ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿನ ನಿರೀಕ್ಷೆಯಲ್ಲಿ ಕರುಣಾಲಯ ವೃದ್ಧಾಶ್ರಮ

ಲಾಕ್‌ಡೌನ್: ಸಂಕಷ್ಟದಲ್ಲಿ ‘ವಿಶ್ವಾಸದ ಮನೆ’
ಅಕ್ಷರ ಗಾತ್ರ

ಶಿರ್ವ: ಕೋವಿಡ್ ಲಾಕ್‌ಡೌನ್‌ ಪರಿಣಾಮವಾಗಿ ಉಡುಪಿ ಜಿಲ್ಲೆಯ ಶಂಕರಪುರ ಸಮೀಪದ ‘ವಿಶ್ವಾಸದ ಮನೆ’ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಮತ್ತು ‘ಕರುಣಾಲಯ’ ವೃದ್ಧಾಶ್ರಮ ದಾನಿಗಳ ಮತ್ತು ಸಾರ್ವಜನಿಕರ ನೆರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ.

ಇಲ್ಲಿ ಆಶ್ರಯ ಪಡೆಯುತ್ತಿರುವ ಸುಮಾರು 300 ಮಂದಿ ಅನಾಥರಿಗೆ ದಿನನಿತ್ಯ ಆಹಾರ ವ್ಯವಸ್ಥೆ ಕಲ್ಪಿಸಲು ಸಂಸ್ಥೆಯು ಹೆಣಗಾಟ ನಡೆಸುತ್ತಿದೆ. ಸರ್ಕಾರದ ಯಾವುದೇ ನೆರವು ಇಲ್ಲದೆ, ದಾನಿಗಳ ಸಹಕಾರದಿಂದ 20 ವರ್ಷಗಳಿಂದ ನಡೆಯುತ್ತಿರುವ ಈ ಕೇಂದ್ರಕ್ಕೆ ಈಗ ಆಹಾರ ದಿನಸಿಗಳ ಕೊರತೆ ಎದುರಾಗಿದೆ.

ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಮಾನಸಿಕ ಅಸ್ವಸ್ಥರಿಗೆ ಇಲ್ಲಿ ನೆಲೆ ಕಲ್ಪಿಸಿ, ಊಟೋಪಚಾರದ ಜೊತೆಗೆ ಆರೋಗ್ಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ರಾತ್ರಿ ಮತ್ತು ಮಧ್ಯಾಹ್ನ ಊಟ, ಬೆಳಗ್ಗೆ ಮತ್ತು ಸಂಜೆಯ ಉಪಹಾರ ವ್ಯವಸ್ಥೆಗೆ ಅಕ್ಕಿ, ದವಸ–ಧಾನ್ಯ, ತರಕಾರಿ, ಮೀನು–ಮಾಂಸ, ಸಾಂಬಾರು ಪದಾರ್ಥಗಳ ಕೊರತೆ ಕಾಡುತ್ತಿದೆ.

‘ವಿಶ್ವಾಸದ ಮನೆ’ಯಲ್ಲಿ ಅಬಾಲ ವೃದ್ಧರಾದಿಯಾಗಿ ಯಾವುದೇ ಭೇದ–ಭಾವವಿಲ್ಲದೆ ಎಲ್ಲ ವರ್ಗದವರೂ ಆಶ್ರಯ ಪಡೆಯುತ್ತಿದ್ದಾರೆ. ಸುಮಾರು 50 ಕಾರ್ಯಕರ್ತರು, ವೈದ್ಯಾಧಿಕಾರಿಗಳು, ದಾದಿಯರು ಅನಾಥರ ಆರೈಕೆಗಾಗಿ ದಿನನಿತ್ಯ ದುಡಿಯುತ್ತಿದ್ದಾರೆ. ಇಲ್ಲಿ ಆಹಾರ ಪೂರೈಕೆ ಜೊತೆಗೆ ಸಿಬ್ಬಂದಿಗೆ ಸಂಬಳ ನೀಡುವುದೂ ಕಷ್ಟವಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ಉಪಾಧ್ಯಕ್ಷ ಬಾಬು ಮ್ಯಾಥ್ಯೂ.

ಜಾತಿ ಭೇದವಿಲ್ಲದೆ, ಬೀದಿಗೆ ಬಿದ್ದ ಎಲ್ಲ ಅನಾಥರನ್ನು ಸಲಹುತ್ತಿರುವ ಕೇಂದ್ರವು ಈಗ ದಾನಿಗಳ ನೆರವನ್ನು ನಿರೀಕ್ಷಿಸುತ್ತಿದೆ. ಸಂಪರ್ಕ ದೂರವಾಣಿ: ಬಾಬು ಮ್ಯಾಥ್ಯೂ-9902334941, ಪಾಸ್ಟರ್ ಸುನಿಲ್ ಜಾನ್ ಡಿಸೋಜಾ-9663431597.

‘300 ಅನಾಥರಿಗೆ ರಕ್ಷಣೆ’

‘ಶಂಕರಪುರ ‘ವಿಶ್ವಾಸದ ಮನೆ’ಯಲ್ಲಿ 300 ಮಂದಿ ಬೀದಿಗೆ ಬಿದ್ದ ಅನಾಥರಿಗೆ ಆಶ್ರಯ ಕಲ್ಪಿಸಲಾಗಿದೆ. ಮೂರು ವರ್ಷಗಳ ಹಿಂದೆ ಉಡುಪಿ ಜಿಲ್ಲಾಡಳಿತವು ಕುಂದಾಪುರದ ಆಶ್ರಮವೊಂದರಿಂದ 30 ಮಂದಿ ಅನಾಥರನ್ನು ತಂದು ಇಲ್ಲಿಗೆ ಸೇರಿಸಿದೆ. ಇವರ ಪಾಲನೆ–ಪೋಷಣೆಗೆ ಸರ್ಕಾರದಿಂದ ಪ್ರತಿವರ್ಷ ಅನುದಾನ ಬರುತ್ತದೆ ಎಂದು ಜಿಲ್ಲಾಡಳಿತ ಹೇಳಿದ್ದರೂ, ಈ ತನಕ ಬಿಡಿಗಾಸಿನ ನೆರವು ದೊರೆತಿಲ್ಲ. ಎಲ್ಲರ ಪಾಲನೆ ಸಂಸ್ಥೆಗೆ ಕಷ್ಟವಾಗಿದ್ದು, ಜಿಲ್ಲಾಡಳಿತ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮುಖ್ಯಸ್ಥ ಪಾಸ್ಟರ್ ಸುನಿಲ್ ಜಾನ್ ಡಿಸೋಜ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT