುಂದಾಪುರ: ಕಳೆದ ಎರಡು ಅವಧಿಯಲ್ಲಿ ದೇಶದ ಅಭಿವೃದ್ಧಿಗಾಗಿ ಹಾಗೂ ದೇಶದ ಗೌರವವನ್ನು ಹೆಚ್ಚಿಸಲಿಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ನೀಡಿದ ಕೊಡುಗೆಗಳನ್ನು ಪರಿಗಣಿಸಿದ ಕಾರಣದಿಂದಾಗಿ, ಸಾಕಷ್ಟು ಸವಾಲುಗಳ ನಡುವೆಯೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಇಲ್ಲಿಗೆ ಸಮೀಪದ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಶುಕ್ರವಾರ ಬೈಂದೂರು ಬಿಜೆಪಿ ಮಂಡಲ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ, ಅವರು ಮಾತನಾಡಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಮತದಾರರು ತೋರಿಸಿದ ಪ್ರೀತಿ-ವಿಶ್ವಾಸದ ಕಾರಣಕ್ಕಾಗಿ ಇಲ್ಲಿನ ಶೇ 63ರಷ್ಟು ಜನ ನನಗೆ ಮತ ಹಾಕಿದ್ದಾರೆ. ಇದರ ಹಿಂದೆ ಪಕ್ಷದ ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನ ಇದೆ. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿರುವ ಕೊಲ್ಲೂರು ಕಾರಿಡಾರ್ ಯೋಜನೆ ಹಾಗೂ ಕುಂದಾಪುರ-ಗಂಗೊಳ್ಳಿ ಸಂಪರ್ಕ ಸೇತುವೆ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರದಲ್ಲಿ ಸಚಿವನಾಗದೇ ಇದ್ದರೂ, ಈ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿ, ಮಾದರಿಯನ್ನಾಗಿಸುವ ಕಟಿಬದ್ಧತೆ ಇಟ್ಟುಕೊಳ್ಳುತ್ತೇನೆ. ಕೊಲ್ಲೂರನ್ನು ಸಂಪರ್ಕಿಸುವ ಕೊಡಚಾದ್ರಿ ಕೇಬಲ್ ಕಾರ್ ಯೋಜನೆಯ ಯೋಜನೆಯ ವಿನ್ಯಾಸಕ್ಕೆ ಒಪ್ಪಿಗೆ ಸಿಕ್ಕಿದೆ. ಕಾರಿಡಾರ್ ಯೋಜನೆಯ ಮೂಲಕ ಮೂಕಾಂಬಿಕಾ ಸನ್ನಿದಾನ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾಯಕಲ್ಪ ಮಾಡಲಾಗುವುದು. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಶೀಘ್ರವೇ ಭೇಟಿಯಾಗಿ ಈ ಭಾಗದ ಅಭಿವೃದ್ಧಿ ಯೋಜನೆಗಾಗಿ ವಿಶೇಷ ಅನುದಾನ ನೀಡಲು ಮನವಿ ಮಾಡುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕಿಶೋರ್ ಕುಮಾರ್ ಕುಂದಾಪುರ, ಈಗಾಗಲೇ ಮುಗಿದಿರುವ ಲೋಕಸಭೆ ಹಾಗೂ ಪರಿಷತ್ ಚುನಾವಣೆಯ ಅಭೂತಪೂರ್ವ ಗೆಲುವು ನಮಗೆ ಮುಂದಿನ ಎಲ್ಲ ಚುನಾವಣೆಗಳಿಗೂ ಧೈರ್ಯ ಕೊಟ್ಟಿದೆ. ಶ್ರಮದಿಂದ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯಕರ್ತರ ಕೆಲಸಗಳೇ ಅಭಿನಂದನೀಯವಾದುದು. ಗೆದ್ದವರನ್ನು ಅಭಿನಂದಿಸುವುದಕ್ಕಿಂತ ಗೆಲುವಿಗೆ ಶ್ರಮಿಸಿದವರನ್ನು ಗುರುತಿಸುವುದು ಬಹಳ ಮುಖ್ಯವಾಗುತ್ತದೆ ಎಂದ ಅವರು ನಾಲ್ಕು ಬಾರಿ ಸಂಸದವರಾಗಿ ಗೆಲುವು ಸಾಧಿಸಿರುವ ಬಿ.ವೈ.ರಾಘವೇಂದ್ರ ಅವರು, ಕೇಂದ್ರದಲ್ಲಿ ಸಚಿವರಾಗಿ ದೇಶ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.

ಮಂಗಳೂರು ವಿಭಾಗದ ಬಿಜೆಪಿ ಪ್ರಭಾರಿ ಕಿದಿಯೂರು ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಬಿಜೆಪಿ ಪಕ್ಷದ ಜಿಲ್ಲಾ ಪ್ರಮುಖರಾದ ಪ್ರಿಯದರ್ಶಿನಿ ದೇವಾಡಿಗ, ಸದಾನಂದ ಉಪ್ಪಿನಕುದ್ರು, ಕಾಡೂರು ಸುರೇಶ್ ಶೆಟ್ಟಿ, ವಿವಿಧ ಜಿಲ್ಲಾ ಮೋರ್ಚಾಗಳ ಚಂದ್ರ ಪಂಚವಟಿ, ವಿಜಯ ಕೊಡವೂರು, ಪೃಥ್ವಿರಾಜ್ ಶೆಟ್ಟಿ, ಮಂಡಲದ ವಿವಿಧ ಮೋರ್ಚಾಗಳ ಪ್ರಮುಖರು, ರವಿ ಖಾರ್ವಿ, ಪ್ರಶಾಂತ್ ಪೂಜಾರಿ ಇದ್ದರು.

ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಪೂಜಾರಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಮಹಾ ಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಅಗ್ನಿ ವೀರ್‌ಗೆ ಆಯ್ಕೆಯಾದ ಅಕ್ಷಯ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

‘ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ’
ಚುನಾವಣೆಯ ಆರಂಭದಲ್ಲಿ ಏನೇ ಗೊಂದಲ ಅಸಮಾಧಾನಗಳು ಇದ್ದರೂ ಅಂತಿಮ ಫಲಿತಾಂಶ ತಂದು ಕೊಡುವಲ್ಲಿ ಬೈಂದೂರು ಕ್ಷೇತ್ರದ ಕಾರ್ಯಕರ್ತರು ಮುಂಚೂಣಿಯಲ್ಲಿ ಇರುತ್ತಾರೆ. ಪ್ರತಿಯೊಬ್ಬ ಪಕ್ಷನಿಷ್ಠ ಕಾರ್ಯಕರ್ತರ ಹೋರಾಟದಿಂದ ಗುರುತಿಸಿಕೊಳ್ಳಬಹುದಾದ ಗರಿಷ್ಠ ಮುನ್ನಡೆ ಸಿಕ್ಕಿದೆ. ಕೊಲ್ಲೂರು ಕಾರಿಡಾರ್ ಯೋಜನೆ ಅನುಷ್ಠಾನಗೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಂಸದ ರಾಘಣ್ಣ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT