ರಾಜಕಾರಣಿಗಳು ದೇವರ ಅಡ್ಡೆಯಲ್ಲೂ ಹ್ಯಂಗೆಂಗಾಡ್ತರೆ ಅನ್ನದ್ಕೆ ತುರೇಮಣೆ ಒಂದು ಕಥೆ ಹೇಳಿದರು. ರಾಜಕಾರಣಿಗಳು ತಾವು ಊರೊಟ್ಟಿನ ಕೆಲಸ ಮಾಡದ್ರಿಂದ ಸ್ವರ್ಗ ಗ್ಯಾರಂಟಿ ಅಂತ ಕೊಚ್ಚಿಗ್ಯತರಲ್ಲ! ದೇವರ ಟೈಮಾಫೀಸಲ್ಲಿ ಜನರ ನಿರಾಧಾರ್ ನಂಬರಿಗೆ ಲಾಗಿನ್ ಆಗಿ ಹಣೆಬರಹ ಸ್ಕ್ಯಾನ್ ಮಾಡಿ, ಜ್ಞಾನ್ ನಂಬರ್ ಇದ್ದೋರನ್ನ ಸ್ವರ್ಗಕ್ಕೆ ಇಲ್ಲದೋರನ್ನ ನರಕಕ್ಕೆ ಕಳಗುಸ್ತಿದ್ದರಂತೆ. ಆದರೆ ರಾಜಕಾರಣಿಗಳಿಗೆ ಜ್ಞಾನ್ ನಂಬರೇ ಇಲ್ಲದೇ ಡೈರೆಕ್ಟಾಗಿ ನರಕಕ್ಕೆ ಹೋಯ್ತಿದ್ದರಂತೆ!
ಪಕ್ಕದಲ್ಲಿದ್ದ ನರಕದ ವರ್ಕ್‍ಶಾಪಲ್ಲಿ ನರಕವಾಸಿಗಳನ್ನ ಯಮದೋರು ದಿನಾ ಸುಟ್ಟು ಚಾಕಣ ಮಾಡ್ತಿದ್ದರು. 'ಅಷ್ಟೊಂದು ದೇವರ ಪೂಜೆ ಮಾಡ್ತಿದ್ದೆ! ಬಂದ ಕಾಸಲ್ಲಿ ದೇವರಿಗೂ ಕಮೀಷನ್ ಕೊಡ್ತಿದ್ದೆ. ಆದರೂ ದೇವರು ನನ್ನನ್ನ ಇಲ್ಲಿಗೆ ಕಳಿಸವನೆ' ಅಂತ ನರಕವಾಸಿಗಳು ದೇವರನ್ನ ಬೈಕಂದೇ ಕಾಲಕಳೆಯವು.
ನರಕದಲ್ಲಿದ್ದ ರಾಜಕಾರಣಿಯೊಬ್ಬರು 'ನಮಗೆ ಮೀಸಲಾತಿ ಕೊಟ್ಟಿಲ್ಲ. ರಾಜಕಾರಣಿಗಳಿಗೆ ಸ್ವರ್ಗಕ್ಕೆ ಸ್ಪೆಶಲ್ ಎಂಟ್ರಿ ಕೊಡಬಕು. ನರಕದಲ್ಲಿ ನಮ್ಮನ್ನ ಕ್ಯಾಬಿನೆಟ್ ಮಂತ್ರಿ ಮಾಡಬಕು. ಸರ್ಕಾರಿ ಮದ್ಯದಂಗಡಿ ತೆರೆದು ಇಲ್ಲಿರೋ ಕುಡುಕರಿಗೆಲ್ಲಾ ಮದ್ಯಶಾಂತಿ ಯೋಜನೆಯಲ್ಲಿ ದಿನಾ ಎರಡು ಪೆಗ್ಗು ಫ್ರೀ ಕೊಡಬಕು. ನರಕದ ಹೆಸರನ್ನ ನರಕನಸ್ವರ್ಗ ಅಂತ ಬದಲಾಯಿಸಿ ಬೋರ್ಡ್ ಹಾಕಬಕು’ ಅಂತ ದೇವರಿಗೆ ಡಿಮ್ಯಾಂಡ್ ಇಟ್ಟರು. ‘ಆಯ್ತು ಕಾ ಬುಡ್ರಯ್ಯ. ನಿಮ್ಮ ಯೋಗ್ತೇಗೆ ತಕ್ಕದ್ದೇ ಕೊಡಮು’ ಅಂತ ದೇವರು ಒಪ್ಪಿಕ್ಯಂದ್ರು. ಆಮೇಲೆ ಬರುತ್ತಿದ್ದ ರಾಜಕೀಯ ಪಕ್ಷಿಗಳು, ಕಳ್ಳ-ಸುಳ್ಳರು ಬೋರ್ಡು ನೋಡಿ ‘ನಮಗೆ ನರಕನಸ್ವರ್ಗವೇ ಕೊಡ್ರಿ ಸ್ವಾಮೇ!’ ಅಂತ ಕೇಳಿ ನರಕ ಸೇರೋರು! ದೇವರು ಇವರ ಆಟಗುಳಿ ನೋಡ್ತಾ ನಸುನಗತಿದ್ದ.
ನರಕದ ಎದುರಿಗೇ ಸ್ವರ್ಗ ಇತ್ತು. ‘ನಮ್ಮಪ್ಪ ಕುಲಸ್ವಾಮಿ ಭೂಲೋಕದಲ್ಲೇ ನರಕ ಕಂಡುದವಿ. ಈಗ ನೀನು ಕೊಟ್ಟುದ್ದೇ ಪ್ರಸಾದ’ ಅಂತಿದ್ದ ಜನಸಾಮಾನ್ಯರು ಸ್ವರ್ಗಕ್ಕೆ ಹೋಯ್ತಿದ್ದರು. ದೇವರು ಜನರ ನಿಯತ್ತು, ರಾಜಕಾರಣಿಗಳ ಚಾಳಿ ನೋಡಿ ನಸುನಗತಿದ್ದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.