ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡುಬಿದ್ರಿ: ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆ, ಕಾಲೇಜು

ಎರ್ಮಾಳಿನ ಬಡಾ ಜ್ಯೂನಿಯರ್‌ ಕಾಲೇಜಿನಲ್ಲಿ ಶೂನ್ಯ ದಾಖಲಾತಿ
Published 9 ಅಕ್ಟೋಬರ್ 2023, 8:28 IST
Last Updated 9 ಅಕ್ಟೋಬರ್ 2023, 8:28 IST
ಅಕ್ಷರ ಗಾತ್ರ

ವರದಿ – ಅಬ್ದುಲ್ ಹಮೀದ್, ಪಡುಬಿದ್ರಿ

ಪಡುಬಿದ್ರಿ: ಸಾವಿರಾರು ಮಂದಿಗೆ ವಿದ್ಯಾದಾನ ನೀಡಿದ ಎರ್ಮಾಳು ಬಡಾದಲ್ಲಿರುವ ಮೀನುಗಾರಿಕಾ ಫಿಶರೀಸ್ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗ ವಿದ್ಯಾರ್ಥಿಗಳಿಲ್ಲದೆ ತಾತ್ಕಾಲಿಕವಾಗಿ ಮುಚ್ಚಿದೆ. ಕಾಲೇಜು ವಿಭಾಗವೂ ಮುಚ್ಚುವ ಹಂತದಲ್ಲಿದೆ.

ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 1963ರಲ್ಲಿ ಪ್ರೌಢಶಾಲೆ ಆರಂಭಿಸಲಾಯಿತು. ಬಳಿಕ ಪಿಯುಸಿ ಶಿಕ್ಷಣಕ್ಕೆ ದೂರದ ಊರಿಗೆ ಹೋಗುವುದನ್ನು ತಪ್ಪಿಸಲು ಈ ಶಾಲೆಯಲ್ಲಿಯೇ ಪಿಯುಸಿ ಶಿಕ್ಷಣ ಆರಂಭಿಸಬೇಕು ಎಂದು ಸರ್ಕಾರದ ಯೋಜನೆಯೊಂದಿಗೆ ಪಿಯುಸಿ ವಿಭಾಗ ಆರಂಭಿಸಲಾಯಿತು. 1982ರಲ್ಲಿ ಅಂದಿನ ಶಾಸಕ ದಿ.ಬಿ. ಭಾಸ್ಕರ್ ಶೆಟ್ಟಿ ಕಾಲೇಜು ವಿಭಾಗವನ್ನು ಉದ್ಘಾಟಿಸಿದ್ದರು. ಆ ಬಳಿಕ ಶಾಸಕರಾಗಿದ್ದ ದಿ.ವಸಂತ ವಿ. ಸಾಲ್ಯಾನ್, ಲಾಲಾಜಿ ಆರ್.ಮೆಂಡನ್, ವಿನಯ ಕುಮಾರ್ ಸೊರಕೆಯವರು ಶಾಲೆಯ ಅಭಿವೃದ್ಧಿಗೆ ವಿಶೇಷ ಮುತವರ್ಜಿ ವಹಿಸಿದ್ದರು. ಇಲ್ಲಿನ ಹಳೆ ವಿದ್ಯಾರ್ಥಿಗಳು, ಮೊಗವೀರ ಮುಂದಾಳುಗಳು, ಸ್ಥಳೀಯರು ಈ ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಮುಂಚೂಣಿಯಲ್ಲಿದ್ದರು.

4 ಎಕ್ರೆ ಪ್ರದೇಶದಲ್ಲಿ ಉತ್ತಮ ಪರಿಸರದಲ್ಲಿ ಸುಸಜ್ಜಿತ ಕಟ್ಟಡ, ಹೂದೋಟ, ಮೈದಾನ, ಹೊಸ ಕಟ್ಟಡಗಳ ನಿರ್ಮಾಣವಾಗಿದೆ. ಹೊಸದಾಗಿ ಕಾಲೇಜು ಕಟ್ಟಡವನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಇದೀಗ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳೇ ಇಲ್ಲದೆ ಇರುವುದರಿಂದ ಪ್ರೌಢಶಾಲೆ ವಿಭಾಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಪ್ರೌಢಶಾಲೆಯಲ್ಲಿ ಕಳೆದ ವರ್ಷ 13 ವಿದ್ಯಾರ್ಥಿಗಳಿದ್ದರು. 8ನೇ ತರಗತಿಯಲ್ಲಿ 4 ವಿದ್ಯಾರ್ಥಿಗಳಿದ್ದು, ಅವರಲ್ಲಿ ಇಬ್ಬರಿಗೆ ಮೂಳೂರಿನ ಶಾಲೆಯಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಉಳಿದಿಬ್ಬರು ಸೂಕ್ತ ವಾಹನ ವ್ಯವಸ್ಥೆಯಿಲ್ಲದೆ ಬೇರೆಡೆ ದಾಖಲಾತಿ ಪಡೆದಿದ್ದಾರೆ. ಈ ಬಾರಿ ದಾಖಲಾತಿ ನಡೆದಿಲ್ಲ. ವಿದ್ಯಾರ್ಥಿಗಳ ಕೊರತೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯಿಂದ ಕಳೆದ ವರ್ಷ ಅಂತಿಮ ಪರೀಕ್ಷೆ ನಡೆದಿದೆ.

ಇಲ್ಲಿಯ ಶಿಕ್ಷಕರನ್ನು ವಿವಿಧ ಕಡೆಗಳ ಶಾಲೆಗಳಿಗೆ ನಿಯೋಜನೆಗೊಳಿಸಲಾಗಿದೆ. ಅದರೊಂದಿಗೆ ವಾರದಲ್ಲಿ ಒಂದು ದಿನ ಈ ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ದಾಖಲೆಪತ್ರ ನೀಡಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆಡೆ ನಿಯೋಜನೆಗೊಂಡ ಎಲ್ಲಾ ಶಿಕ್ಷಕರಿಗೂ ಈ ಸಂಸ್ಥೆ ಮೂಲಕವೇ ಸಂಬಳ ಪಾವತಿಯಾಗುತ್ತಿದೆ. ಆದರೆ ಇಲಾಖೆಯ ದಾಖಲೆ ಪ್ರಕಾರ ತಾತ್ಕಾಲಿಕ ಮುಚ್ಚಲಾಗಿದೆ. ಮುಂದಿನ ವರ್ಷ ಮತ್ತೆ ವಿದ್ಯಾರ್ಥಿಗಳ ಹಾಜರಾತಿ ಆದಲ್ಲಿ ಮತ್ತೆ ತೆರೆಯುವ ಅವಕಾಶವಿದೆ.

ಹೊಸದಾಗಿ ನಿರ್ಮಿಸಲಾದ ಕಟ್ಡಡವೂ ಪಾಳುಬಿದ್ದಿದೆ. ಹಿಂದಿನ ಶಾಸಕ ಲಾಲಾಜಿ ಆರ್.ಮೆಂಡನ್ ಅವಧಿಯಲ್ಲಿ ಈ ಕಟ್ಟಡವನ್ನು ಹಾಸ್ಟೆಲ್ ಆಗಿ ಪರಿವರ್ತಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿತ್ತು. ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬಹುದು ಎಂದು ಚಿಂತನೆ ನಡೆಸಲಾಗಿತ್ತು.

ಇಲ್ಲಿ ಕಲಿತ ಸಾವಿರಾರು ಮಂದಿ ಉನ್ನತ ಹುದ್ದೆಯಲ್ಲಿದ್ದಾರೆ. ಉತ್ತಮ ಮೂಲಸೌಕರ್ಯ ಹೊಂದಿದ ಶಾಲೆಯನ್ನು ಉಳಿಸಲು ಹಲವು ಭಾರಿ ಪ್ರಯತ್ನ ನಡೆಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಕೊರತೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ, ಖಾಸಗಿ ಶಾಲೆಗಳಲ್ಲಿ ವಾಹನ ವ್ಯವಸ್ಥೆ ಇರುವುದರಿಂದ ಇಲ್ಲಿಗೆ ವಿದ್ಯಾರ್ಥಿಗಳ ಕೊರತೆ ಉಂಟಾಗಿದೆ. ಇದನ್ನು ಉಳಿಸಲು ಪ್ರಯತ್ನ ಮುಂದುವರಿಸುವುದಾಗಿ ಸ್ಥಳೀಯರು ಹೇಳುತ್ತಾರೆ.

ಸಮೀಪದಲ್ಲೇ ಖಾಸಗಿ ಶಾಲೆ: ಈ ಶಾಲೆಯಿಂದ 100 ಮೀಟರ್ ದೂರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಆಂಗ್ಲಮಾಧ್ಯಮ ಶಾಲೆಯೂ ಕಾರ್ಯಾಚರಿಸುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇಲ್ಲಿ ಪದವಿಪೂರ್ವ ವಿಭಾಗ ಆರಂಭವಾಗಲಿರುವ ಮಾಹಿತಿಯೂ ಹರಿದಾಡುತ್ತಿದ್ದು, ಅದು ನಡೆದಲ್ಲಿ ಇಲ್ಲಿನ ಪದವಿಪೂರ್ವ ಕಾಲೇಜು ಸಂಪೂರ್ಣವಾಗಿ ಮುಚ್ಚುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ವಿದ್ಯಾಪ್ರೇಮಿಗಳು.

ತಾತ್ಕಾಲಿಕ ಸ್ಥಗಿತ: ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ೦ ಆಗಿರುವುದರಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸಂಪೂರ್ಣ ಮುಚ್ಚಲು ಎರಡು ವರ್ಷಗಳ ಕಾಲಾವಕಾಶ ಇದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ವಿದ್ಯಾರ್ಥಿಗಳ ದಾಖಲಾತಿ ಆದಲ್ಲಿ ಮತ್ತೆ ತೆರೆಯಲಾಗುವುದು ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್.
ಸರಕಾರದ ಹೊಸದಾಗಿ ವಸತಿ ಶಾಲೆಗಳನ್ನು ನಿರ್ಮಿಸುವ ಯೋಜನೆ ಇದೆ. ಆ ಸಂದರ್ಭದಲ್ಲಿ ಈ ಶಾಲೆಯನ್ನು ಹೊಸ ಮಾದರಿಯಲ್ಲಿ ತೆರೆಯಲು ಅವಕಾಶವಿದೆ. ನಾರಾಯಣ ಗುರು ವಸತಿ ಶಾಲೆಯನ್ನು ತೆರೆಯುವ ಬಗ್ಗೆಯೂ ಚಿಂತನೆ ನಡೆದಿದೆ. ಮುಂದೆ ಇದನ್ನು ಸರ್ಕಾರ ತೀರ್ಮಾನಿಸಲಿದೆ ಎನ್ನುತ್ತಾರೆ.

ಶಾಲಾಭಿವೃದ್ಧಿ, ಕಾಲೇಜು ಅಭಿವೃದ್ಧಿ ಸಮಿತಿ ಸಂಸ್ಥೆಯನ್ನು ಉಳಿಸುವಂತೆ ಮನವಿ ನೀಡಿ ಚರ್ಚಿಸಿದ್ದಾರೆ. ಆಧುನಿಕ ತಂತ್ರಜ್ಞಾನದ ಶಿಕ್ಷಣಕ್ಕೆ ಒತ್ತು ನೀಡಿ ಸಂಸ್ಥೆ ಉಳಿಸುವುದರ ಬಗ್ಗೆ ಗಂಭೀರ ಪ್ರಯತ್ನ ಮಾಡಲಾಗುವುದು
–ಗುರ್ಮೆ ಸುರೇಶ್ ಶೆಟ್ಟಿ, ಶಾಸಕ 

‘ಸರ್ಕಾರವೇ ನಿರ್ಧರಿಸುತ್ತದೆ’

ಪದವಿಪೂರ್ವ ವಿಭಾಗದಲ್ಲಿ ಕಲಾ ವಿಭಾಗ ಮಾತ್ರವಿದ್ದು, 7 ವಿದ್ಯಾರ್ಥಿಗಳಿದ್ದಾರೆ. ಪ್ರಥಮ ಪಿಯುಸಿಗೆ ದಾಖಲಾತಿ ಆಗಿಲ್ಲ. 3 ನಿಯೋಜಿತ ಮತ್ತು 2 ಅತಿಥಿ ಉಪನ್ಯಾಸಕರಿದ್ದು, ಇಂಗ್ಲೀಷ್ ಭಾಷಾ ಉಪನ್ಯಾಸಕರಿಗಾಗಿ ಹುಡುಕಾಟ ನಡೆಯುತ್ತಿದೆ. ಇಲಾಖೆ ಮೂಲಕ ಸಂಸ್ಥೆಗೆ ಅಗತ್ಯ ಮೂಲಸೌಕರ್ಯ ಪ್ರಯತ್ನವಷ್ಟೇ ಮಾಡಲಾಗುತ್ತಿದೆ. ಉಳಿದೆಲ್ಲವನ್ನು ಸರ್ಕಾರವೇ ನಿರ್ಧರಿಸುತ್ತದೆ ಎಂದು ಡಿಡಿಪಿಯು ಮಾರುತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT