ಮಂಗಳವಾರ, ಸೆಪ್ಟೆಂಬರ್ 28, 2021
20 °C
ಭತ್ತದ ತೆನೆಗೆ ಪೂಜೆ ಸಲ್ಲಿಕೆ; ಮನೆಯಲ್ಲಿ ಸಸ್ಯಾಹಾರ ಖಾದ್ಯಗಳ ಸವಿ

ಉಡುಪಿಯಲ್ಲಿ ಮೊಂತಿ ಫೆಸ್ಟ್‌ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರಾವಳಿಯ ಕ್ರೈಸ್ತರ ಶ್ರದ್ಧಾ ಹಬ್ಬವಾದ ತೆನಹಬ್ಬ ಹಾಗೂ ಕನ್ಯಾ ಮರಿಯಮ್ಮ ಅವರ ಜನ್ಮದಿನ (ಮೊಂತಿ ಫೆಸ್ಟ್) ಜಿಲ್ಲೆಯಾದ್ಯಂತ ಮಂಗಳವಾರ ಸರಳವಾಗಿ ಆಚರಿಸಲಾಯಿತು.

ಕೊರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಸಾಮೂಹಿಕ ಆಚರಣೆ ನಡೆಯಲಿಲ್ಲ. ಆರೋಗ್ಯದ ಹಿತದೃಷ್ಟಿಯಿಂದ ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳ ಸಮರ್ಪಣೆ ಹಾಗೂ ಮೆರವಣಿಗೆ ಇರಲಿಲ್ಲ.

ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಆಯಾ ಊರಿನ ಗುರಿಕಾರರು ಹೊಲಗಳಿಂದ ತಂದ ಭತ್ತದ ತೆನೆಗಳನ್ನು ಧರ್ಮಗುರುಗಳು ಆಶೀರ್ವದಿಸಿ ಬಲಿಪೂಜೆ ನೆರವೇರಿಸಿದರು. ಚರ್ಚ್‌ಗಳಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಎಲ್ಲರೂ ಭಾಗವಹಿಸಲು ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಬಲಿಪೂಜೆಗಳನ್ನು ಆಯೋಜಿಸಿಲಾಗಿತ್ತು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಉಡುಪಿಯ ಶೋಕ ಮಾತಾ ಇಗರ್ಜಿಯಲ್ಲಿ ಬಲಿಪೂಜೆ ನೆರವೇರಿಸಿ ಜನರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ಬಲಿಪೂಜೆಗಳಿಗೆ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಪ್ರವೇಶ ನಿಷೇಧವಿತ್ತು. ಭಕ್ತರು ಚರ್ಚ್‌ನೊಳಗೆ ಬರುವ ಮುನ್ನ ಕಡ್ಡಾಯವಾಗಿ ಸ್ಯಾನಿಟೈಸ್ ಹಾಕಿಕೊಳ್ಳಬೇಕು. ಅಂತರ ಕಾಪಾಡಿಕೊಂಡು ಬಲಿಪೂಜೆಯಲ್ಲಿ ಭಾಗವಹಿಸಬೇಕು ಎಂಬ ನಿಯಮ ಕಡ್ಡಾಯ ಮಾಡಲಾಗಿತ್ತು.

ಬಲಿಪೂಜೆಯಲ್ಲಿ ಧರ್ಮಗುರುಗುಳು ಜೀವನ ಹಾಗೂ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ಪ್ರವಚನ ನೀಡಿದರು.

ಹಬ್ಬಕ್ಕೆ ಒಂಬತ್ತು ದಿನ ಮುಂಚಿತವಾಗಿ ಚರ್ಚ್‌ಗಳಲ್ಲಿ ನೊವೆನಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೊಂತಿ ಹಬ್ಬದ ಆಚರಣೆಗೆ ಚಾಲನೆ ಸಿಗುತ್ತದೆ. ಈ ಬಾರಿ ನೊವೆನಾವನ್ನು ಸಾಂಕೇತಿಕವಾಗಿ ನೆರವೇರಿಸಿದ್ದು, ಮನೆಗಳಲ್ಲಿಯೇ ಮೇರಿ ಮಾತೆಗೆ ಹೂಗಳನ್ನು ಸಮರ್ಪಿಸಲು ಸೂಚಿಸಲಾಗಿತ್ತು.

ಬಲಿಪೂಜೆಯ ಬಳಿಕ ಧರ್ಮಗುರುಗಳು ಹೊಸ ಭತ್ತದ ತೆನೆಯನ್ನು ಗುರಿಕಾರರು ಹಾಗೂ ಪ್ರತಿನಿಧಿಗಳ ಮೂಲಕ ನೀಡಿ ಹರಸಿದರು. ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ಕಳಿಸಿಕೊಡಲಾಯಿತು.

ಭಕ್ತರು ಚರ್ಚ್‌ಗಳಿಂದ ತಂದ ಭತ್ತದ ತೆನೆಯನ್ನು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ, ತೆನೆ ಸುಲಿದು ಪಾಯಸ ಹಾಗೂ ಹಾಲಿನ ತಿನಿಸು ಮಾಡಿ ಕುಟುಂಬದೊಟ್ಟಿಗೆ ಸವಿದರು. ಹಬ್ಬದ ಅಂಗವಾಗಿ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆಕಾಯಿ ಸೇರಿದಂತೆ ಹಲವು ಸಸ್ಯಾಹಾರಿ ಖಾದ್ಯಗಳನ್ನು ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು