ಮಂಗಳವಾರ, ಮೇ 18, 2021
30 °C
₹ 1.20 ಕೋಟಿ ವೆಚ್ಚದಲ್ಲಿ ಕಾಮಗಾರಿ:ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ:

ಬಜೆ ಅಣೆಕಟ್ಟೆಗೆ ಹೈಡ್ರಾಲಿಕ್ ಗೇಟ್‌ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಜಲಾಶಯಕ್ಕೆ ₹ 1.20 ಕೋಟಿ ವೆಚ್ಚದಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಸುವ ಯೋಜನೆಗೆ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿತು.

ಸೋಮವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಂಜಿನಿಯರ್ ಮೋಹನ್ ರಾಜ್‌, ಹಿಂದೆ ₹ 1.59 ಕೋಟಿ ವೆಚ್ಚದಲ್ಲಿ ಬಜೆ ಅಣೆಕಟ್ಟೆಯನ್ನು 1 ಮೀಟರ್‌ಗೆ ಎತ್ತರಿಸಿ, ಹೈಡ್ರಾಲಿಕ್ ಗೇಟ್ ಅಳವಡಿಸಲು ನಿರ್ಧರಿಸಲಾಗಿತ್ತು. ಅಣೆಕಟ್ಟೆಯನ್ನು 1 ಮೀಟರ್‌ಗೆ ಎತ್ತರಿಸಿದರೆ ಅಪಾಯ ಸಾಧ್ಯತೆ ಇದೆ ಎಂಬ ತಜ್ಞರ ಸಲಹೆ ಆಧಾರದ ಮೇಲೆ ಪ್ರಸ್ತಾವಿತ ಕಾಮಗಾರಿಯನ್ನು ಬದಲಿಸಲಾಗಿದೆ’ ಎಂದರು.

ಹಿಂದೆ, ಮೀಸಲಿಟ್ಟ ಅನುದಾನದಲ್ಲಿ ಬಜೆ ಡ್ಯಾಂಗೆ ₹ 1.20 ಕೋಟಿ ವೆಚ್ಚದಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಕೆ ಹಾಗೂ ಡಬ್ಲ್ಯುಟಿಪಿ ಉನ್ನತೀಕರಣ ಕಾಮಗಾರಿ ಹಾಗೂ ₹ 39.95 ಲಕ್ಷ ವೆಚ್ಚದಲ್ಲಿ ನಗರಸಭಾ ವ್ಯಾಪ್ತಿಯಲ್ಲಿರುವ ಬಾವಿಗಳ ಪುನಶ್ಚೇತನ ಮಾಡಲಾಗುವುದು. ಇದರಿಂದ ಪ್ರತಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಡ್ರೆಜಿಂಗ್ ಹಾಗೂ ಟ್ಯಾಂಕರ್‌ ನೀರು ಪೂರೈಸಲು ನಗರಸಭೆ ಖರ್ಚು ಮಾಡುತ್ತಿದ್ದ ಅಂದಾಜು ₹ 50 ಲಕ್ಷ ಉಳಿತಾಯವಾಗಲಿದೆ ಎಂದರು.

ಬೀಡಿನಗುಡ್ಡೆಯಲ್ಲಿರುವ ಕ್ರೀಡಾಂಗಣ ಹಾಗೂ ಮಣಿಪಾಲದಲ್ಲಿರುವ ಮಣ್ಣಪಳ್ಳ ನಿರ್ಲಕ್ಷ್ಯಕ್ಕೊಳಗಾಗಿದ್ದು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್‌, ಎರಡೂ ಜಾಗಗಳ ನಿರ್ವಹಣೆ ಜಿಲ್ಲಾಧಿಕಾರಿ ನೇತೃತ್ವದ ನಿರ್ವಹಣಾ ಸಮಿತಿಗೆ ಸೇರಿದ್ದು, ನಗರಸಭೆ ಹಸ್ತಕ್ಷೇಪ ಮಾಡುವಂತಿಲ್ಲ. ಈ ಸಂಬಂಧ ಎರಡೂ ಜಾಗಗಳ ನಿರ್ವಹಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಬೇಕು ಎಂಬ ನಿರ್ಣಯ ತೆಗೆದುಕೊಂಡು ಜಿಲ್ಲಾಧಿಕಾರಿಗೆ ಸಲ್ಲಿಸೋಣ ಎಂದರು.

ಮಣ್ಣಪಳ್ಳ ಅಭಿವೃದ್ಧಿಗೆ ಡೀಮ್ಡ್‌ಫಾರೆಸ್ಟ್ ನಿಯಮದಿಂದ ನಿರ್ವಹಣೆಗೆ ಅಡ್ಡಿಯಾಗಿದೆ. ಮಣ್ಣಪಳ್ಳ ನಗರಸಭೆ ಸುಪರ್ದಿಗೆ ಬಂದರೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಮಾಡಬಹುದು. ಅದಕ್ಕೂ ಮುನ್ನ ಜಿಲ್ಲಾಡಳಿತದ ವಶದಲ್ಲಿರುವ ನಿರ್ವಹಣಾ ಸಮಿತಿ ನಗರಸಭೆಗೆ ಬರಬೇಕು ಎಂದು ಶಾಸಕರು ಹೇಳಿದರು.

ಎಲ್ಲೆಂದರಲ್ಲಿ ರಸ್ತೆ ಅಗೆತ

ವರಾಹಿ ಯೋಜನೆ ಕಾಮಗಾರಿಯಿಂದ ನಗರದ ಹಲವೆಡೆ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಹಾಳಾಗಿದೆ. ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿದೆ. ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿದಿಲ್ಲ ಎಂದು ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಎಂಜಿನಿಯರ್‌ಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಜನರಿಗೆ ಮೊದಲು ಕುಡಿಯುವ ನೀರು ಕೊಡಿ ಎಂದು ತಾಕೀತು ಮಾಡಿದರು. ಕಚೇರಿಯಲ್ಲಿ ಕೂರದೆ ಸ್ಥಳ ಪರೀಶೀಲಿಸಿ ಎಂದು ಸೂಚಿಸಿದರು.

ನಗರಸಭಾ ವ್ಯಾಪ್ತಿಯಲ್ಲಿ ವಸತಿ ಹಂಚಿಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್, ವಸತಿ ಹಂಚಿಕೆ ಫಲಾನುಭವಿಗಳು ಆರಂಭಿಕ ಹಣ ಪಾವತಿ ಮಾಡದೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಸರಳೆಬೆಟ್ಟುವಿನಲ್ಲಿ 2 ಫ್ಲಾಟ್‌ಗಳ ನಿರ್ಮಾಣ ನಡೆಯುತ್ತಿದ್ದು, ಶೀಘ್ರ ಹಣ ಪಾವತಿಸಿದರೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದರು.

ಫ್ಲೆಕ್ಸ್ ದರ ಏರಿಕೆಗೆ ವಿರೋಧ

ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಪ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬ್ಯಾನರ್‌ಗಳಿಗೆ ಪ್ರತಿ ಚದರ ಅಡಿಗೆ ₹ 10 ಹಾಗೂ 15 ದಿನಗಳಿಗೆ 2000 ಪಡೆಯಲು ನಿರ್ಧರಿಸಲಾಗಿದೆ ಎಂದು ಪೌರಾಯುಕ್ತ ಉದಯಶೆಟ್ಟಿ ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಬ್ಯಾನರ್‌ಗಳ ಅಳವಡಿಕೆಗೆ ದರ ಕಡಿಮೆ ಮಾಡಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಪೂರ್ಣ ವಿನಾಯಿತಿ ಕೊಡಬೇಕು. ಬ್ಯಾನರ್‌ ಹಾಕಲು ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು ಎಂಬ ನಿಯಮ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷೆ ಸುಮಿತ್ರಾ ನಾಯಕ್ ಪ್ರತಿಕ್ರಿಯಿಸಿ, ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್‌ ಅಳವಡಿಕೆಗೆ ನಗರಸಭೆಯಿಂದ ಹಣ ಪಡೆಯುತ್ತಿಲ್ಲ. ಆದರೆ, ಬ್ಯಾನರ್‌ನಲ್ಲಿ ಶುಭಕೋರುವ ವ್ಯಕ್ತಿಯ ಹೆಸರಿದ್ದರೆ ಹಣ ಪಡೆಯಲಾಗುತ್ತದೆ. ಮುಂದೆ ನಗರಸಭೆಯಿಂದಲೇ ನೇರವಾಗಿ ಬ್ಯಾನರ್ ಅಳವಡಿಕೆಗೆ ಅನುಮತಿ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.

ಶಾಸಕ ರಘುಪತಿ ಭಟ್‌ ಮಧ್ಯೆ ಪ್ರವೇಶಿಸಿ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್‌ಗಳಿಗೆ ಕನಿಷ್ಠ 100 ದರ  ನಿಗಧಿಪಡಿಸಿ, ಉಳಿದ ಎಲ್ಲ ಬ್ಯಾನರ್‌ಗಳಿಗೆ ₹ 500 ದರ ನಿಗಧಿಪಡಿಸಿ ಎಂದು ಸಲಹೆ ನೀಡಿದರು.

ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.