ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸಂಕಷ್ಟದಲ್ಲಿ ನೆರವಾದ ಉದ್ಯೋಗ ಖಾತ್ರಿ

18,503 ಜನರಿಗೆ ಉದ್ಯೋಗ: ₹ 9.95 ಕೋಟಿ ಕೂಲಿ ವಿತರಣೆ
Last Updated 16 ಜೂನ್ 2021, 12:49 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಲಾಕ್‌ಡೌನ್ ಕಾರಣದಿಂದ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕೂಲಿ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದೆ.

ಜಿಲ್ಲೆಯ 10,632 ಕುಟುಂಬಗಳ 18,503 ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಲಾಗಿದ್ದು, 3,046 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ₹ 9.95 ಕೋಟಿ ಕೂಲಿ ಹಾಗೂ ₹ 2.3 ಕೋಟಿಯನ್ನು ಸಾಮಗ್ರಿ ಖರೀದಿಗೆ ವೆಚ್ಚ ಮಾಡಲಾಗಿದೆ.

103 ಕೆರೆ ಹೂಳೆತ್ತುವ ಕಾಮಗಾರಿಗಳು ನಡೆದಿದ್ದು, 152 ತೋಡು ಹೂಳೆತ್ತಲಾಗಿದೆ. 982 ಬಾವಿ, 855 ಬಚ್ಚಲು ಗುಂಡಿ, 326 ದನದ ಕೊಟ್ಟಿಗೆ, 44 ಅಡಿಕೆ, ತೆಂಗು, ಮಲ್ಲಿಗೆ ಹಾಗೂ ಇತರೆ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಾಲಿನಲ್ಲಿ ಹೊಸದಾಗಿ 3,213 ಕುಟುಂಬಗಳಿಗೆ ಉದ್ಯೋಗ ಚೀಟಿಯನ್ನು ವಿತರಿಸಲಾಗಿದೆ.

ಸ್ವಂತ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ನಡೆಸಲು ಆಸಕ್ತಿ ಹೊಂದಿರುವ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ವೈಯುಕ್ತಿಕ ಕಾಮಗಾರಿಗಳಿಗೆ ನರೇಗಾದಡಿ ಅವಕಾಶವಿದ್ದು, ಹೈನುಗಾರಿಕೆ ಮಾಡಲು ಆಸಕ್ತಿ ಇರುವವರು ದನದ ಕೊಟ್ಟಿಗೆ, ಕೋಳಿ, ಹಂದಿ, ಆಡು, ಕುರಿ ಶೆಡ್‌ಗಳನ್ನು ನಿರ್ಮಾಣಮಾಡಿಕೊಳ್ಳಬಹುದು.

ಕೃಷಿಯಲ್ಲಿ ಆಸಕ್ತಿ ಇರುವವರು ಅಡಿಕೆ, ತೆಂಗು, ಗೇರು, ಕೊಕೊ, ಕರಿ ಮೆಣಸು, ಮಲ್ಲಿಗೆ, ಪೌಷ್ಟಿಕ ತೋಟ ನಿರ್ಮಾಣ ಮಾಡಿಕೊಳ್ಳಬಹುದು. ಅಡಿಕೆ, ತೆಂಗು ಪುನಶ್ಚೇತನ ಕಾಮಗಾರಿಗೂ ಅವಕಾಶವಿದೆ. ಕೃಷಿಗೆ ಪೂರಕವಾಗಿ ಎರೆಹುಳು ತೊಟ್ಟಿ, ನೀರಾವರಿ ಬಾವಿ, ಕೃಷಿ ಹೊಂಡ ಕಾಮಗಾರಿಗಳಿಗೂ ಅವಕಾಶ ಇದೆ.

ರೈತರು ಜಮೀನಿನಲ್ಲಿ ಮಹಾಗನಿ, ಸಾಗುವಾನಿ, ಹಲಸು, ನೇರಳೆ, ಮಾವು, ಅತ್ತಿ, ನುಗ್ಗೆ ಗಿಡಗಳನ್ನು ಬೆಳೆಸಬಹುದು. ಬಚ್ಚಲುಗುಂಡಿ ನಿರ್ಮಾಣಕ್ಕೆ, ನೀರು ಸಂರಕ್ಷಣೆಗೆ ರೈತರು ಕೊಳವೆ ಬಾವಿಗಳಿಗೆ ಜಲಮರುಪೂರಣ ಘಟಕ ನಿರ್ಮಿಸಿಕೊಳ್ಳಬಹುದು.

2021-22ನೇ ಸಾಲಿನಲ್ಲಿನರೇಗಾ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ಗುರಿ ಮೀರಿ ಪ್ರಗತಿ ಸಾಧಿಸಿದೆ. ಈ ಆರ್ಥಿಕ ಸಾಲಿನಲ್ಲಿ 6.70 ಲಕ್ಷ ಮಾನವ ದಿನಗಳ ಗುರಿ ಇದ್ದು ಜೂನ್ ಅಂತ್ಯಕ್ಕೆ 2.96 ಲಕ್ಷ ಮಾನವ ದಿನಗಳ ಗುರಿಗೆ ಪ್ರತಿಯಾಗಿ ಈಗಾಗಲೇ 3.26 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ 107.95 ಸಾಧನೆ ಮಾಡಲಾಗಿದೆ. ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ 63.20ರಷ್ಟು ಇದ್ದು, ರಾಜ್ಯದಲ್ಲಿ ಗರಿಷ್ಟ ಪ್ರಮಾಣ ಎಂಬ ಹೆಗ್ಗಳಿಕೆ ಜಿಲ್ಲೆಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್.

ಜಿಲ್ಲೆಯ ಗ್ರಾಮೀಣ ಭಾಗದ ಜನರು, ಕೂಲಿ ಕಾರ್ಮಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಹತ್ತಿರದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಅಥವಾ ಅನುಷ್ಠಾನ ಇಲಾಖೆಯ ಕಚೇರಿ ಸಂರ್ಪಕಿಸಬಹುದು. ಮಾಹಿತಿಗೆ ಉಡುಪಿ ಜಿಲ್ಲಾ ಪಂಚಾಯಿತಿ ಕಚೇರಿ ದೂರವಾಣಿ 0820 2574945 ಕರೆಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT