ಶನಿವಾರ, ಸೆಪ್ಟೆಂಬರ್ 18, 2021
30 °C
ದೇವಸ್ಥಾನ, ಬೀಚ್‌ಗಳಲ್ಲಿ ಪಾಲನೆಯಾಗದ ಕೋವಿಡ್ ಸುರಕ್ಷತಾ ಕ್ರಮಗಳು

ಉಡುಪಿ: ಪ್ರವಾಸಿ ತಾಣಗಳಲ್ಲಿ ನೆಗೆಟಿವ್ ವರದಿ ಕಡ್ಡಾಯ ಇಲ್ಲ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಲಾಕ್‌ಡೌನ್‌ ನಿರ್ಬಂಧಗಳು ಸಡಿಲಗೊಳ್ಳುತ್ತಿದ್ದಂತೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಭಣಗುಡುತ್ತಿದ್ದ ರೆಸಾರ್ಟ್‌ಗಳು, ಹೋಂಸ್ಟೇಗಳು, ಹೋಟೆಲ್‌ಗಳು ಗ್ರಾಹಕರಿಂದ ಭರ್ತಿಯಾಗುತ್ತಿವೆ. ಮೋಜು ಮಸ್ತಿಯ ನಡುವೆ ಕೋವಿಡ್‌ ಸುರಕ್ಷತಾ ಕ್ರಮಗಳು ಪಾಲನೆಯಾಗದಿರುವುದು ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಾಗುವ ಭೀತಿ ಎದುರಾಗಿದೆ.

ಆರ್‌ಟಿಪಿಸಿಆರ್‌ ಕಡ್ಡಾಯವಲ್ಲ: ಜಿಲ್ಲೆಯಲ್ಲಿರುವ ರೆಸಾರ್ಟ್‌, ಹೋಂಸ್ಟೇ ಹಾಗೂ ಪ್ರವಾಸಿ ತಾಣಗಳಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಆರ್‌ಟಿಪಿಸಿಆರ್‌ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿಲ್ಲ. ‘ಮಾಸ್ಕ್ ಧರಿಸುವುದು ಕಡ್ಡಾಯ’ ಎಂಬ ನಾಮಫಲಕಗಳು ಮಾತ್ರ ಇಲ್ಲಿ ಕಾಣಸಿಗುತ್ತಿವೆ.

ಗಿಜಿಗುಡುವ ಬೀಚ್‌: ಮಲ್ಪೆ ಬೀಚ್‌ ವಾರಾಂತ್ಯದಲ್ಲಿ ಪ್ರವಾಸಿಗರಿಂದ ತುಂಬುತ್ತಿದೆ. ಬೀಚ್‌ಗಳಲ್ಲಿ ಅಂತರ ಪಾಲನೆಯಾಗುತ್ತಿಲ್ಲ. ಮಾಸ್ಕ್ ಧರಿಸುವವರ ಸಂಖ್ಯೆಯೂ ಕಡಿಮೆ ಇದೆ. ಪರಿಣಾಮ, ಪ್ರವಾಸಿ ತಾಣಗಳು ಕೋವಿಡ್ ಹರಡುವ ಕೇಂದ್ರಗಳಾಗುವ ಅಪಾಯ ಸೃಷ್ಟಿಯಾಗಿದೆ.

ಉಡುಪಿಯ ಕೃಷ್ಣಮಠ, ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನ, ಕುಂಭಾಶಿ ಆನೆಗುಡ್ಡೆ ವಿನಾಯಕ ದೇವಸ್ಥಾನ, ಮಂದಾರ್ತಿಯ ದುರ್ಗಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ದರ್ಶನ ಪಡೆಯುವ ಸರದಿ ಸಾಲಿನಲ್ಲಿ ಅಂತರ ಕಾಣುತ್ತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ಅಂತರ ಕಾಪಾಡಿಕೊಳ್ಳುವಂತೆ, ದೇವಸ್ಥಾನದ ಗೋಡೆಗಳನ್ನು ಮುಟ್ಟದಂತೆ ಸೂಚನೆ ನೀಡಿದರೂ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ ಎನ್ನುತ್ತಾರೆ ದೇವಸ್ಥಾನದ ಸಿಬ್ಬಂದಿ.

ಕೇರಳದಿಂದ ಜಿಲ್ಲೆಗೆ ಬರುವವರರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದ್ದರೂ, ರೈಲುಗಳ ಮೂಲಕ ಜಿಲ್ಲೆಗೆ ಬರುವವರ ತಪಾಸಣೆ ನಡೆಯುತ್ತಿಲ್ಲ. ಬಸ್‌ ಹಾಗೂ ಸ್ವಂತ ವಾಹನಗಳಲ್ಲಿ ಬರುವವರ ತಪಾಸಣೆಯೂ ಕಟ್ಟುನಿಟ್ಟಾಗಿ ನಡೆಯುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ.

ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹೆಚ್ಚಾಗುತ್ತಿದ್ದಂತೆ ಹೆಜಮಾಡಿ, ಬಜಗೋಳಿ, ಆಗುಂಬೆ, ಕೊಲ್ಲೂರು, ಹೊಸಂಗಡಿ, ಶಿರೂರು ಸೇರಿದಂತೆ ಜಿಲ್ಲೆಯ 10 ಕಡೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ ಹಾಗೂ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಲಾಗುತ್ತಿದೆ ಎಂಬ ವಿವರಗಳನ್ನು ಪಡೆಯಲಾಗುತ್ತಿದೆ. ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗುತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು