ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆದ್ದಾರಿ ಕಾಮಗಾರಿ ಭೂಸ್ವಾಧೀನ: ಅಧಿಕಾರಿಗಳ ಸಭೆ

ಸಂತೃಸ್ತರಿಗೆ ಅನ್ಯಾಯವಾಗದಂತೆ ಭೂಸ್ವಾಧೀನ ಪ್ರಕಿಯೆ ಪೂರ್ಣಗೊಳಿಸಿ: ರಾಘವೇಂದ್ರ
Published : 12 ಸೆಪ್ಟೆಂಬರ್ 2024, 4:15 IST
Last Updated : 12 ಸೆಪ್ಟೆಂಬರ್ 2024, 4:15 IST
ಫಾಲೋ ಮಾಡಿ
Comments

ಬೈಂದೂರು: ರಾಷ್ಟ್ರೀಯ ಹೆದ್ದಾರಿ 766ಸಿ ದ್ವಿಪಥ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿ ಎರಡು ವರ್ಷ ಕಳೆದಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕೊಲ್ಲೂರಿನಿಂದ ಯಡ್ತರೆ ತನಕ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಕಾಮಗಾರಿ ಆರಂಭಿಸಲು ಹಿನ್ನಡೆಯಾಗಿದೆ. ಸಂಬಂಧಿತ ಇಲಾಖೆ ವಿಶೇಷ ಮುತುವರ್ಜಿವಹಿಸಿ ರೈತರಿಗೆ ಅನ್ಯಾಯವಾಗದಂತೆ ಗರಿಷ್ಠ ಪರಿಹಾರ ನೀಡುವ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಸಂಸದ ಬಿ.ವೈ. ರಾಘವೇಂದ್ರ ಸೂಚಿಸಿದರು.

ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿ 766ಸಿ ಭೂಸ್ವಾಧೀನ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆದ್ದಾರಿ ದ್ವಿಪಥ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಂಸದರು, ರೈತರು ತಮ್ಮ ಭೂಮಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಅಭಿವೃದ್ಧಿ ಕಾರ್ಯ ನಡೆಸಲು ಭೂಮಿ ಅಗತ್ಯವಾಗಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ಅನಿವಾರ್ಯ. ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಮಾನದಂಡದಂತೆ ಗರಿಷ್ಠ ಪರಿಹಾರ ವಿತರಿಸಲಾಗುತ್ತದೆ. ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಭೂಸ್ವಾಧೀನ ಪ್ರಕ್ರಿಯೆ ಗೊಂದಲದಿಂದಾಗಿ ಹಲವು ಸಂತ್ರಸ್ತ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಪ್ರತ್ಯೇಕ ಸಮಿತಿ ರಚಿಸಲಾಗುವುದು. ಸಮಿತಿಯಲ್ಲಿ ಎನ್‌ಎಚ್‌ ಅಧಿಕಾರಿಗಳು, ಭೂ ಸ್ವಾಧೀನ ಅಧಿಕಾರಿ, ತೋಟಗಾರಿಕೆ, ಸಬ್‌ ರಿಜಿಸ್ಟ್ರಾರ್, ಪೋಲಿಸ್ ಇಲಾಖೆ ಅಧಿಕಾರಿಗಳಿದ್ದು, ಜಂಟಿ ಸರ್ವೆ ನಡೆಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.

ಪರಿಹಾರ ಪ್ರಮಾಣ, ಭೂಸ್ವಾಧೀನ ವಿಸ್ತೀರ್ಣ: ಭೂಮಿ, ಕಟ್ಟಡ, ತೋಟ, ಮರಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನಷ್ಟದ ಅಂದಾಜು ಪಟ್ಟಿಯಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೌಲ್ಯದ ಎರಡು ಪಟ್ಟು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ 5 ಕಿ.ಮೀ. ದೂರದವರೆಗೆ 3 ಪಟ್ಟು, ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಪಟ್ಟು ಪರಿಹಾರ ವಿತರಿಸಲಾಗುತ್ತದೆ. ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಡ್ತರೆಯಿಂದ 3.8 ಕಿ.ಮೀ ದೂರದವರೆಗೆ ರಸ್ತೆಯ ಬದಿಯಲ್ಲಿ ತಲಾ 8 ಮೀ, ಹಾಲ್ಕಲ್‌ವರೆಗೆ ತಲಾ 15 ಮೀ. ಜಾಗ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಶಾಸಕ ಗುರುರಾಜ ಗಂಟಿಹೊಳೆ, ಎನ್‌ಎಚ್ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

***
***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT